Advertisement

“ಅನ್ಯ ಭಾಷೆ ಕಲಿತರೂ ಕನ್ನಡದಲ್ಲಿ ಉಸಿರಾಡುವುದೇ ಕನ್ನಡ ಪ್ರೀತಿ’

04:11 PM Dec 24, 2017 | Team Udayavani |

ಮಳವಳ್ಳಿ (ಷಡಕ್ಷರ ದೇವ ವೇದಿಕೆ): “ಕನ್ನಡ’ ಕೀಳರಿಮೆಗೆ ಕಾರಣವಾಗಬಾರದು. ಕನ್ನಡ ಪ್ರೀತಿ ಎಂದರೆ ಅನ್ಯ ಭಾಷೆಗಳನ್ನು ಕಲಿಯದಿರುವುದಲ್ಲ, ದೂಷಿಸುವುದಲ್ಲ, ಬದಲಿಗೆ ಕನ್ನಡದಲ್ಲೇ ಉಸಿರಾಡುವುದು. ಇತರೆ ಭಾಷಿಗರನ್ನು ಪ್ರೀತಿಯಿಂದ ಒಲಿಸಿಕೊಂಡು ಕನ್ನಡದ ಹಿರಿಮೆಯನ್ನು ಮನದಟ್ಟು ಮಾಡಬೇಕಾಗಿದೆ ಎಂದು 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದರು. “ಕನ್ನಡಾಭಿಮಾನ’ ಎಂದರೆ ನಮ್ಮ ದೇಶದ ಹಾಗೂ ಹೊರ ದೇಶದ ಎಷ್ಟು ಭಾಷೆಗಳನ್ನಾದರೂ ಕಲಿತು ಕರ್ನಾಟಕ ಮತ್ತು ಕನ್ನಡಿಗರೊಡನೆ ಕನ್ನಡದಲ್ಲೇ ಮಾತನಾಡುವುದು. ಇಲ್ಲಿ ನೆಲೆಸಿರುವ ಇತರೆ ಭಾಷಿಗರಿಗೆ ಕನ್ನಡ ಸಾಹಿತ್ಯ, ಕನ್ನಡದ ಸಿರಿ-ಸಂಪತ್ತನ್ನು ಪರಿಚಯಿಸುವುದು. ದಿನಕ್ಕೆ ಒಂದು ಕನ್ನಡ ಪತ್ರಿಕೆ, ತಿಂಗಳಿಗೆ ಒಂದಾದರೂ ಕನ್ನಡ ಕೃತಿಗಳನ್ನು ಖರೀದಿಸಿ ಓದುವುದು. 

ನಮ್ಮ ಮಕ್ಕಳು ಯಾವ ಮಾಧ್ಯಮದಲ್ಲೇ ಕಲಿಯುತ್ತಿರಲಿ, ಯಾವ ದೇಶದಲ್ಲೇ ಇರಲಿ ಅವರನ್ನು ಭೇಟಿಯಾಗುವಾಗ, ಮೊಬೈಲ್‌ನಲ್ಲಿ ಮಾತನಾಡುವಾಗ ಕನ್ನಡವನ್ನೇ ಉತ್ಛರಿಸುವುದು. 

ಅಜ್ಜ-ಅಜ್ಜಿಯರು ಕಷ್ಟಪಟ್ಟು ಹರುಕು-ಮುರುಕು ಇಂಗ್ಲಿಷ್‌ ಕಲಿತು ವಿದೇಶದಲ್ಲಿರುವ ಮೊಮ್ಮಕ್ಕಳೊಡನೆ ಮಾತನಾಡುವುದಕ್ಕಿಂತ ಕನ್ನಡದಲ್ಲೇ ಮಾತನಾಡಿದರೆ ಕಿರಿಯರಿಗೆ ಕನ್ನಡ ಕಲಿಸಿದಂತೆಯೂ ಆಗುತ್ತದೆ ಎಂದು ತಿಳಿಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಶಾಸಕ ಚೆಲವರಾಯಸ್ವಾಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ಮಾಜಿ ಶಾಸಕ ಎಚ್‌.ಬಿ.ರಾಮು, ಜಿಪಂ ವಿರೋಧಪಕ್ಷದ ನಾಯಕ ಹನುಮಂತು, ತಾಪಂ ಅಧ್ಯಕ್ಷ ಆರ್‌.ಎನ್‌.ವಿಶ್ವಾಸ್‌, ಪುರಸಭೆ ಅಧ್ಯಕ್ಷ ರಿಯಾಜಿನ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪುಟ್ಟರಾಮು, ನಿರ್ದೇಶಕ ಮಲ್ಲಯ್ಯ, ಜಿಪಂ ಸದಸ್ಯರಾದ ಚಂದ್ರಕುಮಾರ್‌, ಬಿ.ರವಿ, ಸುಷ್ಮಾ ರಾಜು, ಸುಜಾತ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next