Advertisement

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

12:26 AM Sep 20, 2024 | Team Udayavani |

ಬೆಂಗಳೂರು: ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪ ಸಮಾರಂಭವನ್ನು ಕನ್ನಡ ಜನೋತ್ಸವವಾಗಿ ಆಚರಿಸಲು ಸರಕಾರ ನಿರ್ಧರಿಸಿದ್ದು, ನ. 1 ರಂದು ವಿಧಾನಸೌಧದ ಮುಂಭಾಗದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.

Advertisement

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ ಮಾದರಿಗಳು, ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇವತ್ತಿನ ಕನ್ನಡ ಯುವಜನ ಸಮೂಹಕ್ಕೆ ತಲುಪಿಸಲು ಕ್ರಮ ಕೈಗೊಂಡಿದ್ದು, ಕನ್ನಡ ಭಾಷೆ-ಸಂಸ್ಕೃತಿ-ಸಂಗೀತ-ಸಾಹಿತ್ಯ-ಜನಪದ-ಚರಿತ್ರೆ ಎಲ್ಲದರ ಮಹತ್ವ ಸಾರಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

28 ಜಿಲ್ಲೆಗಳಲ್ಲಿ ಕನ್ನಡ ರಥಯಾತ್ರೆ ಸಂಪನ್ನ
ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲೂ ಕರ್ನಾಟಕ ಸುವರ್ಣ ಸಂಭ್ರಮದ ಕಂಪನ್ನು ಪಸರಿಸಲು ಹಂಪಿಯಿಂದ ಚಾಲನೆ ನೀಡಲಾದ ಕನ್ನಡ ರಥ ಯಾತ್ರೆಯು 28 ಜಿಲ್ಲೆಗಳಲ್ಲಿ ಸಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಥಯಾತ್ರೆಯ ಸಮಾರೋಪ ಆಗಲಿದೆ. ನ. 1ರಂದು ಸಿದ್ದಾಪುರದಿಂದ ಬೆಂಗಳೂರಿನ ವಿಧಾನಸೌಧಕ್ಕೆ ರಥಯಾತ್ರೆ ಬರಲಿದ್ದು, ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪದ ವೇಳೆ ಬರಮಾಡಿಕೊಳ್ಳಲಾಗುತ್ತದೆ.

ಇದೇ ವೇಳೆ ಕೊರಗ ಭಾಷೆಯಂತಹ ಸಣ್ಣ ಭಾಷೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲು ತಜ್ಞರ ಸಮಿತಿ ರಚಿಸುವಂತೆ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮನವಿ ಮಾಡಿದರು.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು
ಸೆ. 30 ಕೊನೆಯ ದಿನ
ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆ. 30ರ ವರೆಗೆ ಅರ್ಜಿ ಸಲ್ಲಿಸಬಹುದು. 69 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಿಎಂ ಹೇಳಿದರು.

Advertisement

ಮನೆ-ಮನೆಯಲ್ಲೂ
ಹಾರಲಿ ಕನ್ನಡ ಬಾವುಟ
ರಾಜ್ಯದ 4 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಿದ್ದು, ಮೈಸೂರಿನಲ್ಲಿ ಚಿಂತನಾ ಸಮಾವೇಶ, ರಾಯಚೂರಿನಲ್ಲಿ ಗೋಕಾಕ್‌ ಚಳವಳಿ ಸಂಸ್ಮರಣೆ, ಮಹಾರಾಷ್ಟ್ರದ ಜತ್‌ ತಾಲೂಕಿನಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಮತ್ತು ಮಂಗಳೂರಿನಲ್ಲಿ ವಿವಿಧ ಅಕಾಡೆಮಿ ಸಹಯೋಗದಲ್ಲಿ ಬಹುಸಂಸ್ಕೃತಿ ಉತ್ಸವ ಆಯೋಜನೆ ಮಾಡುವ ನಿರ್ಣಯವನ್ನೂ ಮಾಡಲಾಗಿದೆ. ಇದಲ್ಲದೆ, ಮನೆ ಮನೆಯಲ್ಲಿ ಕನ್ನಡ ಬಾವುಟವನ್ನು ಹಾರಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗುವುದು. ಕನ್ನಡದ ಸಾಹಿತಿಗಳ ನುಡಿಮುತ್ತುಗಳನ್ನು ಎಲ್ಲ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ ಮತ್ತಿತರ ಕಡೆಗಳಲ್ಲಿ ಪ್ರಚುರಪಡಿಸಬೇಕು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಟ್ಟಪ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next