Advertisement

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

03:41 AM Jun 22, 2021 | Team Udayavani |

ಕನ್ನಡದ ವಿಷಯಗಳಿಗೆ ಸಂಬಂಧಪಟ್ಟಂತೆ ಕನ್ನಡಿಗರು ದನಿ ಎತ್ತಿದರೆ ಮಾತ್ರ ಕನ್ನಡಕ್ಕಾಗುವ ಅನ್ಯಾಯಗಳನ್ನು ಸರಿಪಡಿಸಬಹುದು. ಇದಕ್ಕೆ ತಾಜಾ ಉದಾಹರಣೆ ಎಂದರೆ ಲೋಕಸಭಾ ಸಚಿವಾಲಯ ಸಂಸದರಿಗೆ ಆನ್‌ಲೈನ್‌ ಭಾಷಾ ಕಲಿಕಾ ವಿಷಯಗಳಲ್ಲಿ “ಬಿಡಲಾದ ಕನ್ನಡ’ವನ್ನು ಸೇರಿಸಿಕೊಂಡಿರುವುದು.

Advertisement

ಲೋಕಸಭಾ ಸಚಿವಾಲಯದ ಅಡಿಯಲ್ಲಿ ಬರುವ ಪಾರ್ಲಿಮೆಂಟರಿ ರಿಸರ್ಚ್‌ ಅಂಡ್‌ ಟ್ರೆ„ನಿಂಗ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಡೆಮಾಕ್ರಸಿ ಸಂಸ್ಥೆ ಬಿಡುಗಡೆ ಮಾಡಿದ ಕಲಿಕಾ ತರಗತಿಗಳ ಭಾಷಾ ಪಟ್ಟಿಯಲ್ಲಿ ಕನ್ನಡ ಇರಲಿಲ್ಲ. ಮಂಗಳವಾರದಿಂದ (ಜೂ.22) ಸಂಸತ್‌ ಸದಸ್ಯರಿಗೆ, ಶಾಸಕರಿಗೆ ಮತ್ತು ಅಧಿಕಾರಿಗಳು ಮತ್ತವರ ಕುಟುಂಬದವರಿಗಾಗಿ ಆರು ವಿದೇಶಿ ಮತ್ತು ಆರು ಭಾರತೀಯ ಭಾಷೆಗಳನ್ನು ಆನ್‌ಲೈನ್‌ ತರಗತಿ ಮೂಲಕ ಕಲಿಸಲು ಸಂಸ್ಥೆ ಮುಂದಾಗಿತ್ತು. ಆದರೆ ಕನ್ನಡವನ್ನು ಬಿಟ್ಟಿರುವುದು ಕನ್ನಡಿಗರ ಬೇಸರಕ್ಕೆ ಮತ್ತು ಒಂದರ್ಥದಲ್ಲಿ ಸಿಟ್ಟಿಗೂ ಕಾರಣವಾಯಿತು.

ವಿಶೇಷ ಎಂದರೆ ಪ್ರತೀ ಬಾರಿ ಕನ್ನಡವನ್ನು ಅವಗಣನೆ ಮಾಡುವ ಪ್ರವೃತ್ತಿ ಕೇಂದ್ರೀಯ ಸಂಸ್ಥೆಗಳಲ್ಲಿ ಹೆಚ್ಚಿದೆ. ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು ಮಾತ್ರ ಅವರ ಕಣ್ಣಿಗೆ ಬಿದ್ದಿರುವುದು ಪ್ರಶ್ನಾರ್ಹ. ಪಾರ್ಲಿಮೆಂಟರಿ ರಿಸರ್ಚ್‌ ಅಂಡ್‌ ಟ್ರೆ„ನಿಂಗ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಡೆಮಾಕ್ರಸಿ ಸಂಸ್ಥೆ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಬೆಂಗಾಲಿ, ಗುಜರಾತಿ, ಮರಾಠಿ, ಒಡಿಯಾ ಭಾಷೆಗಳು ಸೇರಿಕೊಂಡಿದ್ದವು. ವಿದೇಶಿ ಭಾಷೆಗಳಾದ ಫ್ರೆಂಚ್‌, ಜರ್ಮನ್‌, ಜಪಾನೀಸ್‌, ಪೋರ್ಚುಗೀಸ್‌, ರಷ್ಯನ್‌ ಮತ್ತು ಸ್ಪ್ಯಾನೀಶ್‌ ಭಾಷೆಗಳನ್ನು ಹೇಳಿಕೊಡಲಾಗುತ್ತದೆ ಎಂದರೆ ದೇಶದ ಪುರಾತನ ಭಾಷೆಗಳಲ್ಲೊಂದಾದ ಕನ್ನಡಕ್ಕೇಕೆ ಕಡೆಗಣನೆ?

ಸುದೀರ್ಘ‌ ಇತಿಹಾಸ ಹೊಂದಿರುವ ಹಾಗೆಯೇ ಶಾಸ್ತ್ರೀಯ ಭಾಷೆ ಯೆಂದು ಸಂವಿಧಾನದತ್ತವಾಗಿ ಪರಿಗಣಸಲ್ಪಟ್ಟಿರುವ ಕನ್ನಡಕ್ಕೆ ಈ ರೀತಿಯ ಅವಗಣನೆಗೆ ಯಾರು ಕಾರಣ ಎಂಬುದನ್ನೂ ನಾವು ಆಲೋಚಿಸ ಬೇಕಾಗಿದೆ. ನಮ್ಮ ನಾಯಕರಲ್ಲಿ ರಾಜಕೀಯ ಇಚ್ಚಾಶಕ್ತಿ ಇಲ್ಲದಿರುವುದೇ ಎಂಬುದನ್ನು ಆತ್ಮಾವಲೋಕಿಸಬೇಕಿದೆ.

ದಕ್ಷಿಣ ಭಾರತ ಅಂದರೆ ಸಾಮಾನ್ಯವಾಗಿ ಮದ್ರಾಸಿಗರು ಎಂದು ಕರೆಯುವ ಪದ್ಧತಿ ಈ ಹಿಂದೆ ಇತ್ತು. ಬ್ರಿಟಿಷರ ಕಾಲದಿಂದಲೂ ಇದು ಬಂದಿದೆ. ಈಗ ತಮಿಳಿನ ಜತೆಗೆ ತೆಲುಗು ಸೇರಿಸಿಕೊಂಡಿದೆ. ಕೇರಳ ಮತ್ತು ಕರ್ನಾಟಕದ ಭಾಷೆಗಳನ್ನು ಬಿಡಲಾಗಿದೆ. ಇದು ಸಂವಿಧಾನದ 8ನೇ ಪರಿಚ್ಚೇದದ ಉಲ್ಲಂಘನೆಯಾಗಿದೆ ಎಂದು ಕನ್ನಡ ಪರ ಹೋರಾಟಗಾರರು ನೆನಪಿಸಿದ ಬಳಿಕವೇ ಎಚ್ಚೆತ್ತುಕೊಂಡು ಈಗ ಕನ್ನಡ ಮತ್ತು ಮಲಯಾಳ ಭಾಷೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

Advertisement

ಒಟ್ಟಿನಲ್ಲಿ ಕನ್ನಡಕ್ಕೆ ಜಯವಾಗಿದೆ. ಆದರೆ ಪ್ರತೀ ಸಂದರ್ಭದಲ್ಲಿ ಕನ್ನಡವನ್ನು ಅವಗಣನೆ ಮಾಡುವ ಜಾಯಾಮಾನವನ್ನು ಸರಕಾರಿ ಸಂಸ್ಥೆಗಳು ಕೈಬಿಡಬೇಕು. ಈಗಲೂ ಕರ್ನಾಟಕದಲ್ಲೇ ಆಂಗ್ಲ ಭಾಷೆಯಲ್ಲಿ ಆದೇಶಗಳನ್ನು, ಸುತ್ತೋಲೆಯನ್ನು ಹೊರಡಿಸುವ ಅಧಿಕಾರಿಗಳು ನಮ್ಮಲ್ಲೇ ಇದ್ದಾರೆ. ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಆಗಿಂದಾಗ್ಗೆ ಪ್ರಶ್ನಿಸುತ್ತಲೇ ಇದೆ. ಒಂದರ್ಥದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ, ಗೌರವ ನೀಡುವ ಪ್ರಕ್ರಿಯೆ ರಾಜ್ಯದಿಂದಲೇ ಆರಂಭವಾಗಬೇಕು. ಜತೆಗೆ ದಿಲ್ಲಿ ಮಟ್ಟದಲ್ಲೂ ನಮ್ಮ ರಾಜ್ಯದ ರಾಜಕಾರಣಿಗಳು ಪಕ್ಷಾತೀತವಾಗಿ ದನಿ ಎತ್ತಬೇಕು. ಜತೆಗೆ, ಕನ್ನಡ ಪರ ಚಿಂತಕರು ದನಿಯೆತ್ತುತ್ತಿರಬೇಕು. ಸಾಂ ಕ ಒತ್ತಡದಿಂದ ಮಾತ್ರ ಕನ್ನಡದ ಗೌರವವನ್ನು ಹೆಚ್ಚಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next