Advertisement

ಸಂಸತ್‌ನಲ್ಲಿ ಕನ್ನಡದ ಕಹಳೆ

09:25 AM Nov 01, 2018 | Team Udayavani |

ಬೆಂಗಳೂರು: ಒಕ್ಕೂಟದ ವ್ಯವಸ್ಥೆಯ ಪ್ರತೀಕದಂತಿರುವ ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದ ಕಂಪು ಹರಿಸಿದವರು ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌. ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು. ಈ ಅನಿರೀಕ್ಷಿತ ಪ್ರಸಂಗಕ್ಕೆ ಅವಕ್ಕಾದ ಕೆಲವರು ಆಕ್ಷೇಪ ಎತ್ತಿದರೆ ಹಲವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಸಮಾಜವಾದಿ ಚಿಂತನೆಯ ಹರಿಕಾರ ರಾಮ್‌ಮನೋಹರ್‌ ಲೋಹಿಯಾ, ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಸೇರಿದಂತೆ ಹಲವರು ಪಟೇಲರನ್ನು ಬೆಂಬಲಿಸಿದ್ದು ಈಗ ಇತಿಹಾಸ.

Advertisement

ಸುಮಾರು ಹತ್ತಕ್ಕೂ ಅಧಿಕ ಮಂದಿ ಸಂಸದರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಹಲವರು ಪ್ರಮಾಣ ವಚನ ಸ್ವೀಕರಿಸಿದವರು ಇದ್ದಾರೆ. ಅಂಥವರ ಸಾಲಿನಲ್ಲಿ ಕೇಂದ್ರ ಸಚಿವ ಅನಂತ್‌ ಕುಮಾರ್‌, ಚಾಮರಾಜ ನಗರ ಕ್ಷೇತ್ರದ ಮಾಜಿ ಸಂಸದ ಶಿವಣ್ಣ, ಚಿತ್ರದುರ್ಗ ಮೂಲದ ಎಚ್‌. ಹನುಮಂತಪ್ಪ (ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ) ಬೆಂಗಳೂರು ದಕ್ಷಿಣ ಕ್ಷೇತ್ರ
ಸಂಸದರಾಗಿದ್ದ ವೆಂಕಟಗಿರಿಗೌಡ, ಚಿಕ್ಕೋಡಿಯ ಶಂಕರ ನಾರಾಯಣ, ಬಳ್ಳಾರಿಯ ಬಸವರಾಜೇಶ್ವರಿ, ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಚಂದ್ರಶೇಖರ ಮೂರ್ತಿ ಅವರಿದ್ದಾರೆ. ಹಾಗೆಯೇ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದ ಇಂಡಿಯನ್‌ ಯೂನಿಯನ್‌ ಮುಸ್ಲಿಂನ ಶಾಸಕ ಅಬ್ದುಲ್‌ ರಜಾಕ್‌ ಕೂಡ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಡಿಂಡಿಮ ಬಾರಿಸಿದ್ದರು ಎಂಬುದು ಇಲ್ಲಿ ಸ್ಮರಣೀಯ. ಇತ್ತೀಚಿಗೆ ರಾಜ್ಯದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರಾದ ಕಾಂಗ್ರೆಸ್‌ನ ಡಾ.ಎಲ್‌.ಹನುಮಂತಯ್ಯ, ಕೆ.ಸಿ.ಚಂದ್ರಶೇಖರ್‌ ಕೂಡ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವೆಂಕಯ್ಯನಾಯ್ಡು ಪ್ರಶಂಸೆ: ಸಂಸತ್ತಿನೊಳಗೆ ಮೊದಲ ಬಾರಿಗೆ ನಾನು ಕನ್ನಡದಲ್ಲಿ ಮಾತನಾಡಿದಾಗ ತುಂಬಾ ಖುಷಿಯಾಯಿತು. ಕನ್ನಡ ಶ್ರೀಮಂತ ಭಾಷೆ. ಅದನ್ನು ಹೇಳಲು ಕೂಡ ಹೆಮ್ಮೆ ಅನಿಸಿತು. ಕನ್ನಡದಲ್ಲಿ ಮಾತನಾಡಿದಕ್ಕಾಗಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು ಎಂದು ರಾಜ್ಯಸಭಾ ಸದಸ್ಯ ಕೆ.ಸಿ ಚಂದ್ರಶೇಖರ್‌ ಕನ್ನಡಾಭಿಮಾನ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯಲ್ಲಿ ಕನ್ನಡ ಡಿಂಡಿಮ: ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹಿಂದಿಯಲ್ಲಿ ಭಾಷಣ ಮಾಡಿ ಚರಿತ್ರೆಯನ್ನು ನಿರ್ಮಿಸಿದ್ದರು. ಅದೇ ರೀತಿಯಲ್ಲಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಕೂಡ ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಿ ಇತಿಹಾಸದ ಪುಟ ಸೇರಿದಿದ್ದಾರೆ. ಕನ್ನಡ ಅದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅನಂತ್‌ ಕುಮಾರ್‌ ಸಂಸತ್‌ನಲ್ಲಿ ಹಾಗೂ ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಿದ್ದಾರೆ ಎಂದು ಸಿದ್ದಲಿಂಗಯ್ಯ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ನಮ್ಮ ನೆಲದ ಭಾಷೆಗಳ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ನಾನು ಸಂಸತ್‌ನಲ್ಲಿ ಕನ್ನಡದಲ್ಲೇ ಮಾತನಾಡಿದೆ. ಹೀಗೆ ಮಾತನಾಡುವುದರಿಂದ ಹಿಂದಿ ಮಾತನಾಡುವ ಸಂಸದರಿಗೂ ಇಂತಹದ್ದೊಂದು ಭಾಷೆ ಇದೆ ಎಂಬುವುದು ಗೊತ್ತಾಗುತ್ತದೆ.
● ಡಾ.ಎಲ್‌.ಹುನುಮಂತಯ್ಯ ರಾಜ್ಯಸಭಾ ಸದಸ್ಯ

Advertisement

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next