ಬದಿಯಡ್ಕ : ಬೇಳ ವಿಷ್ಣುಮೂರ್ತಿ ನಗರದಲ್ಲಿ 2001ರಲ್ಲಿ ಸ್ಥಾಪನೆಗೊಂಡ ಸಿಂಧೂರ ಯುವಕ ವೃಂದವು ಇದೀಗ ಎ. 5 ರಂದು ನಡೆಯುವ ಒತ್ತೆಕೋಲದಂದು ಬಹು ವಿಜೃಂಭಣೆಯ 18 ನೇಯ ವರ್ಷಾಚರಣೆ ಹಮ್ಮಿಕೊಂಡಿದೆ. ಊರಿನ ಬಾಲಪ್ರತಿಭೆ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕುಮಾರಿ ಅಪೇಕ್ಷಾ ಪೈ ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ
ವಿಷ್ಣು ಮೂರ್ತಿ ನಗರದ ಯುವಕರನ್ನು ಒಗ್ಗೂಡಿಸಿದ ಬೇಳ ದಿ| ದೂಮಣ್ಣ ಮಾಸ್ತರ್, ದಿ| ನಾರಾಯಣ ಪೋಲೀಸ್ ಹಾಗೂ ದಿ| ಗೋವಿಂದ ಮಣಿಯಾಣಿಯವರ ಮಾರ್ಗದರ್ಶನ ಸ್ಥಾಪಿತವಾದ ಸಿಂಧೂರ ಯುವಕ ವೃಂದವು ಪ್ರತೀ ಎರಡು ವರ್ಷಗಳಿಗೊಮ್ಮೆ ಜರಗುವ ಒತ್ತೆಕೋಲದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸನ್ಮಾನ ಕಾರ್ಯಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ.
ಅಲ್ಲದೆ ಊರಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಉಚಿತ ಟ್ಯೂಷನ್, ನುರಿತ ವೈದ್ಯರುಗಳನ್ನು ಕರೆಸಿ ಉಚಿತ ಮೆಡಿಕಲ್ ಕ್ಯಾಂಪ್, ಕ್ರೀಡೆಗೆ ಪ್ರೋತ್ಸಹವನ್ನು ನೀಡಲು ಕ್ರಿಕೆಟ್, ಕಬಡಿ, ಹಗ್ಗಜಗ್ಗಾಟ ಮೊದಲಾದ ಆಟೋಟಗಳನ್ನು ಆಯೋಜಿಸಿದೆ.
ಅಶಕ್ತರಿಗೂ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಹಾಯ, ಕ್ಲಬ್ ಸದಸ್ಯರ ಚಿಕಿತ್ಸಾ ಸಹಾಯವನ್ನು ನೀಡುತ್ತದೆ. ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರಮದಾನ ಸೇವೆಯನ್ನು ನೀಡುವಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಹೆಗ್ಗಳಿಕೆಯೂ ಸಿಂಧೂರ ಯುವಕ ವೃಂದಕ್ಕಿದೆ. ಎ. 5ರಂದು ಸಂಭ್ರಮದಿಂದ ತನ್ನ 18 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಿಂಧೂರ ಯುವಕ ವೃಂದವು ಈ ಬಾರಿ ಊರಿನ ಹಿರಿಯರಾದ ವಿಷ್ಣುಮೂರ್ತಿ ಸೇವಾ ಸಮಿತಿಯ ಕೋಶಾಧಿಕಾರಿ ಏಣಿಯರ್ಪು ಚೋಯಿ ಮಣಿಯಾಣಿ ಹಾಗೂ ಏಣಿಯರ್ಪು ಕೋದಂರ್ಬತ್ತ್ ತರವಾಡಿನ ಪ್ರಧಾನ ಪೂಜಾರಿ ಬಾಲಕೃಷ್ಣರನ್ನು ಗೌರವಿಸಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾಗಿರುವ ಶ್ರೀಧರ ಪ್ರಸಾದ್ ಮಾಸ್ತರ್ ವಹಿಸಲಿರುವರು.
ತಂತ್ರಿವರ್ಯರಾದ ಉಳಿಯತ್ತಾಯ ಬ್ರಹ್ಮ ಶ್ರೀ ವೇ.ಮೂ. ವಿಷ್ಣು ಅಸ್ರ ಗೌರವಾರ್ಪಣೆ ಮಾಡಲಿರುವರು. ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮಾಸ್ತರ್, ಸಿಂದೂರ ಯುವಕ ವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ , ಕಾರ್ಯದರ್ಶಿ ಪುಷ್ಪರಾಜ್ ರೈ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 9 ಗಂಟೆಗೆ ಸಿಂಧೂರ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗಾಯ್ಸ ಕುಡ್ಲ ಕ್ವೀನ್ಸ್ ಮಂಗಳೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಜರಗಲಿದೆ.