ತುಮಕೂರು: ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಎಲ್ಲರೂ ದುಡಿಯಬೇಕು ಎಂದು ಪ್ರಾಚೀನ ಕಾವ್ಯಗಳ ಪ್ರವಚನಕಾರ ಟಿ. ಮುರಳೀಕೃಷ್ಣಪ್ಪ ತಿಳಿಸಿದರು.
ತುಮಕೂರು ಹೊರವಲಯದ ಗೂಳೂರು ಸಮೀಪವಿರುವ ವರಿನ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷ ಸುದೀರ್ಘ ಇತಿ ಹಾಸವಿದೆ. ಪಂಪ, ರನ್ನ, ಜನ್ನ, ಕುಮಾರವ್ಯಾಸ ಕನ್ನಡ ಭಾಷೆಗೆ ವಿಶಿಷ್ಟಕೊಡುಗೆ ನೀಡಿದ್ದಾರೆ ಎಂದರು.
ಆದಿಕವಿ ಪಂಪ ಆರ್ ಅಂಕುಶವಿಟ್ಟೊಡಂ ನೆನೆವುದೆನ್ನ ಬನವಾಸಿ ದೇಶಮಂ ಎಂದು ಹೇಳುವ ಮೂಲಕ ಕನ್ನಡ ಮತ್ತು ಬನವಾಸಿ ಬಗ್ಗೆ ವಿಶೇಷ ಅಭಿಮಾನ ತೋರಿಸಿದ್ದಾನೆ. ಕನ್ನಡ ನಾಡಿನ ಸೌಂದರ್ಯ, ಕನ್ನಡ ಭಾಷೆಯ ಸವಿ, ಹೊಳೆಯ ಕಂಪು, ನಮ್ಮನ್ನು ಸೋಕಿದರೆ ಮನಸ್ಸಿಗೆ ಆನಂದವಾಗುತ್ತದೆ. ಇದೇ ಕಾರಣಕ್ಕೆ ಬನವಾಸಿ ನಾಡನ್ನು ಪಂಪ ಇಷ್ಟಪಡುತ್ತಿದ್ದ ಎಂದು ಹೇಳಿದರು.
ಬಿಎಂಶ್ರೀ ಹೇಳುವಂತೆ ಚೆಲುವು ತುಂಬಿದ ನಾಡಿನಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿತ್ತು. ಕನ್ನಡ ನಾಡಿನ ವಿಸ್ತಾರ, ಕನ್ನಡ ಕಲಿಗಳ ಶೌರ್ಯ, ಧೈರ್ಯ, ಹೃದಯ ಶ್ರೀಮಂತಿಕೆ ಎಂಥದ್ದು ಎಂಬುದನ್ನು ಕಾವ್ಯಗಳಲ್ಲಿ ವರ್ಣಿಸಲಾಗಿದೆ ಎಂದು ತಿಳಿಸಿದರು. ಶಿಕ್ಷಕ ಅನುಪಮ ಸಂತೋಷ್ ಮಾತನಾಡಿದರು. ಶಾಲಾ ಮಕ್ಕಳು ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಉತ್ತಮವಾಗಿ ನೃತ್ಯ ಮಾಡಿದ ನೀಲಿಮನೆ ಮಕ್ಕಳಿಗೆ ಪ್ರಥಮ ಬಹುಮಾನ, ಕೆಂಪು ಮನೆ ಮಕ್ಕಳಿಗೆ ದ್ವಿತೀಯ ಬಹುಮಾನ ನೀಡಲಾಯಿತು.
ಪ್ರಾಚೀನ ಕಾವ್ಯಗಳ ಪ್ರವಚನಕಾರ ಮುರುಳಿಕೃಷ್ಣಪ್ಪ ಸೇರಿ ಶಾಲೆಯ ಎಲ್ಲಾ ಕನ್ನಡ ಶಿಕ್ಷಕರನ್ನು ಗೌರವಿಸಲಾಯಿತು. ಶಾಲೆ ಮುಖ್ಯಸ್ಥ ಆರ್. ಕೃಷ್ಣಯ್ಯ, ವರಿನ್ ಪ್ರೌಢಶಾಲೆ ಮುಖ್ಯಶಿಕ್ಷಕ ಕೃಷ್ಣಪ್ರಸಾದ್, ಉಪಪ್ರಾಂಶುಪಾಲ ಶಿವಕುಮಾರ್ ಇತರರಿದ್ದರು.