ಸಿಂಧನೂರು: ಜಂಜಾಟದ ಬದುಕಿನಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಸಂಗೀತ ಆಲಿಸುವುದರಿಂದ ಒತ್ತಡದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ವೆಂಕಟಗಿರಿ ಕ್ಯಾಂಪ್‌ನ ಸಿದ್ಧರಾಮ ಶರಣರು ಹೇಳಿದರು.
ಸಂಗೀತಧಾಮ ಕರೋಕೆ ಹಾಗೂ ಅಖೀಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಸಂಗೀತಧಾಮ ಕರೋಕೆ ಸಿಂಗಿಂಗ್ ಸ್ಟುಡಿಯೋ ವಾರ್ಷಿಕೋತ್ಸವ ಅಂಗವಾಗಿ ಇತ್ತೀಚೆಗೆ ನಗರದ ಕೋಟೆ ಈರಣ್ಣ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಕೋಗಿಲೆ ಗಾಯನ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಆಧುನಿಕ ಭರಾಟೆಯಲ್ಲಿ ಮನುಷ್ಯ ಬದುಕಿನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಕಷ್ಟಗಳನ್ನು ಎದುರಿಸುತ್ತಿದ್ದಾನೆ. ಹೀಗಾಗಿ ನೆಮ್ಮದಿ ಇಲ್ಲದ ಬದುಕು ನಮ್ಮದಾಗುತ್ತಿದೆ. ಇವೆಲ್ಲವನ್ನು ಮರೆಸುವಂತಹ ಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.
ಡಾ| ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಅಂಧರಾದರೂ ಸಂಗೀತದಿಂದಲೇ ಅಸಂಖ್ಯಾತ ಭಕ್ತರ ಪಾಲಿನ ಆರಾಧ್ಯದೈವರಾದರು. ಇಂದಿನ ಹೈಟೆಕ್ ಬದುಕಿನ ಜೀವನ ಶೈಲಿಗೆ ಅಂಟಿಕೊಂಡಿರುವ ಮನುಷ್ಯ ಸಂಗೀತ ಸೇರಿದಂತೆ ನೆಮ್ಮದಿ ಬದುಕಿಗೆ ಸ್ಪೂರ್ತಿಯಾದ ಹಲವು ಸಾಂಸ್ಕೃತಿಕ ಕಲೆಗಳನ್ನು ಮರೆತು ಹೋಗಿದ್ದಾನೆ. ಆದ್ದರಿಂದ ಕೆಲಸದ ಒತ್ತಡದ ಮಧ್ಯೆ ಸ್ವಲ್ಪ ಸಂಗೀತದತ್ತ ಮನಸು ಹರಿಸಿ ಎಂದು ಹೇಳಿದರು.
ನೇತ್ರ ತಜ್ಞ ಡಾ| ಚನ್ನನಗೌಡ ಪಾಟೀಲ ಮಾತನಾಡಿ, ಎಷ್ಟೇ ಕೆಲಸಗಳ ಒತ್ತಡವಿದ್ದರೂ ಒಂದು ಗಂಟೆ ಸಂಗೀತ ಆಲಿಸಬೇಕು. ಬದುಕಿನ ಕಷ್ಟ, ಜಂಜಾಟಗಳನ್ನು ಮರೆಸುವ ಮತ್ತು ಉಲ್ಲಾಸದ ಬದುಕಿನತ್ತ ಕೊಂಡೊಯ್ಯುವ ಸಂಗೀತದ ಪ್ರೇಮಿಗಳಾಗಬೇಕು ಎಂದರು.
ಅರುಣೋದಯ ಪಬ್ಲಿಕ್ ಸ್ಕೂಲ್ ವೀರೇಶ ಅಗ್ನಿ, ನಿವೃತ್ತ ಶಿಕ್ಷಕ ಧರಯ್ಯ ಮಾಸ್ತರ, ಚುಟುಕು ಕವಿ ವಿ.ಸಿ. ಪಾಟೀಲ, ಚಿತ್ರನಟ ವೀರೇಶ ನಟೇಕಲ್, ಶರಣಯ್ಯಸ್ವಾಮಿ ರಾರಾವಿ, ಕಲಾವಿದರಾದ ಶಿವಲೀಲಾ ಹಿರೇಮಠ, ಸುಮತಿ ಶಾಸ್ತ್ರಿ ಬೆಂಗಳೂರು, ಶಿವಸ್ವಾಮಿ ಯಲಬುರ್ಗಾ, ಪ್ರಶಾಂತ ಕಿಲ್ಲೇದ, ಲಕ್ಷ್ಮಿದೇವಿ, ಮಧುಶ್ರೀ ಇದ್ದರು.