Advertisement

ಕಡಲಿನಾಚೆ ಕನ್ನಡ

08:29 PM May 18, 2019 | mahesh |

ಅಮೆರಿಕದ ಕನ್ನಡ ಸಾಹಿತ್ಯ ರಂಗ ಆಯೋಜಿಸುತ್ತಿರುವ ಒಂಬತ್ತನೆಯ ವಸಂತ ಸಾಹಿತ್ಯೋತ್ಸವ ನಿನ್ನೆ ಮತ್ತು ಇಂದು ನ್ಯೂಜೆರ್ಸಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಪ್ರಸ್ತುತಿಗೊಳ್ಳುತ್ತಿರುವ ಪ್ರಧಾನ ಭಾಷಣದ ಆಯ್ದ ಭಾಗವಿದು…

Advertisement

ಹದಿನೈದನೇ ಶತಮಾನದ ಅಂತ್ಯದಲ್ಲಿ ಯುರೋಪಿಯನ್ನರು ಭಾರತಕ್ಕೆ ದಾರಿಯನ್ನು ಹುಡುಕುವ ಇತಿಹಾಸ ನನಗೆ ಬಹಳ ಮುಖ್ಯವೆನ್ನಿಸುತ್ತದೆ. ಭಾರತಕ್ಕೆ ಬರುವ ಭೂಮಾರ್ಗ ಬಳಸಲು ಅವರಿಗೆ ಅಡ್ಡಿ-ಆತಂಕಗಳಿದ್ದವು. ಮೆಡಿಟರೇನಿಯನ್‌ ಮತ್ತು ಕೆಂಪು ಸಮುದ್ರವನ್ನು ಬಳಸಲು ಅರಬ್ಬ ದೇಶದ ಮುಸಲ್ಮಾನರು ಬಿಡುತ್ತಿರಲಿಲ್ಲ. ಜನಸಾಮಾನ್ಯರಲ್ಲಿ ಭಾರತದ ಮಸಾಲೆ ಪದಾರ್ಥಗಳಿಗೆ ಇನ್ನಿಲ್ಲದ ಬೇಡಿಕೆ ಏರ್ಪಟ್ಟಿತ್ತು. ವೆನಿಸ್‌ನ ವ್ಯಾಪಾರಿಗಳು ಮಸಾಲೆ ಪದಾರ್ಥಗಳನ್ನು ಒಂದಕ್ಕೆ ಹತ್ತು ಪಟ್ಟು ಅಧಿಕ ಲಾಭದಲ್ಲಿ ಮಾರುತ್ತಿದ್ದರು. ಈ ಹೊತ್ತಿನಲ್ಲಿ ವಾಸ್ಕೊ-ಡ-ಗಾಮಾ ಮತ್ತು ಕ್ರಿಸ್ಟೋಫ‌ರ್‌ ಕೊಲಂಬಸ್‌ರವರ ಸಾಹಸದ ಸಮುದ್ರಮಾರ್ಗ ಶೋಧ ನಿಜಕ್ಕೂ ಮೈನವಿರೇಳಿಸುತ್ತದೆ. ಸುಮಾರು 305 ದಿನಗಳ ಕಾಲ ಅತ್ಯಂತ ದುರ್ಗಮವಾದ ಅಟ್ಲಾಂಟಿಕ್‌ ಮತ್ತು ಹಿಂದೂ ಮಹಾಸಾಗರಗಳನ್ನು ದಾಟಿ ವಾಸ್ಕೋ-ಡ-ಗಾಮಾ ಕಲ್ಲಿಕೋಟೆಗೆ ಬಂದಿದ್ದು ಮೈನವಿರೇಳಿಸುವ ಸಾಹಸ ಕಥನವಾಗಿದೆ. ಅವನು ಹಿಂತಿರುಗಿ ಬಂದಾಗ ಸಂತೋಷ-ಸಂಭ್ರಮಗಳು ಮೇರೆ ಮೀರಿದ್ದವು. ಪೋರ್ಚುಗಲ್ಲಿನ ರಾಜ ಮಾನ್ಯುಯಲ್‌ ಇವನ ಪ್ರಯಾಣದ ಖರ್ಚುವೆಚ್ಚ ನೋಡಿಕೊಂಡಿದ್ದ. ಅದು ಅವನಿಗೆ ಅರವತ್ತು ಪಟ್ಟು ಅಧಿಕ ಲಾಭವನ್ನು ತಂದು ಕೊಟ್ಟಿತ್ತು. ಸಹಜವಾಗಿಯೇ ವಾಸ್ಕೋ-ಡ-ಗಾಮಾನನ್ನು ಶತಮಾನದ ಸಾಹಸಿ ಎಂದು ಕೊಂಡಾಡಲಾಯಿತು.

ಆದರೆ, ಭಾರತಕ್ಕೆ ದಾರಿ ಹುಡುಕಲು ಹೋಗಿ ಅಮೆರಿಕಾವನ್ನು ಕಂಡುಹಿಡಿದ ಕ್ರಿಸ್ಟೋಫ‌ರ್‌ ಕೊಲಂಬಸ್‌ ಮಾತ್ರ ಜನರ ನಗೆಚಾಟಿಕೆಗೆ ವಸ್ತುವಾಗಿ ಹೋಗಿದ್ದ. ಅವನ ಸಾಹಸದ ಯಾತ್ರೆಗೆ ಹಣವನ್ನು ಹೂಡಿದ್ದವಳು ಸ್ಪೇನಿನ ರಾಣಿ ಇಸಾಬೆಲ್ಲಾ. ಅದಕ್ಕೆ ಪ್ರತಿಯಾಗಿ ಅವಳಿಗೆ ಯಾವ ಲಾಭವೂ ದಕ್ಕಿರಲಿಲ್ಲ. ಅಮೆರಿಕದಲ್ಲಿ ಕೆಲವು ತಿಂಗಳುಗಳ ಕಾಲ ಕಳೆದ ಕೊಲಂಬಸ್‌ಗೆ ಯಾವ ಮಸಾಲೆ ಪದಾರ್ಥಗಳೂ ಸಿಕ್ಕಿರಲಿಲ್ಲ. ಕೇವಲ ಒಂದಿಷ್ಟು ಗುಲಾಮರನ್ನು ತನ್ನೊಡನೆ ಕರೆದುಕೊಂಡು ಹುಳ್ಳನಂತೆ ಮರಳಿದ್ದ. ಅವನು ವಾಪಸು ಯುರೋಪಿಗೆ ಬಂದಿಳಿದಿದ್ದು ಪೋರ್ಚ್‌ಗಲ್‌ ದೇಶಕ್ಕೇ ಆಗಿತ್ತು. ರಾಜ ಮಾನ್ಯುಯಲ್‌ಗೆ ಅವನನ್ನು ಕಂಡರೆ ಆಗುತ್ತಿರಲಿಲ್ಲ. ಬರೀ ಬಾಯಿಬಡುಕ ಎಂದು ಅವನನ್ನು ದೂರವಿಟ್ಟಿದ್ದ. ಈಗಂತೂ ಅವನನ್ನು ಕೊಲೆ ಮಾಡಲು ತನ್ನ ಜನರಿಗೆ ಆಜ್ಞೆ ಕೊಟ್ಟುಬಿಟ್ಟ. ಅದು ಹೇಗೋ ಕೊಲಂಬಸ್‌ ತಲೆಮರೆಸಿಕೊಂಡು ಸ್ಪೇನ್‌ ದೇಶಕ್ಕೆ ಓಡಿಹೋದ. ಆ ಹೊತ್ತಿನಲ್ಲಿ ಕೊಲಂಬಸ್‌ ಸಾಹಸಿಯೆಂದು ಯಾರಿಗೂ ಅನ್ನಿಸಿರಲಿಲ್ಲ.

ಐನೂರು ವರ್ಷಗಳ ಬಳಿಕದ ವಿಸ್ಮಯ
ಐದು ಶತಮಾನಗಳು ಕಳೆದ ನಂತರ ಈಗ ಈ ಸಂಶೋಧನೆಗಳ ಪ್ರಸ್ತುತಿಯನ್ನು ಗಮನಿಸಿದರೆ ನನಗೆ ಅಚ್ಚರಿಯಾಗುತ್ತದೆ. ಮಸಾಲೆ ಪದಾರ್ಥಗಳನ್ನು ಮೊಬೈಲ್‌ನಲ್ಲಿ ಆರ್ಡರ್‌ ಮಾಡಬಹುದಾದ ಹೊತ್ತಿನಲ್ಲಿ ವಾಸ್ಕೋ-ಡ-ಗಾಮಾನ ಸಂಶೋಧನೆ ಅರ್ಥಹೀನ ಎನ್ನಿಸುತ್ತದೆ. ವಿಶೇಷವೆಂದರೆ, ಕೊಲಂಬಸ್‌ ಮಹತ್ವದ ವ್ಯಕ್ತಿಯಾಗಿ ಕಾಣುತ್ತಾನೆ. ಇಡೀ ಜಗತ್ತು ನೆಟ್ಟಗಣ್ಣಿಂದ ನೋಡುವಂಥ ರಾಷ್ಟ್ರವನ್ನು ಕಂಡುಹಿಡಿದುಬಿಟ್ಟ ಸಾಹಸಿಯಾಗಿ ಅವನ ಸಾಧನೆ ಜಗತ್ತಿನಲ್ಲಿ ಮೆರೆಯುತ್ತಿದೆ. ಭಾರತಕ್ಕೆ ದಾರಿ ಕಂಡುಹಿಡಿಯುವ ಮಾತಂತಿರಲಿ, ಅಮೆರಿಕಕ್ಕೆ ಹೋಗಲು ಭಾರತೀಯರೇ ಒಂಟಿಕಾಲಲ್ಲಿ ನಿಂತಿರುವ ಹೊತ್ತಿದು. ಮಸಾಲೆ ಪದಾರ್ಥಗಳು ಮಹತ್ವ ಕಳೆದುಕೊಂಡು, ಕಚ್ಚಾ ತೈಲಕ್ಕೆ ಪ್ರಾಮುಖ್ಯ ಹೆಚ್ಚಾದ ಕಾಲ. ಭಾರತಕ್ಕೆ ವ್ಯಾಪಾರ ಮಾಡಲು ದುರ್ಗಮ ಸಮುದ್ರಯಾನ ಮಾಡಿ ಬರುತ್ತಿದ್ದ ಅರಬ್‌ ಮತ್ತು ಪರ್ಷಿಯನ್ನರ ನಾಡಿಗೆ, ಇಡೀ ಪ್ರಪಂಚವೇ ತೈಲದ ವ್ಯಾಪಾರಕ್ಕೆ ಎಡತಾಕುತ್ತಿರುವ ಕಾಲವಿದು.

ಕಾಲದ ಹರಿವು ಹೇಗೆ ಎಲ್ಲ ಸಂಗತಿಗಳನ್ನೂ ಬದಲಾಯಿಸಿ ಬಿಡುತ್ತದೆ ಎಂದು ನನಗೆ ಅಚ್ಚರಿಯಾಗುತ್ತದೆ. ಕ್ಷುಲ್ಲಕವನ್ನು ಶ್ರೇಷ್ಠವಾಗಿಸುವ, ಶ್ರೇಷ್ಠವನ್ನು ಕ್ಷುಲ್ಲಕವಾಗಿಸುವ ಅದರ ಜಾದೂ ನನ್ನನ್ನು ಮಂತ್ರಮುಗ್ಧನಾಗಿಸುತ್ತದೆ. ಯಾವುದೇ ಬದಲಾವಣೆಗಳನ್ನು, ಸಂಶೋಧನೆಗಳನ್ನು ಗಮನಿಸು ವಾಗ ಈ ಸಂಗತಿ ನನ್ನನ್ನು ಎಚ್ಚರಿಸುತ್ತಲೇ ಇರುತ್ತದೆ. ಯಾವ ಸದ್ಯವೂ ಶಾಶ್ವತವಲ್ಲ ಎಂಬ ಅರಿವು ನಮ್ಮಲ್ಲಿದ್ದರೆ, ಬದಲಾವಣೆಗಳನ್ನು ಗಮನಿಸುವುದು ಸುಲಭವಾಗುತ್ತದೆ. ಆದದ್ದೆಲ್ಲ ಒಳಿತೇ ಆಯಿತು ಎಂಬ ದಾಸವಾಣಿಯ ಸದಾಶಯ ಇದೇ ಆಗಿರಬೇಕು.

Advertisement

ಬಾಲ್ಯದ ಒಂದು ಘಟನೆ ನನಗೆ ನೆನಪಾಗುತ್ತದೆ. ನಮ್ಮೂರಿನ ಹುಡುಗನೊಬ್ಬ ಅದು ಹೇಗೋ ಕೊಲ್ಲಿ ರಾಷ್ಟ್ರಗಳಿಗೆ ಹೋಗಿಬಿಟ್ಟಿದ್ದ. ಸುಮಾರು ಮೂರು ವರ್ಷಗಳ ನಂತರ ವಾಪಸಾದಾಗ ಅವನನ್ನು ನಾವೆಲ್ಲಾ ಬಿಟ್ಟಗಣ್ಣಿಂದ ನೋಡಿದ್ದೆವು. ಅವನು ಆ ದೇಶದ ವಿಶೇಷ ಸಂಗತಿಗಳನ್ನು ನಮಗೆ ಹೇಳುತ್ತಿದ್ದ. ಅದರಲ್ಲಿ ನಮ್ಮನ್ನು ಬಹುವಾಗಿ ಕಾಡಿದ ಒಂದು ಸಂಗತಿಯೆಂದರೆ, ಅರಬ್‌ ದೇಶಗಳಲ್ಲಿ ಕುಡಿಯುವ ನೀರನ್ನು ಹಣ ಕೊಟ್ಟು ಕೊಳ್ಳಬೇಕು ಎಂಬುದಾಗಿತ್ತು. ಆ ವಿಷಯವನ್ನು ಕೇಳಿದ ನಮ್ಮಮ್ಮ ಎಷ್ಟೇ ಶ್ರೀಮಂತ ದೇಶವಾದರೇನು ಬಂತು. ಕುಡಿಯುವ ನೀರನ್ನು ಹಣ ಕೊಟ್ಟು ಕೊಳ್ಳುವ ದೇಶ ಸುಡುಗಾಡು ದೇಶವೇ ಸರಿ. ಅದಕ್ಕೇ ನಮ್ಮ ದೇಶವನ್ನ ಪವಿತ್ರಭೂಮಿ ಅನ್ನೋದು ಎಂದು ಭಾರತದ ಬಗ್ಗೆ ಬಡಾಯಿ ಕೊಚ್ಚಿದ್ದಳು. ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿ. ಎಲ್ಲರೂ ಕುಡಿಯುವ ನೀರನ್ನು ಹಣ ಕೊಟ್ಟು ಕೊಳ್ಳುತ್ತಿದ್ದೇವೆ. ಬಾಟಲಿಯ ನೀರು ಬಡವ-ಬಲ್ಲಿದರೆಲ್ಲರಿಗೂ ಸಹಜವಾಗಿ ಹೋಗಿದೆ. ಯಾವ ಗರ್ವಗಳೂ ಶಾಶ್ವತವಲ್ಲ ಎನ್ನುವ ಮತ್ತೂಂದು ಅರಿವು ಇದು ನನ್ನಲ್ಲಿ ಮೂಡಿಸಿದೆ.
.
.
ಪಂಪನಿಂದ ಪ್ರಾರಂಭವಾದ ನಮ್ಮ ಕನ್ನಡದ ಸಾಹಿತ್ಯ ಚರಿತ್ರೆ ವಿಶಾಲ ಆಲದ ಮರದಂತೆ ಹರಡಿಕೊಂಡಿದೆ. ಅದೆಷ್ಟು ಶಾಖೆಗಳು, ಅದೆಷ್ಟು ಬಿಳಲುಗಳು, ಅದೆಷ್ಟು ಬೇರುಗಳು, ಎಲೆ, ಪಕ್ಷಿ ಸಂಕುಲಗಳು- ಏನೆಲ್ಲಾ ಇಲ್ಲಿ ಸಂಭವಿಸಿದೆ. ಹಳೆ ಎಲೆಗಳು ಉದುರಿಹೋಗಿ ಹೊಸದು ಮೂಡಿವೆ. ಬಿಳಿಲುಗಳು ಮುಪ್ಪಡರಿ ಎಳೆಯವು ಬಲಿತಿವೆ. ಪಕ್ಷಿಗಳ ಸಂತತಿ ಮುಂದುವರೆಯುತ್ತಲೇ ಹೋಗಿದೆ. ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ನಮ್ಮ ಭಾಷೆಯ ಪಾತ್ರದ ಬಗ್ಗೆ ಹೆಮ್ಮೆಪಡುವಂತಹ ಬರವಣಿಗೆಯನ್ನು ನಮ್ಮ ಕನ್ನಡ ಸಾಹಿತ್ಯ ಪರಂಪರೆ ನೀಡಿದೆ.

ಸಾಹಿತ್ಯವೆಲ್ಲರಿಗಲ್ಲ ಎಂದು ಹಿರಿಯರು ಈ ಹಿಂದೆಯೇ ಹೇಳಿದ್ದಾರೆ. ಎಲ್ಲ ಕಾಲಕ್ಕೂ ಸಾಹಿತ್ಯದ ಬಳಗ ಚಿಕ್ಕದೇ ಆಗಿತ್ತು. ಆದ್ದರಿಂದ ಅದರ ಪ್ರಭಾವ, ಬದಲಾವಣೆ, ತರ್ಕಗಳೆಲ್ಲವೂ ಆ ಸೀಮಿತ ವಲಯಕ್ಕೆ ಮಾತ್ರ ಸೇರಿದ್ದಾಗಿರುತ್ತದೆ. ಎಲ್ಲೋ ಕೆಲವೊಮ್ಮೆ ವಿವಾದಗಳಾದಾಗ ಇಡೀ ಸಮಾಜ ಅದರಲ್ಲಿ ಭಾಗವಹಿಸಿದ್ದನ್ನು ಕಂಡಿದ್ದೇವೆ. ಸಮಾರಂಭವೊಂದರಲ್ಲಿ ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಒಂದು ಮಾತನ್ನು ಹೇಳಿದ್ದರು: ಪಂಪ ಬರೆದ ಭಾಷೆಯಲ್ಲಿಯೇ ಆ ಕಾಲದ ಜನರು ಮಾತನಾಡುತ್ತಿದ್ದರು ಎಂದು ಊಹಿಸುವುದು ತಪ್ಪಾಗುತ್ತದೆ. ಆಗಿನ ಜನಜೀವನದ ಕನ್ನಡ ಈವತ್ತಿನದಕ್ಕಿಂತಲೂ ಅಷ್ಟೇನೂ ಬೇರೆಯಾಗಿರಲಿಕ್ಕಿಲ್ಲ. ಬಹುಶಃ ಅದನ್ನೇ ಈಗಲೂ ಮಹಾದೇವರ ಕುಸುಮಬಾಲೆ ಕೃತಿಯ ಬಗ್ಗೆ ಹೇಳಬಹುದೇನೋ! ಅಷ್ಟಕ್ಕೂ ಇಡೀ ಕನ್ನಡನಾಡಿಗೇ ಸೀಮಿತವಾದ ಯಾವ ಕನ್ನಡ ನುಡಿಗಟ್ಟೂ ನಮ್ಮಲ್ಲಿಲ್ಲ. ಆದ್ದರಿಂದ, ಎಲ್ಲ ಸಾಹಿತ್ಯ, ಕನ್ನಡಗಳನ್ನೂ ಗೌರವಿಸುವುದು ನಮ್ಮ ಆಶಯವಾಗಿರಬೇಕು. ಕಾಲಘಟ್ಟದ ಆಡುನುಡಿಯ ಸತ್ಯಾಸತ್ಯತೆಗಳು ಅಕಾಡೆಮಿಕ್‌ ಆಸಕ್ತಿಗಳು ಮಾತ್ರ.

ಬದಲಾವಣೆಯೆನ್ನುವುದು ಸಮಾಜದ ಆರೋಗ್ಯದ ನಾಡಿಮಿಡಿತ; ನದಿಯ ನೀರಿನ ಹರಿವು. ನಡೆದ ಬದಲಾವಣೆಯ ಗುಣಾಗುಣದ ಚಿಂತೆಗಿಂತಲೂ ನಡೆಯದ ಸ್ಥಾವರ ಸ್ಥಿತಿಗೆ ಅಂಜಬೇಕು. ಆದ್ದರಿಂದ ಎಲ್ಲ ಬಗೆಯ ಬದಲಾವಣೆಗಳೂ ಒಂದರ್ಥದಲ್ಲಿ ಸ್ವಾಗತಾರ್ಹಗಳೇ ಆಗಿರುತ್ತವೆ. ಅನಂತರ ಅದನ್ನು ಸ್ವೀಕರಿಸುವ, ನಿರಾಕರಿಸುವ ನಿರ್ಧಾರವನ್ನು ಆರೋಗ್ಯವಂತ ಸಮಾಜ ಸರಿಯಾಗಿಯೇ ನಿರ್ಧರಿಸುತ್ತದೆ. ನಮ್ಮ ಮೂಲ ಧ್ಯೇಯ ಸಮಾಜದ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದರ ಕಡೆಗೆ ಇದ್ದರೆ ಅಂಜುವ ಆವಶ್ಯಕತೆ ಇರುವುದಿಲ್ಲ ಅನ್ನಿಸುತ್ತದೆ.

ಪಿತೃಹತ್ಯೆ ಪ್ರಗತಿಗೆ ದಾರಿ ಎಂಬ ವಾಕ್ಯವನ್ನು ವಿಶೇಷ ಅರ್ಥದಲ್ಲಿ ಕನ್ನಡ ಸಾಹಿತ್ಯದಲ್ಲಿ ಬಳಸುತ್ತಾರೆ! ಅಂದರೆ, ಸದ್ಯದಲ್ಲಿ ಯಶಸ್ವಿಯಾದ ಸಾಹಿತ್ಯ ಪ್ರಕಾರವನ್ನು ಒಡೆದು, ಹೊಸದನ್ನು ಕಟ್ಟುವುದು ಪ್ರಗತಿಯ ಲಕ್ಷಣವಾಗಿರುತ್ತದೆ. ನಮ್ಮ ಬಹುತೇಕ ಚಳುವಳಿಗಳು ಅದನ್ನು ಮಾಡುತ್ತಲೇ ಬಂದಿವೆ. ಪ್ರಗತಿಶೀಲರು ನವೋದಯವನ್ನು ಜರಿದರೆ, ನವ್ಯರು ಎರಡನ್ನೂ ತಮ್ಮದಲ್ಲವೆಂದು ಸಾರಿದರು. ಅನಂತರ ಬಂದ ಬಂಡಾಯ, ದಲಿತ ಚಳವಳಿಗಳು ಹಿಂದಿನ ಹೆ¨ªಾರಿಯನ್ನು ತೊರೆದು ತಮ್ಮ ದಾರಿಯನ್ನು ಕಂಡುಕೊಂಡರು. ಇವುಗಳ ನಡುವೆ ಮಹಿಳೆಯರು ತಮ್ಮ ಶೋಷಣೆಯನ್ನು ಸಾರಿ, ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟುಹಾಕಿದರು. ಆದರೆ, ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ಎಲ್ಲ ಚಳವಳಿಯಲ್ಲಿಯೂ ಉತ್ತಮವಾದದ್ದು ಮತ್ತು ಕಳಪೆಯಾದದ್ದು ಸೃಷ್ಟಿಯಾಗಿದೆ ಎನ್ನಿಸುತ್ತದೆ. ಶಿವರಾಮ ಕಾರಂತರು ತಮ್ಮ ನವೋದಯದಲ್ಲಿಯೇ ದಲಿತಪರ ದನಿಯನ್ನು ಎತ್ತಿದ್ದರು. ಮಾಸ್ತಿಯವರ ಸ್ತ್ರೀಪಾತ್ರಗಳು ಎಲ್ಲ ಕಾಲಕ್ಕೂ ಸೆಟೆದು ನಿಲ್ಲುವಷ್ಟು ಶಕ್ತಿಯುತವಾಗಿದ್ದವು. ದಲಿತ ಸಾಹಿತ್ಯದಲ್ಲಿಯೂ ವೈಯಕ್ತಿಕ ಸ್ವಾತಂತ್ರ್ಯದ ನವ್ಯಧ್ವನಿ ಕಂಡಿದೆ. ಪ್ರಗತಿಶೀಲರೂ ಬಂಡಾಯದ ಕನಸನ್ನು ಕಂಡಿದ್ದಾರೆ. ಶ್ರೇಷ್ಠವಾದ ಕೃತಿಯೊಂದು ಕಾಲಪ್ರವಾಹದಲ್ಲಿ ಗಟ್ಟಿಯಾಗಿ ನಿಂತುಬಿಡುತ್ತದೆ. ಅದಕ್ಕೆ ಚಳವಳಿ, ದೇಶ-ಕಾಲಗಳ ಮಿತಿಗಳು ಇರುವುದಿಲ್ಲ.

ನಾನಂತೂ ಕನ್ನಡ ಆಧುನಿಕ ಸಾಹಿತ್ಯದ ನಾಲ್ಕೈದನೆಯ ತಲೆಮಾರಿನವನು. ಸ್ವಲ್ಪ ಮಟ್ಟಿಗೆ ನಮ್ಮ ಪಿತೃ ಸಾಹಿತಿಗಳ ಕುರಿತು ಅಸಮಾಧಾನವಿರಬಹುದು. ಆದರೆ, ಮೊದಲ ತಲೆಮಾರಿನ ನವೋದಯ ಲೇಖಕರಂತೂ ನನಗೆ ತಾತ-ಅಜ್ಜಿಯರ ಸಮಾನ. ಮೊಮ್ಮಕ್ಕಳಿಗೆ ಯಾವತ್ತೂ ಅಜ್ಜಿ-ತಾತರ ಜೊತೆ ಸಮಸ್ಯೆ ಮೂಡುವುದಿಲ್ಲ. ಆ ಕಾರಣಕ್ಕಾಗಿಯೋ ಏನೋ, ನವೋದಯ ಸಾಹಿತ್ಯ ನನ್ನನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ. ಕುವೆಂಪು, ಕಾರಂತ, ಮಾಸ್ತಿಯವರ ಅಕ್ಷರಧಾರೆ ನನ್ನನ್ನು ಕಾಡುವ ಪರಿಗೆ ಅಚ್ಚರಿಯಾಗುತ್ತದೆ. ಮುಂದಿನ ತಲೆಮಾರಿಗೆ ನಮ್ಮ ಮನೋಭಾವದಲ್ಲಿಯೂ ಸಮಸ್ಯೆ ಕಾಣಬಹುದೇನೋ. ಅದರಲ್ಲೇನೂ ತಪ್ಪಿಲ್ಲ. ಪಿತೃಹತ್ಯೆಗೆ ಅವರಿಗೆ ಹಕ್ಕೆ ಇದ್ದೇ ಇದೆಯಲ್ಲವೆ?

ಎಷ್ಟೋ ಸಾಹಿತಿಗಳು ಬಯಸುವ ಬದಲಾವಣೆಗಳು ಅವರ ವೈಯಕ್ತಿಕ ಹಿನ್ನೆಲೆಯ ಮೇಲೆ ಅವಲಂಬಿತವಾಗಿರುತ್ತವೆ. ಅದಕ್ಕೆ ಉದಾಹರಣೆಯಾಗಿ ಒಂದೇ ಕಾಲಘಟ್ಟದಲ್ಲಿ ಬರೆದ ಅನಂತಮೂರ್ತಿ ಮತ್ತು ಶ್ರೀಕೃಷ್ಣ ಆಲನಹಳ್ಳಿಯವರ ಕೃತಿಗಳ ವಿವರಗಳ ಮೂಲಕ ನೋಡಬಹುದು. ಸಂಸ್ಕಾರ ಕೃತಿಯಲ್ಲಿ ಅನಂತಮೂರ್ತಿಯವರು ಮತ್ತೆ ಮತ್ತೆ ಬ್ರಾಹ್ಮಣ ಹೆಂಗಸರ ರೂಪದ ಕುರಿತು ಅವಹೇಳನ ಮಾಡುತ್ತಾರೆ. ಅಗ್ರಹಾರದ ಯಾವ ಹೆಣ್ಣುಗಳೂ ಪ್ರೇಮಿಸುವುದಕ್ಕೆ ಯೋಗ್ಯವಲ್ಲ ಎಂದು ಹೇಳುತ್ತಾರೆ. ಆ ಕಾರಣಕ್ಕಾಗಿಯೇ ಕಾದಂಬರಿಯ ಪ್ರತಿಗಾಮಿ ನಾಯಕ ನಾರಾಯಣಪ್ಪ ಶೂದ್ರ ಮತ್ತು ದಲಿತ ಹೆಣ್ಣುಗಳನ್ನು ಹುಡುಕಿಕೊಂಡು ಹೋಗುತ್ತಾನೆ. ಅದೇ ಸುಖದ ಸರಿದಾರಿ ಎನ್ನುವ ಅಭಿಪ್ರಾಯ ಈ ಕಾದಂಬರಿಯಲ್ಲಿ ವ್ಯಕ್ತವಾಗುತ್ತದೆ. ವಿಶೇಷವೆಂದರೆ ಶ್ರೀಕೃಷ್ಣ ಆಲನಹಳ್ಳಿ ತಮ್ಮ ಬಹುತೇಕ ಕತೆಗಳಲ್ಲಿ ಮೈಸೂರಿನ ಬ್ರಾಹ್ಮಣ ಹುಡುಗಿಯರ ಕುರಿತು ವಿಶೇಷ ಆಕರ್ಷಣೆಯಿಂದ ಬರೆಯುತ್ತಾರೆ. ಅವರ ಕಥಾನಾಯಕ ಸಾಮಾನ್ಯವಾಗಿ ತನ್ನ ಹಳ್ಳಿಯ ಮನೆಯಲ್ಲಿ ಅವ್ವ ತೋರಿದ ಹುಡುಗಿಯನ್ನು ನಿರಾಕರಿಸಿ, ನಗರದ ಈ ವಿದ್ಯಾವಂತ ಹುಡುಗಿಗಾಗಿ ಹಪಹಪಿಸುತ್ತಾನೆ. ಒಂದು ಕಾಲಘಟ್ಟದ ಈ ಎರಡು ಭಿನ್ನ ಅಭಿಪ್ರಾಯಗಳನ್ನು ಗಮನಿಸುವಾಗ ಬದಲಾವಣೆಯ ಬಯಕೆಯು ಅತ್ಯಂತ ಸಾಪೇಕ್ಷವಾದದ್ದು ಎನ್ನಿಸುತ್ತದೆ. ಆ ಕಾರಣದಿಂದಲೇ ಪ್ರತಿ ಸಾಹಿತ್ಯ ಕೃತಿಯು ಅನನ್ಯವಾದದ್ದು. ಸಾರ್ವತ್ರೀಕರಣ ಸತ್ಯವನ್ನು ಹೇಳುವುದಿಲ್ಲ.

ಕೃತಿಯೊಂದರಲ್ಲಿ ಪ್ರಾಮಾಣಿಕತೆ ಮತ್ತು ಸೃಜನಶೀಲತೆ ಇದೆಯೋ ಇಲ್ಲವೋ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಆ ದೃಷ್ಟಿಯಿಂದಲೇ ಅನಂತಮೂರ್ತಿಯವರ ಸಂಸ್ಕಾರವೂ, ಆಲನಹಳ್ಳಿಯವರ ಕತೆಗಳೂ ನಮಗೆ ಮಹತ್ವದ್ದಾಗುವುದು.
.
.
ಸುಮಾರು ಹದಿನೈದು ವರ್ಷಗಳಿಂದ ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿರುವ ನನಗೆ ಸಾಹಿತ್ಯದ ಮುಂದಿನ ದಿನಗಳ ಕುರಿತು ಆತಂಕವಿದೆ. ಡಿಜಿಟಲ್‌ ಕ್ರಾಂತಿಯಿಂದಾಗಿ ಪುಸ್ತಕಗಳ ಹೊರರೂಪದ ಗುಣಮಟ್ಟ ಇಂದು ಸಾಕಷ್ಟು ಉನ್ನತವಾಗಿದೆ. ಬರವಣಿಗೆ ಮುಗಿದ ಒಂದು ವಾರದಲ್ಲಿ ಅಚ್ಚುಕಟ್ಟಾದ ಪುಸ್ತಕವನ್ನು ಹೊರತರುವ ಮುದ್ರಣ ತಂತ್ರಜ್ಞಾನವೂ ನಮ್ಮಲ್ಲಿದೆ. ಸಾಕಷ್ಟು ಹೊಸ ಲೇಖಕರೂ ಕಾಣಿಸಿಕೊಳ್ಳುತ್ತಿ¨ªಾರೆ. ದೇಶದ ಆರ್ಥಿಕ ಸ್ಥಿತಿಗಳು ಸುಧಾರಿಸಿವೆಯಾದ್ದರಿಂದ, ಮಧ್ಯಮ ವರ್ಗದ ಕನ್ನಡಿಗರು ಹಿಂದುಮುಂದೆ ನೋಡದೆ ಪುಸ್ತಕ ಖರೀದಿಸುತ್ತಾರೆ. ಒಂದು ಮಾಲ್‌ನಲ್ಲಿ ಸಿನಿಮಾ ನೋಡುವುದಕ್ಕೆ ಮಾಡುವ ಖರ್ಚಿಗೆ ಹೋಲಿಸಿದರೆ ಕನ್ನಡ ಪುಸ್ತಕವೊಂದರ ಬೆಲೆ ತುಂಬಾ ಕಡಿಮೆಯೇ ಆಗಿದೆ. ಆದ್ದರಿಂದ ಇದೊಂದು ರೀತಿಯಲ್ಲಿ ಪುಸ್ತಕೋದ್ಯಮ ಹಿಂದಿಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿದಂತೆ ಅಂಕಿ-ಅಂಶಗಳು ಕಾಣಿಸುತ್ತಿವೆ. ಆದರೆ, ಇದು ಜಲಪಾತದ ಹಿಂದಿನ ನೀರಿನ ರಭಸವಾಗಿದೆ. ಸ್ವಲ್ಪ ದಿನದಲ್ಲಿ ನೀರು ಆಳಕ್ಕೆ ಬೀಳುವ ಅಪಾಯವು ನನಗೆ ಅದರಲ್ಲಿ ಕಾಣಿಸುತ್ತಿದೆ. ಸದ್ಯಕ್ಕೆ ಮಧ್ಯವಯಸ್ಸು ದಾಟಿದವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಕನ್ನಡ ಸಾಹಿತ್ಯದ ಕಡೆಗೆ ಆಸಕ್ತಿಯಿಲ್ಲ. ಮಕ್ಕಳಂತೂ ನಮ್ಮ ಕಡೆಗೂ ಹಾಯುವುದಿಲ್ಲ. ಇನ್ನೂ ಇಪ್ಪತ್ತು ವರ್ಷ ಕಳೆದರೆ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಿದರೆ ಭಯವಾಗುತ್ತದೆ. ಎರಡು ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆಯು ಆಡುಭಾಷೆಯಾಗಿ ನಾಡಿನಲ್ಲಿ ಉಳಿಯುವುದಕ್ಕೆ ಯಾವ ಆತಂಕಗಳೂ ಇಲ್ಲ. ಆದರಿಲ್ಲಿ ನನ್ನ ಕಳಕಳಿಯಿರುವುದು ಕನ್ನಡ ಸಾಹಿತ್ಯದ ಕುರಿತದ್ದಾಗಿದೆ, ಆಡುಭಾಷೆಯದಲ್ಲ. ಸಾಹಿತ್ಯ ಕಟ್ಟುವ, ಪೋಷಿಸುವ, ಆಶ್ರಯಿಸಲು ಬೇಕಾಗುವ ಭಾಷೆಯ ಪರಿಣಿತಿ, ಪರಿಶ್ರಮ, ಬದ್ಧತೆ ಬೇರೆಯದೇ ಮಜಲಿನದಾಗಿರುತ್ತವೆ.

ಸ್ಪಷ್ಟವಾಗಿಯೇ ಸಮಸ್ಯೆಯ ಮೂಲವಿರುವುದು ನಮ್ಮ ಶಾಲೆಗಳಲ್ಲಿ ಕನ್ನಡ ಅಥವಾ ಭಾಷೆಯ ಕುರಿತು ಇರುವ ಅಸಡ್ಡೆಯಲ್ಲಿ. ಖಾಸಗಿ ಶಾಲೆಗಳಂತೂ ಮಕ್ಕಳು ಒಳ್ಳೆಯ ಉದ್ಯೋಗ ಗಳಿಸಿ ಹಣ ಗಳಿಸುವುದನ್ನೇ ತಮ್ಮ ಉದ್ದೇಶವಾಗಿಸಿಕೊಂಡು ವಿದ್ಯಾಭ್ಯಾಸ ಮಾಡಿಸುತ್ತಿವೆ. ಆದ್ದರಿಂದ ಉದ್ಯೋಗಕ್ಕೆ ಅನುಕೂಲವಾಗುವ ವಿಜ್ಞಾನ, ಗಣಿತ, ತಂತ್ರಜ್ಞಾನ, ಇಂಗ್ಲಿಷ್‌ ಭಾಷೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಿವೆ. ಕನ್ನಡ ಭಾಷೆಗಿಂತಲೂ ಯುರೋಪ್‌ ದೇಶದ ಭಾಷೆಯೊಂದನ್ನು ಕಲಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಕನ್ನಡದ ತಂದೆ-ತಾಯಿಗಳೇ ಯೋಚಿಸುವ ಪರಿಸ್ಥಿತಿ ಸದ್ಯಕ್ಕಿದೆ. ಆದರೆ, ಖಾಸಗಿ ಶಾಲೆಗಳು ಯಾರ ಮಾತನ್ನೂ ಕೇಳದಷ್ಟು ಬಲಿತುಹೋಗಿವೆ. ಭ್ರಷ್ಟತೆಯಲ್ಲಿಯೇ ಮುಳುಗುವ ನಮ್ಮ ರಾಜಕಾರಣಿಗಳು ಅವುಗಳ ಕತ್ತಿನ ಪಟ್ಟು ಹಿಡಿದು ಪ್ರಶ್ನಿಸುವ ನೈತಿಕತೆಯನ್ನು ಎಂದೋ ಕಳೆದುಕೊಂಡಿ¨ªಾರೆ. ಕೊನೆಗೆ ತಬ್ಬಲಿಗಳಾದ ಸರಕಾರಿ ಶಾಲೆಗಳ ಕುರಿತು ನಾವು ಮಾತಾಡತೊಡಗಿದ್ದೇವೆ. ಅಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಿ ಇರಬೇಕು ಎಂದು ಕೆಲವರು, ಇಂಗ್ಲಿಷ್‌ ಮಾಧ್ಯಮ ಬೇಕೆಂದು ಇನ್ನಿತರರು ಒತ್ತಾಯಪಡಿಸುತ್ತಿದ್ದೇವೆ. ಮಾತೃಭಾಷೆಯನ್ನು ಕಲಿಯುವುದಕ್ಕೆ ನಿಜವಾದ ಸಮಸ್ಯೆಯಿರುವುದು ಮಾಧ್ಯಮದ ಭಾಷೆ ಅಲ್ಲವೇ ಅಲ್ಲ. ಅದಕ್ಕೆ ಬದಲು ಕನ್ನಡ ಭಾಷೆಯನ್ನು ಎಷ್ಟು ಅಚ್ಚುಕಟ್ಟಾಗಿ ಕಲಿಸುತ್ತಿದ್ದೀರಿ ಎನ್ನುವುದಾಗಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿಯೂ ಕನ್ನಡವನ್ನು ಅಚ್ಚುಕಟ್ಟಾಗಿ ಕಲಿಸಬಹುದು. ಆದರೆ, ಸದ್ಯದ ಸಾಕಷ್ಟು ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣವಿಲ್ಲ. ಆದ್ದರಿಂದ ಲಕ್ಷಾಂತರ ಮಕ್ಕಳು ಆ ಶಾಲೆಗಳಲ್ಲಿ ಓದುತ್ತಿದ್ದರೂ ಕನ್ನಡ ಪುಸ್ತಕಗಳನ್ನು ಓದುವ, ಬರೆಯುವ ಶಕ್ತಿಯುಳ್ಳವರಾಗಿಲ್ಲ. ವಿಜ್ಞಾನ-ಗಣಿತ-ತಂತ್ರಜ್ಞಾನಗಳು ನಮಗೆ ಉದ್ಯೋಗವನ್ನು ಸೃಷ್ಟಿಸಿಕೊಡಬಹುದು. ಆದರೆ, ಭಾಷೆ ಮಾತ್ರ ನಮಗೆ ಬದುಕಿನ ಮೌಲ್ಯಗಳನ್ನು ಕಲಿಸಿಕೊಡಲು ಸಾಧ್ಯ. ಈ ಮೌಲ್ಯಗಳು ಸಮಾಜದಲ್ಲಿ ಕಡಿಮೆಯಾಗುತ್ತಿರುವುದು ತಕ್ಷಣ ಗೊತ್ತಾಗುವುದಿಲ್ಲ; ಚಾಪೆಯೆಡೆಗೆ ಹರಿದ ನೀರಿನಂತೆ ಅದು ಹಿನ್ನೆಲೆಯಲ್ಲಿರುತ್ತದೆ. ತಳವೆಲ್ಲಾ ಒದ್ದೆಯಾಗಿ ಅರಿವಿಗೆ ಬಂದಾಗ ಹಠಾತ್ತನೆ ಎದ್ದು ನಿಲ್ಲಬೇಕಾಗುತ್ತದೆ. ಮತ್ತೆ ಹಿಂತಿರುಗುವುದು ಕಷ್ಟವಾಗಿರುತ್ತದೆ.

ವಿಶೇಷವೆಂದರೆ, ಕನ್ನಡ ಭಾಷೆಯ ಸಮಸ್ಯೆ ಸಿನಿಮಾ, ರಂಜನೆ ಮತ್ತು ಸಂಗೀತದ ಕ್ಷೇತ್ರಕ್ಕೆ ಅಷ್ಟಾಗಿ ಬಾಧಿಸುವುದಿಲ್ಲ. ಅಲ್ಲಿನ ಯಶಸ್ಸಿಗೆ ಬೇಕಾದ ಕನ್ನಡವು ಸಾಹಿತ್ಯದಷ್ಟು ಹರಿತವಾದದ್ದು ಖಂಡಿತ ಅಲ್ಲ. ಆಡುಭಾಷೆಯಾಗಿ ಕನ್ನಡ ಗೊತ್ತಿದ್ದರೆ ಸಾಕು. ಬಹುತೇಕ ಕನ್ನಡ ಸಿನಿಮಾಗಳಿಗೆ ಇಂಗ್ಲಿಷ್‌ ಭಾಷೆಯಲ್ಲಿಯೇ ಚಿತ್ರಕತೆ ಬರೆದುಕೊಂಡು ಅನಂತರ ಅದನ್ನು ಅನುವಾದ ಮಾಡಿಸುತ್ತಾರೆ. ರಸಮಂಜರಿ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡುಗಳನ್ನು ಇಂಗ್ಲಿಷಿನಲ್ಲಿ ಬರೆದುಕೊಂಡಿರುತ್ತಾರೆ. ನಾಟಕದ ಸಂಭಾಷಣೆಗಳು ಬಹುತೇಕ ಇಂಗ್ಲಿಷಿನಲ್ಲಿಯೇ ಇರುತ್ತವೆ. ಆದ್ದರಿಂದ ಈಗಲೂ ಈ ಕ್ಷೇತ್ರಗಳಲ್ಲಿ ಸಾಕಷ್ಟು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ಹುಡುಗರು ಕಂಡುಬರುತ್ತಾರೆ. ಕನ್ನಡ ಸಿನಿಮಾಕ್ಕಂತೂ ಇನ್ನಿಲ್ಲದಷ್ಟು ಯುವಚೇತನಗಳು ನುಗ್ಗಿ ಬರುತ್ತಿವೆ. ಕನ್ನಡದ ಹಾಡುಗಳನ್ನು ಸೋನು ನಿಗಮ್‌ ಮತ್ತು ಶ್ರೇಯಾ ಗೋಶಾಲ್‌ ಹಾಡಿಬಿಡುತ್ತಾರೆ. (ಹಾಡು ಬರೆಯುವವರ ಸಮಸ್ಯೆ ಕಾಣಿಸಬಹುದೇನೋ!) ರಂಜನೆ, ಸಂಗೀತ ಕ್ಷೇತ್ರಗಳಿಗೆ ಭಾಷೆಯ ಅಳಿವಿನ ಆತಂಕವಿಲ್ಲ. ಈಗಲೂ ಎಷ್ಟೋ ಜನರಿಗೆ ಕನ್ನಡದ ಅಭಿಮಾನವೆಂದರೆ ಕನ್ನಡ ಸಿನಿಮಾಗಳು, ಕನ್ನಡ ಹಾಡುಗಳು ಮತ್ತು ಕನ್ನಡ ಹಾಸ್ಯೋತ್ಸವಗಳೇ ಆಗಿರುತ್ತವೆ. ಅವರಲ್ಲಿ ಬಹುತೇಕರಿಗೆ ಸಾಹಿತ್ಯ ವಜ್ಯì. ಅದು ತಪ್ಪೆಂದೇನೂ ಅಲ್ಲ. ಆದರೆ, ಸಾಹಿತ್ಯದ ಕಾಳಜಿಯನ್ನು ಒಡಲಲ್ಲಿ ಇಟ್ಟುಕೊಂಡ ನನ್ನಂತಹವರಿಗೆ ಕನ್ನಡ ಭಾಷೆಯ ಆತಂಕ ಬೇರೆಯದೇ ರೂಪ¨ªೆಂದು ಮಾತ್ರ ಹೇಳಬಲ್ಲೆ.

ಬಾಲ್ಯದಲ್ಲಿ ನಿಜಕ್ಕೂ ನಮ್ಮ ಬದುಕಿಗೆ ಉಪಕಾರ ಮಾಡಿದ್ದು ಸರಕಾರಿ ಶಾಲೆ ಮತ್ತು ಸರಕಾರಿ ಆಸ್ಪತ್ರೆಗಳು. ಅತ್ಯಂತ ಸುಸ್ಥಿತಿಯಲ್ಲಿದ್ದ ಅವುಗಳು ದೇಶದ ಅಭಿವೃದ್ಧಿಯ ಸಂಕೇತಗಳಾಗಿದ್ದವು. ಜಗತ್ತಿನೊಡನೆ ಸ್ಪರ್ಧಿಸುವಂತೆ ನಮ್ಮನ್ನು ತಯಾರಿ ಮಾಡಿದ್ದು ಈ ಸರಕಾರಿ ಶಾಲೆಗಳೇ. ನಾನು, ನನ್ನ ಅಕ್ಕಂದಿರು, ಅಕ್ಕನ ಮೊದಲ ಮಗಳು- ಎಲ್ಲರೂ ಹುಟ್ಟಿದ್ದು ಸರಕಾರಿ ಆಸ್ಪತ್ರೆಗಳಲ್ಲಿಯೇ! ಯಾರಿಗೂ ಸರಕಾರಿ ಆಸ್ಪತ್ರೆಗೆ ಹೋಗಲು ಆಗ ಹಿಂಜರಿಕೆಯಿರಲಿಲ್ಲ. ಆದರೀಗ ಎಲ್ಲವೂ ಖಾಸಗಿ ಪಾಲಾಗಿಹೋಗಿದೆ. ಶಾಲೆ ಮತ್ತು ಆಸ್ಪತ್ರೆಗಳು ಹಣ ಮಾಡುವ ದಂಧೆಗಳಾಗುತ್ತಿವೆ. ಸಮಾಜಸೇವೆ ಅನ್ನುವ ಪದಕ್ಕೆ ಅಲ್ಲಿ ಅರ್ಥವೇ ಇಲ್ಲ. ಅದಕ್ಕೆ ಬದಲಾಗಿ ಹೊಸದಾದ ಮೊಬೈಲ್‌ಗ‌ಳು, ಟಿವಿಗಳು, ಸೊಗಸಾದ ರಸ್ತೆಗಳು, ಐಷಾರಾಮಿ ಕಾರುಗಳು- ಏನೆಲ್ಲಾ ಬದಲಾವಣೆಗಳು ಬಂದುಬಿಟ್ಟಿವೆ. ಆದರೆ, ಇವು ಯಾವವೂ ಶಾಲೆ ಮತ್ತು ಆಸ್ಪತ್ರೆಗಳಿಲ್ಲದ ಶೂನ್ಯವನ್ನು ತುಂಬಲಾರವು. ಯಾವತ್ತೂ ಪ್ರಥಮ ಆದ್ಯತೆಗಳಾಗಲಾರವು. ಬಹುತೇಕ ಮುಂದುವರೆದ ದೇಶಗಳಲ್ಲಿ ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಒದಗಿಸುತ್ತಾರೆ ಎನ್ನುವುದನ್ನು ನಾವು ಮರೆಯದಿರೋಣ.
.
.
ಈಗ ಮೂವತ್ತು ವರ್ಷಗಳ ಹಿಂದೆ ನನ್ನ ಶಾಲೆಯಲ್ಲಿ ಯಾವಾಗಲೂ ಕಂಪ್ಯೂಟರ್‌ ಭಾರತಕ್ಕೆ ಬೇಕೆ, ಬೇಡವೆ ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು. ಇದರಲ್ಲಿ ಎÇÉಾ ಮಕ್ಕಳು ಬೇಡ ಎಂದೇ ವಾದಿಸುತ್ತಿದ್ದರು. ಬೇಕು ಎಂದು ವಾದಿಸಿ ಬಹುಮಾನ ಪಡೆಯುವುದು ಕಷ್ಟವಿತ್ತು. ಏಕೆಂದರೆ, ಒಂದು ಕಂಪ್ಯೂಟರ್‌ ಸಾವಿರ ಜನರ ಕೆಲಸ ಮಾಡುತ್ತದೆ. ಆದ್ದರಿಂದ ಸಾವಿರ ಜನರ ಊಟವನ್ನು ಅದು ಕಸಿದುಕೊಳ್ಳುತ್ತದೆ ಎನ್ನುವ ಬ್ರಹ್ಮಾಸ್ತ್ರ ವಿರೋಧಿಗಳಿಗಿರುತ್ತಿತ್ತು. ಆದ್ದರಿಂದ ಅವರಿಗೆ ಖಚಿತವಾಗಿಯೂ ಬಹುಮಾನ ಬರುತ್ತಿತ್ತು.

ಅಂಥ ಕಂಪ್ಯೂಟರ್‌ ವಿರೋಧಿ ಮನೋಭಾವ ಆ ಎಳೆಯ ಮನಸ್ಸಿನಲ್ಲಿ ಹೇಗೆ ಬಂತು? ಎಂದು ಯೋಚಿಸುತ್ತೇನೆ. ಅದಕ್ಕೆ ಆ ಕಾಲದ ಪತ್ರಿಕೆಗಳೇ ಕಾರಣವೆನ್ನಿಸುತ್ತದೆ. ಕನ್ನಡದ ಬಹುತೇಕ ಲೇಖಕರು ಕಂಪ್ಯೂಟರ್‌ ವಿರೋಧಿಗಳಾಗಿದ್ದರು. ಅವರು ನಮ್ಮ ಎಳೆಯ ತಲೆಯಲ್ಲಿ ತುಂಬಿಸುತ್ತಿದ್ದ ಸತ್ಯಗಳೇ ಪುಟ್ಟಮಕ್ಕಳ ಸತ್ಯಗಳೂ ಆಗಿರುತ್ತಿದ್ದವು. ನಾವು ಯಾರೂ ಕಂಪ್ಯೂಟರನ್ನು ಕಣ್ಣಿಂದ ನೋಡಿರಲೂ ಸಾಧ್ಯವಿಲ್ಲದ ಹೊತ್ತಲ್ಲಿ, ಹೊರಗಿನಿಂದ ಬಂದ ಅಭಿಪ್ರಾಯಗಳೇ ನಮ್ಮವೂ ಆಗಿಬಿಟ್ಟಿದ್ದು ಸಹಜವಾಗಿತ್ತು.

2017ರ ರಾಯಚೂರಿನಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ, ಬಂಡಾಯ ಸಾಹಿತ್ಯದ ರೂವಾರಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಸರಕಾರವು ಕನ್ನಡದ ಕಂಪ್ಯೂಟರಿಕರಣದತ್ತ ಹೆಚ್ಚು ಗಮನ ನೀಡಬೇಕು’ ಎಂದು ಕರೆಕೊಟ್ಟರು. ತಮ್ಮ ಭಾಷಣವೊಂದರಲ್ಲಿ ಯು. ಆರ್‌. ಅನಂತಮೂರ್ತಿಯವರು ಗಾಂಧೀಜಿ ಬದುಕಿದ್ದರೆ ಕಂಪ್ಯೂಟರ್‌ ಬಳಸುತ್ತಿದ್ದರು ಎಂದು ಹೇಳಿದ್ದರು. ಇದು ನಿಸ್ಸಂಶಯವಾಗಿ ಕಳೆದ ದಶಕಗಳಲ್ಲಿ ನಡೆದ ಸ್ಥಿತ್ಯಂತರವೇ ಆಗಿದೆ. ಡಿಜಿಟಲ್‌ ಫೋಬಿಯಾ ಕಡಿಮೆಯಾಗಲು ನಾವು ಸುದೀರ್ಘ‌ ಕಾಲವನ್ನೇ ತೆಗೆದುಕೊಂಡಿದ್ದೇವೆ.

ಕಾಲಕಾಲಕ್ಕೆ ವಿಜ್ಞಾನವು ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಲೇ ಹೋಗಿದೆ. ಅವುಗಳು ಯಾವವೂ ಸಾಹಿತ್ಯಕ್ಕೆಂದೇ ಮಾಡಿದ ಸಂಶೋಧನೆಗಳೇನೂ ಅಲ್ಲ. ಆದರೆ, ಅವನ್ನು ಸಾಹಿತಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾ ಹೋಗಿದ್ದಾರೆ. ಕಾಗದ, ಲೇಖನಿ, ಮುದ್ರಣ ಯಂತ್ರ, ಕಂಪ್ಯೂಟರ್‌, ಮತ್ತೀಗ ಸಾಮಾಜಿಕ ಜಾಲತಾಣಗಳು. ಆದರೆ ವಿಜ್ಞಾನಕ್ಕೆ ಸಾಹಿತ್ಯದ ಮೇಲೆ ಅಂತಹ ವಿಶೇಷ ಕಳಕಳಿಯೇನೂ ಇಲ್ಲದ ಕಾರಣ, ಅದರದು ಕುಂಡಿ ಚಿವುಟಿ ತೊಟ್ಟಿಲು ತೂಗುವ ಪ್ರೀತಿಯಾಗಿದೆ. ಹಲವು ಆವಿಷ್ಕಾರಗಳಿಂದ ಸಾಹಿತ್ಯಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟರೆ, ಮತ್ತೆ ಕೆಲವುಗಳಿಂದ ಅವರನ್ನು ದೂರಕ್ಕೂ ತೆಗೆದುಕೊಂಡು ಹೋಗಿದೆ. ರೇಡಿಯೋ, ಸಿನಿಮಾ, ಟಿವಿ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು – ನಿಧಾನಕ್ಕೆ ಓದುಗರನ್ನು ದೂರ ಒಯ್ದಿವೆ.

ಹಾಗೆ ನೋಡಿದರೆ ವಿಜ್ಞಾನದ ಆವಿಷ್ಕಾರಗಳೆಲ್ಲವೂ ಸಾಹಿತ್ಯದ ಕಾರಕೂನಿಕೆಗೆ ಸಲಕರಣೆಗಳೇ ಹೊರತು ಅವುಗಳ ಲಭ್ಯದಿಂದಲೇ ಉತ್ತಮ ಸಾಹಿತ್ಯ ಹುಟ್ಟಲು ಸಾಧ್ಯವಿಲ್ಲ. ಸಾಹಿತ್ಯ ಸೃಷ್ಟಿಯ ಸವಾಲುಗಳು ಪಂಪ, ಕುಮಾರವ್ಯಾಸ, ಕುವೆಂಪು ಮತ್ತು ನನಗೂ ಒಂದೇ! ಕುಮಾರವ್ಯಾಸ, ಪಂಪರು ತಾಳೆಪತ್ರ-ಲೇಖನಿ ಬಳಸಿದರೆ, ಕುವೆಂಪು ಕಾಗದ-ಪೆನ್ನು ಹಿಡಿದರು. ನಾನೀಗ ಕೀಬೋರ್ಡ್‌ ಬಳಸುತ್ತಿದ್ದೇನೆ. ಸಲಕರಣೆಯ ಕಾರಣದಿಂದಲೇ ಯಾರ ಸಾಹಿತ್ಯದ ಮೌಲ್ಯದಲ್ಲಿಯೂ ಬದಲಾವಣೆಯಾಗುವುದಿಲ್ಲ.

ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next