Advertisement

ಕನ್ನಡ ಕನ್ನಡ.. ಬರ್ರಿ ನಮ್ಮ ಸಂಗಡ

09:23 AM Nov 24, 2017 | |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆಗೆ ಸಜ್ಜಾಗಿದೆ.

Advertisement

ಮೈಸೂರು ಸಂಸ್ಥಾನವನ್ನಾಳಿದ ಯದುವಂಶದ ಅರಸರ ಪೈಕಿ ಅಭಿವೃದ್ಧಿಯ ಹರಿಕಾರ, ಜನರ ಅರಸ ಎನಿಸಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ದೂರದೃಷ್ಟಿಯಿಂದ ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಐದನೇ ಬಾರಿಗೆ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. “ಕನ್ನಡ ಕನ್ನಡ, ಬರ್ರಿ ನಮ್ಮ ಸಂಗಡ’ ಎಂದು ಕನ್ನಡಿಗರ ಕಿಚ್ಚು ಹೆಚ್ಚಿಸಿದ್ದ ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಸಮ್ಮೇಳನ ನಡೆಯಲಿದೆ.

ಅರಮನೆ ನಗರಿಯ ಪ್ರಮುಖ ವೃತ್ತಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕಟೌಟ್‌ಗಳು, ಪ್ರಮುಖ ರಸ್ತೆ, ವೃತ್ತಗಳಲ್ಲಿ ಕನ್ನಡ ಬಾವುಟ ಹೋಲುವಂತೆ ಕೆಂಪು-  ಹಳದಿ ಬಣ್ಣದ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಅಲ್ಲದೇ, ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಸಮ್ಮೇಳನಕ್ಕೆ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. 27
ವರ್ಷಗಳ ನಂತರ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮ ಹೆಚ್ಚೇ ಇದೆ. ಮೈಸೂರು ಅರಮನೆಯ ದರ್ಬಾರ್‌ ಹಾಲ್‌ ಮಾದರಿಯಲ್ಲಿ 135 ಅಡಿ ಅಗಲ ಹಾಗೂ 38 ಅಡಿ ಉದ್ದದ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಯಾವುದೇ ರೀತಿಯಲ್ಲಿ ಅಡೆತಡೆಯಾಗದಂತೆ ಮಧ್ಯದಲ್ಲಿ ಯಾವುದೇ ಕಂಬಗಳಿಲ್ಲದಂತೆ 250 ಅಡಿ ಅಗಲ, 550 ಅಡಿ ಉದ್ದದ ಬೃಹತ್‌ ಸಭಾಮಂಟಪ ನಿರ್ಮಿಸಲಾಗಿದೆ. ಸಭಾಮಂಟಪದ ಕೊನೆಗೆ ಕುಳಿತವರಿಗೆ ಕಾರ್ಯಕ್ರಮ ಸ್ಪಷ್ಟವಾಗಿ ಕಾಣಲಿ ಎಂಬ ಉದ್ದೇಶದಿಂದ ಎಂಟು ಅಡಿ ಅಗಲ, ಆರು ಅಡಿ ಉದ್ದದ ಹತ್ತು ಎಲ್‌ಇಡಿ ಪರದೆಗಳನ್ನು ಹಾಕಲಾಗಿದ್ದು, 35 ಸಾವಿರ ಜನರಿಗೆ ಮಹಾಮಂಟಪದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.

ಪುಸ್ತಕ ಮೇಳ
ಮುಖ್ಯ ವೇದಿಕೆಯ ಎಡ ಭಾಗದಲ್ಲಿನ ನ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಪುಸ್ತಕ ಮೇಳಕ್ಕೆ ವ್ಯವಸ್ಥೆ ಮಾಡಲಾಗಿದ್ದು, 448 ಪುಸ್ತಕ ಮಳಿಗೆಗಳು, 250 ವಾಣಿಜ್ಯ ಮಳಿಗೆಗಳು, 17 ಚಿತ್ರಕಲಾ ಪ್ರದರ್ಶನದ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಏಕೆ ವಿಶೇಷ?
ಸಾಂಸ್ಕೃತಿಕ ನೆಲೆವೀಡು, ಹಲವು ಸಾಹಿತಿಗಳಿಗೆ ತವರು ಮನೆ ಎನಿಸಿದೆ ಮೈಸೂರು
ಕನ್ನಡ ಸಾಹಿತ್ಯ ಪರಿಷತ್‌ ಹುಟ್ಟಿನ ಬೇರು ಇರುವುದೇ ಇಲ್ಲಿ 
ಕನ್ನಡ ಚಳವಳಿಯ ಹುಟ್ಟೂರು ಇದು ಎಂಬ ಹೆಗ್ಗಳಿಕೆ
ಸಮಾಜವಾದಿ ಹಿನ್ನೆಲೆಯ ಹೋರಾಟಕ್ಕೂ ಮೈಸೂರು ಕೇಂದ್ರಬಿಂದು
ಚುನಾವಣೆ ವರ್ಷದ ಹಿನ್ನೆಲೆ 
ಯಾವ ಸಮ್ಮೇಳನಕ್ಕೂ ಸಿಗದಷ್ಟು ಅನುದಾನ, 8 ಕೋಟಿ ರೂ. 

Advertisement

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣ ಹೆಸರು
ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ ಹೆಸರು
ಶ್ರೀ ಮಲೆ ಮಹದೇಶ್ವರ ಸಭಾಮಂಟಪದ ಮುಖ್ಯದ್ವಾರದ ಹೆಸರು
35,000 ಮಹಾ ಮಂಟಪದಲ್ಲಿ ಆಸನ ವ್ಯವಸ್ಥೆ
448 ಪುಸ್ತಕ ಮಳಿಗೆಗಳು

ಇಂದು ಏನು?
ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ
11ಕ್ಕೆ ಸಿಎಂ ಸಿದ್ದ ರಾ ಮಯ್ಯ ಚಾಲನೆ

●ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next