ಬೆಳಗಾವಿ: ಅಕ್ಷರಗಳ ಹಂಗಿಲ್ಲದೆ ಮೌಖೀಕವಾಗಿ ತಾಯಿ ಮಗುವಿಗೆ ಕಲಿಸುವುದೇ ಮಾತೃಭಾಷೆ. ಇಂಥ ಭಾಷೆಯಿಂದ ಮಗು ತನ್ನ ಭಾವನೆಗಳನ್ನು ಸಂಪೂರ್ಣವಾಗಿ ಕಲಿಯಲು ಸಾಧ್ಯ. ಹೀಗಾಗಿ ಪ್ರತಿ ಮಗುವಿಗೆ ಕನಿಷ್ಟ ಕಿರಿಯ ಪ್ರಾಥಮಿಕ ಹಂತದವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ-ಅನ್ನದ ಭಾಷೆಯಾಗಬೇಕು ಎಂದು ಯುವಕವಿ ನದೀಂ ಸನದಿ ಹೇಳಿದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆ ಜಿಲ್ಲಾ ಘಟಕ ಹಾಗೂ ಕಣಬರಗಿಯ ಸಮತಾ ಶಾಲೆ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಸ್ವಪ್ರತಿಷ್ಠೆಯಿಂದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತಿದ್ದಾರೆ. ಕಲಿಕೆ-ಪರಿಸರದ ಭಾಷೆಗಳು ಭಿನ್ನವಾಗಿ ಮಕ್ಕಳಿಗೆ ಯಾವ ಭಾಷೆಯಲ್ಲೂ ಹಿಡಿತ ಬರಲಾರದು. ಮಕ್ಕಳಲ್ಲಿ ಹುದುಗಿದ ಅಂತಃಪ್ರಜ್ಞೆ ಅರಳುವಂತಾಗಬೇಕು. ವಿವಿಧ ಧರ್ಮ-ಭಾಷೆಗಳ ನಡುವೆ ಸಾಮರಸ್ಯ ಮೂಡುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಮಾತನಾಡಿ, ಉರ್ದು ಭಾಷಾ ಹೇರಿಕೆ ವಿರೋಧಿಸಿ ಬಾಂಗ್ಲಾ ದೇಶದ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯ ಉಳಿವಿಗಾಗಿ ಆರಂಭಿಸಿದ ಹೋರಾಟ ಉಗ್ರರೂಪ ತಾಳಿ 1952ರ ಫೆ. 21ರಂದು ಢಾಕಾ ವಿಶ್ವವಿದ್ಯಾನಿಲಯದ ನಾಲ್ಕು ವಿದ್ಯಾರ್ಥಿಗಳು ಪೊಲೀಸರ ಗುಂಡೇಟಿಗೆ ಬಲಿಯಾದರು. ಈ ಬಲಿದಾನದ ನೆನಪಿಗಾಗಿ ಯುನೆಸ್ಕೊ 1999ರ ನ.17ರಂದು ಫೆಬ್ರವರಿ 21ನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನಾಗಿ ಘೋಷಿಸಿತು ಎಂದು ಸ್ಮರಿಸಿದರು.
ಈ ಘೋಷಣೆಯಿಂದ ಅಳಿವಿನಂಚಿನಲ್ಲಿದ್ದ ವಿಶ್ವದ ಹಲವಾರು ಪ್ರಾದೇಶಿಕ ಭಾಷೆಗಳಿಗೆ ಮರುಜೀವ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಪರಿಶೀಲಿಸಿ ಆಯಾ ರಾಜ್ಯ ಭಾಷೆಯಲ್ಲಿ ಶಿಕ್ಷಣ ಮಾಧ್ಯಮವಾಗುವಂತೆ ಶಾಸನಾತ್ಮಕ ನಿರ್ಣಯ ಕೈಗೊಳ್ಳುವಂತಾಗಬೇಕು ಎಂದರು.
ಶಿಕ್ಷಕಿ ಪೂಜಾ ಪಾಟೀಲ ಕನ್ನಡ-ಕನ್ನಡಿಗ-ಕರ್ನಾಟಕ ವಿಷಯದ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಸ್ವಾಭಿಮಾನಿ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಾಲೀಕಜಾನ ಗದಗಿನ, ಶಾಲೆಯ ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ಪ್ರಾಂಶುಪಾಲರಾದ ತೇಜಸ್ವಿನಿ ಬಾಗೇವಾಡಿ, ಜಯಶ್ರೀ ನಾಯಕ, ಶಾಂತಾ ಮೋದಿ, ವಿ. ವಿಜಯಲಕ್ಷ್ಮೀ, ಅರುಣಾ ಪಾಟೀಲ, ತೇಜಸ್ವಿನಿ ನಾಯ್ಕರ್ ಉಪಸ್ಥಿತರಿದ್ದರು. ಪ್ರವೀಣ ದೇಶನೂರ ಸ್ವಾಗತಿಸಿದರು. ಭಾಗ್ಯಶ್ರೀ ಹಗೆದಾಳ ನಿರೂಪಿಸಿದರು. ಸೌರಭ ತಳವಾರ ವಂದಿಸಿದರು.