Advertisement

ಶಾಲೆಗಳಲ್ಲಿ ಕನ್ನಡ ಭಾಷೆಗೆ ನಿರ್ಲಕ್ಷ್ಯ ಸಲ್ಲ

07:22 AM Feb 04, 2019 | |

ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಜ.4ರಂದು ನಡೆಯಲಿರುವ ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

Advertisement

* ಕನ್ನಡ ಸಾಹಿತ್ಯ ಸಮ್ಮೇಳನಗಳು ಅಕ್ಷರ ಜಾತ್ರೆಯಾಗದೆ, ಮೋಜಿನ ಜಾತ್ರೆಗಳಾಗುತ್ತಿವೆ ಎಂಬ ಮಾತಿದೆ ನಿಮ್ಮ ಅಭಿಪ್ರಾಯ?
ನಿಜ, ಇದನ್ನು ನಾನು ಒಪ್ಪುತ್ತೇನೆ. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡಿಗರು ಒಂದೆಡೆ ಸೇರಿ ಚರ್ಚೆ ಮಾಡುವ ಅವಕಾಶ ನೀಡುವ ವೇದಿಕೆಗಳು. ಕನ್ನಡಿಗರು ಆಸಕ್ತಿಯಿಂದ ಸಮ್ಮೇಳನಗಳಲ್ಲಿ ಭಾಗವಹಿಸಿ ನಾಡು, ನುಡಿ, ನೆಲ, ಜಲದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚಿಸಿದರೆ ಆ ಸಮ್ಮೇಳನ ಸಾರ್ಥಕವಾಗುತ್ತದೆ.

* ಸಮ್ಮೇಳನದಲ್ಲಿನ ನಿರ್ಣಯಗಳು ಕಾಗದದಲ್ಲಿ ಮಾತ್ರ ಉಳಿಯುತ್ತಿದೆಯಲ್ಲವೆ?
ಸಮ್ಮೇಳನಗಳಲ್ಲಿ ನಡೆಯುವ ಗಂಭೀರ ಚರ್ಚೆಗಳು, ನಿರ್ಣಯಗಳು ವಿಧಾನ ಸಭೆಯ ಶಾಸನ ಸಭೆಯಲ್ಲಿ ಅನುಷ್ಠಾನಕ್ಕೆ ಕಾನೂನು ಆಗಬೇಕು. ಸಮ್ಮೇಳನದಲ್ಲಿನ ನಿರ್ಣಯಗಳು ಕಡ್ಡಾಯವಾಗಿ ಜಾರಿಯಗಬೇಕು. ಕನ್ನಡಿಗರಲ್ಲಿ ವಿಧಾನ ಸೌಧವನ್ನೇ ನಡುಗಿಸುವಂತಹ ಕೆಚ್ಚಿದೆ. ಸಮ್ಮೇಳನದ ನಿರ್ಣಯಗಳು ಜಾರಿಯಾಗದಿರುವ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಸರ್ಕಾರವನ್ನು ಪ್ರಶ್ನಿಸಬೇಕು.

* ಜಾನಪದ ಕಲೆ, ಸಾಹಿತ್ಯ ಕಡಗಣಿಸಿದರೆ ಕನ್ನಡ ಭಾಷೆಗೆ ಧಕ್ಕೆಯಾಗುವುದಿಲ್ಲವೆ?
ಕನ್ನಡ ಸಾಹಿತ್ಯದ ತಾಯಿ ಬೇರು ಜಾನಪದ. ಜಾನಪದ ಕಲೆ, ಸಾಹಿತ್ಯ ಹಳ್ಳಿಗಳಲ್ಲಿ, ಅನಕ್ಷರಸ್ಥರಲ್ಲಿ ಉಳಿದಿದೆ. ಇದು ವಿದ್ಯಾವಂತರು ‘ಕೆಲಸಕ್ಕೆ ಬಾರದ್ದು’ ಎಂದು ಕಡೆಗಣಿಸುತ್ತಿದ್ದಾರೆ. ಅಕ್ಷರಸ್ಥರು ತಾಯಿ ಬೇರು ಜಾನಪದವನ್ನು ಮರೆಯದೆ ಪರಿಗಣಿಸಬೇಕಿದೆ. ಪ್ರತಿ ಸಮಾವೇಶದಲ್ಲಿ ಜಾನಪದ ಕಲೆ, ಗೋಷ್ಠಿ ಯನ್ನು ಕಡ್ಡಾಯಗೊಳಿಸಿದರೆ ಜನಪದ ಉಳಿಸಬಹುದು. ಸಮ್ಮೇಳನದಲ್ಲಿ ಗಣ್ಯರನ್ನ ಸನ್ಮಾನಿಸುವ ಬದಲಾಗಿ ಜಾನಪದ ಕಲಾವಿದರನ್ನು ಗೌರವಿಸುವಂತಾಗಬೇಕು.

* ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ನಿರೀಕ್ಷಿತ ಗುಣಮಟ್ಟದಲ್ಲಿ ಇಲ್ಲ ಅನಿಸುತ್ತಿಲ್ಲವೆ?
ಈ ಬಗ್ಗೆ ಆರೋಪಗಳಿವೆ. ರಾಜ್ಯದಲ್ಲಿ ಕನ್ನಡಿಗರು ಬಡವರಲ್ಲ, ಇದನ್ನು ಕನ್ನಡಿಗರು ಮತ್ತು ಸರ್ಕಾರ ಇಬ್ಬರು ನೆನಪಿಸಿಕೊಳ್ಳಬೇಕು. ಸರ್ಕಾರಿ ಅಥವಾ ಖಾಸಗಿ ಶಾಲಾಗಳಿರಬಹುದು ಪ್ರಬುದ್ಧ ಕನ್ನಡ ಭಾಷಾ ಪಂಡಿತರನ್ನು ನೇಮಕ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಸುಧಾರಣೆ ಸಾಧ್ಯ.

Advertisement

* ಸರ್ಕಾರ 1000 ಕನ್ನಡ ಶಾಲೆಗಳನ್ನು ಇಂಗ್ಲಿಷ್‌ ಶಾಲೆಗಳನ್ನಾಗಿ ಪರಿವರ್ತಿಸಲು ಉದ್ದೇಶಿಸುತ್ತಿದೆ, ನಿಮ್ಮ ಅಭಿಪ್ರಾಯ?
ಕನ್ನಡ ಮಾಧ್ಯಮಿಕ ಶಾಲೆಗಳನ್ನು ಸರ್ಕಾರ ಇಂಗ್ಲಿಷ್‌ ಮಾಧ್ಯಮವನ್ನಾಗಿಸುವ ಅಗತ್ಯವಿಲ್ಲ. ಯಾವುದೇ ಸರ್ಕಾರಗಳಾಗಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಮಾತೃ ಭಾಷೆಯನ್ನು ಚೆನ್ನಾಗಿ ಕಲಿತವರಲ್ಲಿ ಇಂಗ್ಲಿಷ್‌ ಭಾಷೆಯನ್ನೂ ಸಹ ಕಲಿಯುವ ಸಾಮಾರ್ಥ್ಯ ಜ್ಞಾನ ಬೆಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸ್ನಾತಕೋತ್ತರ ಪದವೀಧರರಿಗೂ ಕನ್ನಡ ಭಾಷಾ ಜ್ಞಾನದ ಕೊರತೆ ಕಾಣುತ್ತಿದ್ದೇವೆ. ಕೆಲವೇ ವರ್ಷಗಳನ್ನಾಳುವ ಸರ್ಕಾರಗಳು ಶಿಕ್ಷಣ ಮತ್ತುಭಾಷಾ ನೀತಿಯನ್ನು ತೀರ್ಮಾನ ಮಾಡಬಾರದು, ತಪ್ಪು ನಿರ್ಧಾರಗಳಿಂದ ಶಿಕ್ಷಣದ ವ್ಯವಸ್ಥೆಯೇ ಬುಡಮೇಲಾಗುವ ಸಾಧ್ಯತೆಗಳಿವೆ. ಭಾಷಾ ಪಂಡಿತರ ವಿಶ್ಲೇಷಣೆಯನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

* ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಸ್ವಾಗತವೇ?
ಸ್ವಾಗತ. ಆದರೆ, ಸರ್ಕಾರ ಪೋಷಕರೊಳಗೊಂಡಂತೆ ಉನ್ನತ ಶಿಕ್ಷಣ ಪಂಡಿತರ ಸಮಿತಿಯನ್ನು ರಚಿಸಿ ಚರ್ಚೆಗೆ ಬಿಡಿಬೇಕು. ಗಂಭೀರವಾಗಿ ಚರ್ಚೆಯಾದ ನಂತರ ಕಾನೂನಾತ್ಮಕವಾಗಿ ಜಾರಿಗೆ ತರಬೇಕು. ಏಕೆಂದರೆ ಶಾಲೆಗಳಲ್ಲಿ ಮಕ್ಕಳು ಕನ್ನಡ ಭಾಷೆಯನ್ನೇ ಸರಿಯಾಗಿ ಕಲಿಸದಿದ್ದರೆ ಬೇರೆ ಭಾಷೆಯನ್ನ ಹೇಗೆ ಕಲಿಯುತ್ತಾರೆ?

ನೀರು ಕುಡಿಯಲು ಆಗದವನಿಗೆ ಒತ್ತಾಯವಾಗಿ ಬಾಯಿಗೆ ಕಡುಬು ತುರುಕಿದಂತಾಗುತ್ತದೆ. ಆಂಗ್ಲ ಭಾಷೆಯಲ್ಲಿ ಬಲ್ಲ ಶಿಕ್ಷಕರನ್ನು ಶಾಲೆಗಳಿಗೆ ನೇಮಕ ಮಾಡಬೇಕು. ಮೂರು ವರ್ಷದಲ್ಲಿ ಅವರು ಇಂಗ್ಲಿಷ್‌ ಕಲಿಸುವ ಜವಾಬ್ದಾರಿ ನೀಡಬೇಕು. ಅವರ ಕಾರ್ಯಕ್ಷಮತೆ ಮತ್ತು ಮಕ್ಕಳಲ್ಲಿನ ಫ‌ಲಿತಾಂಶದಲ್ಲಿನ ಆಧಾರದ ಮೇಲೆ ಮುಂಬಡ್ತಿ ನೀಡಬೇಕು.

* ಖಾಸಗಿ ಶಾಲೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ಆರೋಪವಿದೆಯಲ್ಲ?
ಹೌದು. ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ, ತೃತೀಯ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಖಾಸಗಿ ಅನುದಾನಿತ, ಅನುದಾನ ರಹಿತ, ಸರ್ಕಾರಿ ಹೀಗೆ ಯಾವುದೇ ಶಾಲೆಯಾಗಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಬೇಕು. ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸಹ ಕನ್ನಡ ಭಾಷೆಯನ್ನು ಅರಿತಿರಬೇಕು ಎಂಬ ಕಡ್ಡಾಯ ನಿಯಮ ಜಾತಿಯಾಗಬೇಕು. ಕಾನೂನು ಬಲ ಮಾಡದಿದರೆ ಮಾತ್ರ ಖಾಸಗಿ ಶಾಲೆಗಳಲ್ಲಿಯೂ ಕನ್ನಡ ಭಾಷೆಗೂ ಪ್ರಾಮುಖ್ಯತೆ ಸಿಗುತ್ತದೆ.

* ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next