Advertisement

ಅಶೋಕನ ನೆಲದಲ್ಲಿ ಮೊಳಗಲಿದೆ ಕನ್ನಡ ಕಹಳೆ

04:23 PM Feb 13, 2021 | Team Udayavani |

ಮಸ್ಕಿ: ದೇವನಾಂಪ್ರೀಯ ಖ್ಯಾತಿಯ ಅಶೋಕನ ನಾಡು ಮಸ್ಕಿಯಲ್ಲೀಗ ನುಡಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದದ್ದರಿಂದ ಸಾಹಿತ್ಯಾಸಕ್ತರೆಲ್ಲರೂ ನುಡಿ ತೇರು ಎಳೆಯಲು ಉತ್ಸುಕರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ಮಸ್ಕಿ ಪಟ್ಟಣದಲ್ಲಿ ತಾಲೂಕು ಮಟ್ಟದ ಮೊಲದ ಕನ್ನಡ ಸಾಹಿತ್ಯ ಸಮ್ಮೇಳನ ಫೆ.14ರಂದು ಆಯೋಜಿಸಿದೆ.

Advertisement

ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಒಂದು ದಿನದ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲ ಪೂರ್ವ ತಯಾರಿಗಳು ನಡೆದಿವೆ. ಬಳಗಾನೂರಿನ ಸಾಹಿತಿ ವೇ.ಮೂ. ಶರಭಯ್ಯಸ್ವಾಮಿ ಗಣಾಚಾರಿ ಕಂಬಾಳಿಮಠ ಅವರನ್ನು ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಳೆದೊಂದು ವಾರದಿಂದ ಸಾಹಿತ್ಯ ಸಮ್ಮೇಳನದ ಲಾಂಛನ, ಆಹ್ವಾನ ಪತ್ರಿಕೆ ಬಿಡುಗಡೆ, ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ ನೀಡುವುದು ಸೇರಿ ಎಲ್ಲ ಕಾರ್ಯಗಳು ನಡೆದಿವೆ.

ವೈವಿಧ್ಯಮಯ: ಮೊದಲ ತಾಲೂಕು ಸಾಹಿತ್ಯ ಸಮ್ಮೇಳನದ ವೇದಿಕೆಗೆ ಇಲ್ಲಿನ ಭಾವೈಕ್ಯತೆಯ ನೆಲವೀಡು ಸಂತೆಕಲ್ಲೂರಿನ “ಘನಮಠೇಶ್ವರ ಶಿವಯೋಗಿಗಳ’ ಹೆಸರಿಡಲಾಗಿದೆ. ಮಂಟಪಕ್ಕೆ “ಸಾನಬಾಳ ರಾಮಣ್ಣ’, ಮಹಾದ್ವಾರವನ್ನು “ಷ.ಬ್ರ. ಷಡಕ್ಷರಾನಂದ ಶಿವಾಚಾರ್ಯರ’ ಹೆಸರಿಡಲಾಗಿದೆ. ಇವುಗಳ ಸ್ಥಾಪನೆ ಕಾರ್ಯವೂ ಭರದಿಂದ ಸಾಗಿದೆ. ಇನ್ನು ಮೊದಲ ಸಾಹಿತ್ಯ ಸಮ್ಮೇಳನ ರಾಯಚೂರು ವಿವಿ ಕುಲಪತಿ ಡಾ| ಹರೀಶ ರಾಮಸ್ವಾಮಿಯವರನ್ನು ಉದ್ಘಾಟನೆಗೆ
ಆಯ್ಕೆ ಮಾಡಲಾಗಿದ್ದು, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಾಹಿತ್ಯ, ಸಾಂಸ್ಕೃತಿಕ ಲೋಕ ಅನಾವರಣಕ್ಕೆ ವೈವಿಧ್ಯಮಯ ಕಾರ್ಯಕ್ರಮ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ.

ಎರಡು ಗೋಷ್ಠಿ: ಒಂದು ದಿನದ ಸಮ್ಮೇಳನವಾಗಿದ್ದರಿಂದ ಎರಡು ಗೋಷ್ಠಿಗಳು ಹಾಗೂ ಒಂದು ಕವಿಗೋಷ್ಠಿ ಆಯೋಜಿಸಲಾಗಿದೆ. ಮತ್ತೂಂದು ವಿಶೇಷ ಉಪನ್ಯಾಸ, ಬಹಿರಂಗ ಅಧಿವೇಶನ ಬಳಿಕ ಕಾರ್ಯಕ್ರಮ ಸಮಾರೋಪವಾಗಲಿದೆ. ಜಿಲ್ಲೆಯ ಸಾಹಿತಿಗಳು, ಸಂಶೋಧಕರು ಹಾಗೂ ಅಧಿಕಾರಿ ವರ್ಗ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲ ಗೋಷ್ಠಿಯಲ್ಲಿ “ಮಸ್ಕಿ-ಐತಿಹಾಸಿಕ ಹಿನ್ನೆಲೆ’, “ಮಸ್ಕಿ ನೂತನ ತಾಲೂಕು ಹೊಸ ದೃಷ್ಟಿ’, “ಸಂತೆ ಮತ್ತು ಜಾತ್ರೆಗಳು’ ವಿಷಯ ಕುರಿತು ಉಪನ್ಯಾಸ, ವಿಷಯ ಮಂಡನೆ ನಡೆಯಲಿದ್ದರೆ, ಎರಡನೇ ಗೋಷ್ಠಿಯಲ್ಲಿ “ಮಾಧ್ಯಮ ಬೆಳವಣಿಗೆ’, “ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ’, “ಮಹಿಳೆಯರು ಮತ್ತು ಸಾಧನೆಗಳು, ಸವಾಲುಗಳು’ ಕುರಿತು ಚರ್ಚೆ ನಡೆಯಲಿದೆ.

Advertisement

ಕವಿಗೋಷ್ಠಿ: ಮಧ್ಯಾಹ್ನ ಊಟದ ವಿರಾಮದ ಬಳಿಕ ಕವಿಗೋಷ್ಠಿ ನಡೆಯಲಿದ್ದು ಸಾಹಿತಿ ಗುಂಡುರಾವ್‌ ದೇಸಾಯಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಶರೀಫ್‌ ಹಸ್ಮಕಲ್‌ ಆಶಯ ನುಡಿ ವ್ಯಕ್ತಪಡಿಸಲಿದ್ದಾರೆ. ಸುಮಾರು 18ಕ್ಕೂ ಹೆಚ್ಚು ಕವಿಗಳು ಸಮ್ಮೇಳನದಲ್ಲಿ ತಮ್ಮ ಕಾವ್ಯ ಪ್ರಸ್ತುತ ಪಡಿಸಲಿದ್ದಾರೆ. ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸವನ್ನೂ ಆಯೋಜಿಸಲಾಗಿದ್ದು, ಸಿಂಧನೂರಿನ ವೈದ್ಯ, ಮಕ್ಕಳ ತಜ್ಞ ಡಾ| ಕೆ.ಶಿವರಾಜ “ವಚನಗಳಲ್ಲಿ ಆರೋಗ್ಯ’ ವಿಷಯ ಕುರಿತು ಮಾತನಾಡಲಿದ್ದಾರೆ. ಬಹಿರಂಗ ಅಧಿವೇಶನ, ಸನ್ಮಾನ ಸಮಾರಂಭ ಬಳಿಕ ಸಾಹಿತ್ಯ ಸಮ್ಮೇಳನದ ಸಮಾರೋಪ ನಡೆಯಲಿದೆ.

ಮಸ್ಕಿಯಲ್ಲಿ ಮೊದಲ ಬಾರಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಸಮ್ಮೇಳನದಲ್ಲಿ ಹಲವು ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನ್ನಡಾಸಕ್ತರೆಲ್ಲರೂ ಭಾಗವಹಿಸಿ ಯಶಗೊಳಿಸಬೇಕು.
ಘನಮಠದಯ್ಯ
ತಾಲೂಕು ಕಸಾಪ ಅಧ್ಯಕ್ಷ ಮಸ್ಕಿ

ಮಸ್ಕಿ ನೂತನ ತಾಲೂಕು ಘೋಷಣೆ ಬಳಿಕ ಇಲ್ಲಿ ಸಮ್ಮೇಳನ ನಡೆಸುತ್ತಿರುವುದರಿಂದ ಇಲ್ಲಿನ ಕವಿಗಳು, ಬರಹಗಾರರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ನಾಡು-ನುಡಿ ಬಗ್ಗೆ ಎಲ್ಲರಲ್ಲೂ ಅಭಿಮಾನ ಬೆಳೆಸಲು ಸಮ್ಮೇಳನಗಳು ಸಹಕಾರಿ.
ಡಾ| ಶರೀಫ್‌ ಹಸ್ಮಕಲ್‌,
ಯುವ ಸಾಹಿತಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next