Advertisement

ಕಲ್ಲಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 113 ವರ್ಷಗಳ ಇತಿಹಾಸ

12:13 AM Dec 09, 2019 | Sriram |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಮೂಡುಬಿದಿರೆ: 1906ರಲ್ಲಿ ಕಲ್ಲಮುಂಡ್ಕೂರು ಮಾಲ್ದಬೆಟ್ಟು ಗುತ್ತುಮನೆ ಬಳಿಯ ದಾಸನಗೋಳಿ ಎಂಬಲ್ಲಿ ಪಾಲಡ್ಕ ಚರ್ಚ್‌ನ ಆಗಿನ ಧರ್ಮಗುರುಗಳು ಸ್ಥಾಪಿಸಿದ ಕಿರಿಯ ಪ್ರಾಥಮಿಕ ಶಾಲೆ 1935ರ ಸುಮಾರಿಗೆ ಬಾಯ್ಸ ಬೋರ್ಡ್‌ ಎಲಿಮೆಂಟರಿ ಶಾಲೆಯಾಗಿ ಶಿಕ್ಷಣ ಇಲಾಖೆ ದಾಖಲೆಯಲ್ಲಿ ಉಳಿದುಕೊಂಡಿದೆ. ಕಲ್ಲಮುಂಡ್ಕೂರಿನಲ್ಲಿ ಈಗ ಶಾಲೆ ಇರುವಲ್ಲಿ ಮೊದಲು ಹೆಣ್ಮಕ್ಕಳ ಶಾಲೆ ಇದ್ದಿತ್ತು. ಹಲವಾರು ವರ್ಷ ನಡೆದು ಒಂದೆರಡು ವರ್ಷ ನಿಂತು ಹೋಯಿತು. ಆ ವೇಳೆಗೆ ದಾಸನಗೋಳಿಯಲ್ಲಿದ್ದ ಹುಡುಗರ ಶಾಲೆ ಇಲ್ಲಿಗೆ ವರ್ಗಾಯಿಸಲ್ಪಟ್ಟಿತು. ಅಲ್ಲಿದ್ದ ಬೆಂಚು, ಕುರ್ಚಿಗಳೆಲ್ಲ ಇಲ್ಲಿಗೆ ಬಂದವು. 60-70ರ ದಶಕದಲ್ಲಿ ಈ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಒಂದು ಹಂತದಲ್ಲಿ ಇಲ್ಲಿನ ಮಕ್ಕಳ ಸಂಖ್ಯೆ 300ರ ಗಡಿ ದಾಟಿತ್ತು.

ಸುಸಜ್ಜಿತ ವ್ಯವಸ್ಥೆ
ಮಾಲ್ದಬೆಟ್ಟು ಜೈನ ಮನೆತನದವರು ಕೊಡುಗೆಯಾಗಿ ನೀಡಿದ ಜಾಗದಲ್ಲಿ ಕಲ್ಲಮುಂಡ್ಕೂರು ಶಾಲೆ ನಡೆಯುತ್ತಿದೆ. ದಾಸನಗೋಳಿ ಶಾಲೆಯಲ್ಲಿ ಓದಿ, ಆಗಿನ ಕಾಲದಲ್ಲೇ ಅಗ್ರಿಕಲ್ಚರ್‌ ಬಿಎಸ್ಸಿ. ಪದವೀಧರರಾಗಿ ಊರಲ್ಲೇ ಪ್ರಗತಿಪರ ಕೃಷಿಕರಾಗಿದ್ದ ಶ್ರೀಧರ ಪಡಿವಾಳರು, ಅವರ ಪುತ್ರ, ಕೋಟಿ ಖ್ಯಾತಿಯ ಸುಭಾಶ್ಚಂದ್ರ ಪಡಿವಾಳ್‌ ಶಾಲೆಗೆ ಕೊಠಡಿಗಳನ್ನೂ ನಿರ್ಮಿಸಿಕೊಟ್ಟಿದ್ದಾರೆ. ಶತಮಾನದ ಹಿಂದೆ ಇಲ್ಲೇ ಮಾಸ್ತರರಾಗಿದ್ದ ವಾಮನ ಕಾಮತರು ಮಾಸಿಕ ಸಂಬಳ 8 ರೂ., ಊರ ಸೊಸೈಟಿಯ ಲೆಕ್ಕ ನಿರ್ವಹಣೆಗೆ 3 ರೂ. ಮತ್ತು ಮಾಲ್ದಬೆಟ್ಟು ಗುತ್ತಿನ ಶ್ಯಾನುಭೋಗರಾಗಿ 3 ರೂ. ಸ್ವೀಕರಿಸಿ ಸಂಸಾರ ನಡೆಸುತ್ತಿದ್ದರಂತೆ!

ಈಗ ಬೇಬಿ ಸಿ. ಮುಖ್ಯೋಪಾಧ್ಯಾಯಿನಿ. ಇಬ್ಬರು ಸಹ ಶಿಕ್ಷಕಿಯರು, ಓರ್ವ ವಿಜ್ಞಾನ ಶಿಕ್ಷಕಿ, ಓರ್ವ ಗೌರವ ಶಿಕ್ಷಕಿ ಇದ್ದಾರೆ. ಇನ್ನೊಂದು ಹುದ್ದೆ ತೆರವಾಗಿದೆ. 1ರಿಂದ 7ನೇ ತನಕ ಒಟ್ಟು 97 ಮಂದಿ ವಿದ್ಯಾರ್ಥಿಗಳಿದ್ದಾರೆ. ಪಂಚಾಯತ್‌ನ ನಳ್ಳಿನೀರಿನ ಪೂರೈಕೆ ಇದೆ. ಶೌಚಾಲಯ, ಅಕ್ಷರ ದಾಸೋಹ ಕೊಠಡಿ ಇದೆ. ಐದು ಕಂಪ್ಯೂಟರ್‌ಗಳಿದ್ದು ಅದನ್ನು ರಿಪೇರಿ ಹಂತದಲ್ಲಿವೆ. ಉತ್ತರಭಾಗದಲ್ಲಿ ರಂಗಮಂದಿರ ನಿರ್ಮಾಣವಾಗುತ್ತಿದೆ. ಜಯಂತ ಕುಲಾಲ್‌ ಈಗಿನ ಎಸ್‌ಡಿಎಂಸಿ ಅಧ್ಯಕ್ಷರು.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಶ್ರೀಧರ ಪಡಿವಾಳ್‌ ಮಾಲ್ದಬೆಟ್ಟು , ಹಳೆಯ “ಕೋಟಿ’ ಖ್ಯಾತಿಯ ಸುಭಾಶ್ಚಂದ್ರ ಪಡಿವಾಳ್‌ (ರಂಗಭೂಮಿ, ಸಿನಿಮಾ, ಕೃಷಿ), ಹೊಟೇಲ್‌ ಉದ್ಯಮಿ ಅಣ್ಣಿ ಭಂಡಾರಿ ಬೆಳಗಾವಿ, ಅಂತಾರಾಷ್ಟ್ರೀಯ ಖ್ಯಾತಿಯ ದಾರುಶಿಲ್ಪಿ ಹರೀಶ್‌ ಆಚಾರ್ಯ, “ಮೂಡಾ’ ಆಯುಕ್ತ ಶ್ರೀಕಾಂತ ರಾವ್‌ ಕಾಯರಗುಡ್ಡೆ, ಹೋಮಿಯೋಪತಿ ವೈದ್ಯೆ ಶ್ರೀನಿಧಿ ಅಮರೇಶ್‌, ವಕೀಲ ಲಕ್ಷ್ಮಣ ಕುಲಾಲ್‌, ಸಹಕಾರಿ ವರದರಾಯ ಕಾಮತ್‌, ಹಿರಿಯರಾದ ವೆಂಕಟೇಶ ಕಾಮತ್‌, ಉದ್ಯಮಿಗಳಾದ ನಾಗರಾಜ ಕಾಮತ್‌ (ಗೇರು), ಶಾಂತಾರಾಮ ಕಾಮತ್‌ (ಪ್ಯಾಕೇಜಿಂಗ್‌), ಗಣೇಶ್‌ ಕಾಮತ್‌ (ಐಸ್‌ಕ್ರೀಂ ಕೋನ್‌), ಗಂಗಾಧರ ಕೋಟ್ಯಾನ್‌ (ಬಿಲ್ಡರ್‌, ಬಿಲ್ಲವ ಮುಖಂಡ), ಅರುಣ್‌ ಭಟ್‌(ಗುತ್ತಿಗೆದಾರ)ಕಾಲೇಜು ಪ್ರಾಚಾರ್ಯ, ಕೃಷಿಕ ಬೆರ್ನಾರ್ಡ್‌ ಕಡೋìಝಾ, ಹೈಸ್ಕೂಲ್‌ ಮುಖ್ಯಶಿಕ್ಷಕ ಭೋಜ ಪಾಣೆಮಂಗಳೂರು, ಮಂಜುನಾಥ ಭಟ್‌, ಶ್ರೀಧರ ಭಟ್‌ (ವೈದಿಕ), ರಂಗನಟ ಸತೀಶ್‌ ಅಮೀನ್‌, ನಾಟಕಕಾರ ಸುರೇಶ್‌ ಕುಲಾಲ್‌, ವ್ಯಂಗ್ಯಚಿತ್ರಕಾರ ಯತೀಶ್‌ ಶೆಟ್ಟಿಗಾರ್‌ ಬೆಂಗಳೂರು ಅಲ್ಲದೆ ಗುಂಡ್ಯಡ್ಕ ಸುರೇಶ್‌ ಅಂಚನ್‌ (ಸಿನೆಮಾ ಜಾಹೀರಾತು), ಜಯಂತ ಕುಲಾಲ್‌ (ಎಸ್‌ಡಿಎಂಸಿ ಅಧ್ಯಕ್ಷ), ಬ್ಲೆಸಿಟಾ ಕಡೋìಝಾ (ಬಿಎಸ್ಸಿಯಲ್ಲಿ ಚಿನ್ನ, ಎಂಎಸ್ಸಿಯಲ್ಲಿ ರ್‍ಯಾಂಕ್‌), ಜಗತ್ಪಾಲ ಭಂಡಾರಿ, ಗಣೇಶ್‌ ಭಟ್‌ ಕೊಪ್ಪಂದಡ್ಕ (ಕೃಷಿ), ಅರವಿಂದ ರಾವ್‌ ಮಾಯಣ (ಜಾಹೀರಾತು).

Advertisement

ಪ್ರಶಸ್ತಿ ಪುರಸ್ಕೃತರು
ಸೆಲೆಸ್ತಿನ್‌ ಸಲ್ಡಾನ್ಹಾ ಅವರಿಗೆ ಜನಮೆಚ್ಚಿದ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ. ಶತಮಾನದ ಹಿಂದೆ ವಾಮನ ಕಾಮತ್‌, ವಾಸ್‌ ಮಾಸ್ಟ್ರೆ, ಪಿಯದ್‌ ಮಾಸ್ಟ್ರೆ, ಕಿಟ್ಟಣ್ಣ ಮಾಸ್ಟ್ರೆ, ಸಾಲ್ವದೋರ್‌ ಮಾಸ್ಟ್ರೆ, ಕೇಂಜ ಕೃಷ್ಣಯ್ಯ, ಶಿವಪ್ಪ ಗೌಡ (ಬಹುಭಾಷಾ ಕುಶಲಿಗ), ಭೀಮರಾವ್‌ ಕೈದಬೆಟ್ಟು, ಅಲೆಕ್ಸ್‌ ಅರಾನ್ಹಾ ಕಲ್ಲಕುಮೇರ್‌, ಜಯರಾಮ ಭಟ್‌ (ಮದ್ದಳೆವಾದಕ), ರಾಮಕೃಷ್ಣ ಭಟ್‌ ತನ್ನಗುಳಿ (ನೃತ್ಯ ಪ್ರವೀಣ), ಸುಶೀಲಾ ಟೀಚರ್‌, ಗೋಪಾಲಕೃಷ್ಣ ಭಟ್‌, ಮಹಾಬಲ ನಾಯ್ಕ, ನಿರ್ಮಲಾ ರೇವಣRರ್‌, ವಿನಯಕುಮಾರ್‌, ರಾಜಮ್ಮ, ಬಹಳ ಹಿಂದೆ ಹೆಣ್ಮಕ್ಕಳ ಶಾಲೆಯಾಗಿದ್ದಾಗ ಅಲ್ಬಿನ್‌ ಟೀಚರ್‌ ಶಾಲೆಗೆ ಮುಖ್ಯ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಊರವರ ಸಹಕಾ ರದಿಂದ ಶಾಲೆ ಅಭಿವೃದ್ಧಿ ಕಂಡಿದೆ. ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಶ್ರಮಿಸುತ್ತಿದ್ದಾರೆ
-ಬೇಬಿ ಸಿ. ,
ಮುಖ್ಯೋಪಾಧ್ಯಾಯಿನಿ

ಮಾಲ್ದಬೆಟ್ಟು ಮನೆತನದ ಕೃಪಾ ಕಟಾಕ್ಷದಿಂದ ಪೇಟೆಯ ನಡುವೆ ಅರಳಿದ ಶಾಲೆ. ಇಲ್ಲಿ ಕಲಿತವರು ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಕಡಿಮೆಯಾಗುತ್ತಿರುವ ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಊರವರೆಲ್ಲರೂ ಪ್ರಯತ್ನಿಸಬೇಕಾಗಿದೆ.
-ಕೆ. ವರದರಾಯ ಕಾಮತ್‌
ಹಳೆ ವಿದ್ಯಾರ್ಥಿ

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next