Advertisement

ಅರಬರ ನಾಡಲ್ಲಿ  ಕನ್ನಡದ ಕಂಪು; ರಾಜ್ಯದ ಮನವಿಗೆ ಸ್ಪಂದನೆ

06:00 AM Nov 01, 2017 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂದು ಆದೇಶ ಮಾಡಿರುವ ರಾಜ್ಯ ಸರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕನ್ನಡ ಭಾಷೆಯನ್ನು ಜೀವಂತವಾಗಿಡಲು 
ಪ್ರಯತ್ನ ನಡೆಸಿದೆ. ಹೊರ ದೇಶಗಳಲ್ಲಿರುವ ಕನ್ನಡಿಗರ ಮಕ್ಕಳಿಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಕುರಿತಂತೆ ಸ್ಥಳೀಯ ಸರಕಾರಗಳೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದು, ರಾಜ್ಯ ಸರಕಾರದ ಪ್ರಯತ್ನಕ್ಕೆ ದುಬಾೖ ಸಹಿತ ಯುನೈಟೆಡ್‌ ಅರಬ್‌ ರಾಷ್ಟ್ರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದೆ.

Advertisement

ಅನಿವಾಸಿ ಭಾರತೀಯರ ಸಮಿತಿ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ರಾಗಿರುವ ಆರತಿ ಕೃಷ್ಣ ಅವರು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮೇ ತಿಂಗಳಲ್ಲಿಯೇ ಈ ಕುರಿತು ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರವೂ ರಾಜ್ಯ ಸರಕಾರದ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಯುಎಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ, ಕನ್ನಡದ ಮಕ್ಕಳಿಗೆ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ಕುರಿತು ಸ್ಥಳೀಯ ಸರಕಾರಕ್ಕೆ ಮನವಿ ಮಾಡುವಂತೆ ಸುಷ್ಮಾ ಸ್ವರಾಜ್‌ ಅವರಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಸುಷ್ಮಾ  ಅವರು, ದುಬಾೖ ಯಲ್ಲಿರುವ ಭಾರತದ ರಾಯಭಾರಿ ನವದೀಪ್‌ ಸೂರಿ ಅವರಿಗೆ ಸೂಚನೆ ನೀಡಿದ್ದು, “ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲು ಸ್ಥಳೀಯ ಸರಕಾರದೊಂದಿಗೆ ಮಾತುಕತೆ ನಡೆಸಿ’ ಎಂದಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಮನವಿ ಮಾಡಿಕೊಂಡಿತ್ತು: ಮೇ ತಿಂಗಳಲ್ಲಿ ದುಬಾೖನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ದುಬಾೖ ಕನ್ನಡಿಗರು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಹಾಗೂ ಅವಕಾಶ ಕಲ್ಪಿಸಲು ರಾಜ್ಯ ಸರಕಾರ ಯುಎಇ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿಯಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಯುಎಇ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿಕೊಂಡಿದೆ.

ಯುಎಇ ಕನ್ನಡ ಕೂಟದ ಸಂಸ್ಥಾಪಕರಾಗಿದ್ದ ಅರುಣ್‌ ಮುತ್ತುಗದೂರು ಎನ್ನುವವರು, ತಾವಷ್ಟೇ ಕನ್ನಡ ಉಳಿಸಿದರೆ ಸಾಲದು. ತಮ್ಮ ಮುಂದಿನ ಪೀಳಿಗೆಯೂ ಮಾತೃ ಭಾಷೆಯನ್ನು ಕಲಿಯಬೇಕೆಂಬ ಮಹದಾಸೆ ಯಿಂದ ದುಬೈನಲ್ಲಿರುವ ಜೆಎಸ್‌ಎಸ್‌ ಶಾಲೆಯಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಆರಂಭಿಸಿದರು. ಶಶಿಧರ್‌ ಎನ್ನುವವರು ಅದನ್ನು ಮುಂದುವರಿಸಿಕೊಂಡು ಬಂದಿದ್ದು, ಪ್ರತಿ ಶುಕ್ರವಾರ ಒಂದು ಗಂಟೆ ಕನ್ನಡಿಗರ ಮಕ್ಕಳಿಗೆ ಮಾತೃ ಭಾಷೆ ಕಲಿಸುವ ಪ್ರಯತ್ನ ನಡೆಸಿದ್ದಾರೆ.

ದುಬೈನಲ್ಲಿ ಈಗಾಗಲೇ ತಮಿಳು, ಮಲಯಾಳಿ, ತೆಲಗು ಹಾಗೂ ಹಿಂದಿ ಭಾಷೆಯನ್ನು ಸ್ಥಳೀಯ ಶಾಲೆಗಳಲ್ಲಿ ಒಂದು ಭಾಷೆಯಾಗಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಅದೇ ರೀತಿ ಕನ್ನಡವನ್ನೂ ಒಂದು ಭಾಷೆಯಾಗಿ ಅಧ್ಯಯನ ನಡೆಸಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿ ಕೊಟ್ಟರೆ, ಕನ್ನಡದ ಮಕ್ಕಳೂ ಅರಬರ ನಾಡಿನಲ್ಲೂ ಮಾತೃಭಾಷೆಯನ್ನು ಕಲಿಯಲು ಅನುಕೂಲವಾಗುತ್ತದೆ ಎನ್ನುವುದು ದುಬೈ ಕನ್ನಡಿಗರ ಬಯಕೆಯಾಗಿದೆ.

Advertisement

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next