Advertisement

ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನ ಅತಿ ಮುಖ್ಯ

12:19 AM Jan 05, 2020 | Lakshmi GovindaRaj |

ಬೆಂಗಳೂರು: ಅಧೀನ ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಎಷ್ಟು ಮುಖ್ಯವೋ ಹೈಕೋರ್ಟ್‌ನಲ್ಲೂ ಕನ್ನಡದ ಸಮಗ್ರ ಅನುಷ್ಠಾನ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಿಗೆ 2017-18 ಮತ್ತು 18-19ನೇ ಸಾಲಿನ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನ್ಯಾಯದಾನ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಜನಸಾಮಾನ್ಯರು ತಿಳಿದುಕೊಳ್ಳಲು ಆಡು ಭಾಷೆಯಾಗಿರುವ ಕನ್ನಡದಲ್ಲೇ ತೀರ್ಪು ನೀಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಧೀಶರು ಕನ್ನಡ ಕಲಿಯುವ ವಾತಾವರಣ ನಿರ್ಮಾಣವಾಗಬೇಕು ಎಂದರು.

ಆಡಳಿತದಲ್ಲಿ ಸುಧಾರಣೆ, ಸ್ಥಳೀಯರಿಗೆ ಉದ್ಯೋಗ ಅವಕಾಶ, ಗಡಿ ಕನ್ನಡಿಗರ ಅಭ್ಯುದಯ, ನ್ಯಾಯಾಂಗ ದಲ್ಲಿ ಕನ್ನಡ, ಹೊರನಾಡ ಕನ್ನಡಿಗರ ಸಮಾವೇಶ ಸೇರಿ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಕನ್ನಡವನ್ನು ಜನರ ಜೀವನದಲ್ಲಿ ಹಾಸುಹೊಕ್ಕಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದ ಮುಖ್ಯಮಂತ್ರಿಗಳು, ನ್ಯಾಯಾಂಗ ಕ್ಷೇತ್ರದ ಎಲ್ಲ ವಲಯಗಳಲ್ಲಿ ಕನ್ನಡ ಬಳಸುವ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿ ನೀಡುತ್ತಿರುವ ಕ್ರಮವನ್ನು ಶ್ಲಾ ಸಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫ‌ಣೀಂದ್ರ ಮಾತನಾಡಿ, ಕನ್ನಡದಲ್ಲಿ ತೀರ್ಪು ನೀಡಲು ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಜಿಲ್ಲಾ, ಸತ್ರ, ಹೈಕೋರ್ಟ್‌ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ಶೀಘ್ರಲಿಪಿಕಾರರು ಹಾಗೂ ಬೆರಳಚ್ಚುಗಾರರ ಕೊರತೆ ಇದೆ. ಬಹಳ ಸಂದರ್ಭದಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡಿದರೂ, ಅದನ್ನು ಬರೆದುಕೊಳ್ಳಲು ಶೀಘ್ರಲಿಪಿಗಾರ ರಿಲ್ಲ. ಶೀಘ್ರಲಿಪಿ ತರಬೇತಿ ಕೇಂದ್ರಗಳು ಮುಚ್ಚಿರುವುದ ರಿಂದ ಹುದ್ದೆಗಳ ಭರ್ತಿಗೆ ನ್ಯಾಯಾಲಯ ಅಧಿಸೂಚನೆ ಹೊರಡಿಸಿದರೂ, ಅರ್ಜಿಗಳು ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಶೀಘ್ರಲಿಪಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್‌ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಂದು ಒಪ್ಪಿಕೊಂಡಿರುವುದರಿಂದ ಕೆಲವು ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲೇ ತೀರ್ಪು ನೀಡುವುದು ಅನಿವಾರ್ಯವಾಗಿದೆ. ಎಷ್ಟೋ ಬಾರಿ ನಾವು ನೀಡಿದ ತೀರ್ಪುಗಳು ಕಕ್ಷಿದಾರರಿಗೂ ತಿಳಿಯುವುದಿಲ್ಲ. ಅದನ್ನು ವಕೀಲರು ಅರ್ಥ ಮಾಡಿಕೊಂಡು ಅವರಿಗೆ ವಿವರಿಸಲು ಸಾಕಷ್ಟು ಸಮಯಬೇಕು. ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದರೆ ಇಂತಹ ತಾಪತ್ರಯ ಇರುವುದಿಲ್ಲ ಎಂದರು.

Advertisement

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗಿಂತ ಅನ್ಯ ರಾಜ್ಯದವರೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರ ಜತೆ ಹಿಂದಿ, ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತಿದ್ದಾರೆ. ಹೀಗಾಗಿ ಸಾಲ ಸೇರಿ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕಾರ್ಯಗಳಿಗೆ ಮತ್ತೂಬ್ಬರನ್ನು ಅವಲಂಬಿಸುವ ಸ್ಥಿತಿಯಿದೆ. ಹೀಗಾಗಿ, “ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ಆದ್ಯತೆ’ ಎಂಬ ನಿಯಮ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಇದೇ ವೇಳೆ ಕನ್ನಡದಲ್ಲಿ ತೀರ್ಪು ನೀಡಿದ 72 ನ್ಯಾಯಾಧೀಶರು, 10 ಸರ್ಕಾರಿ ಅಭಿಯೋಜಕರು, ವಾದ ಮಂಡಿಸಿದ 20 ವಕೀಲರಿಗೆ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫ‌ಲಕ, ಅಭಿನಂದನಾ ಪತ್ರ ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಹಾಗೂ ಇತರರು ಉಪಸ್ಥಿತರಿದ್ದರು.

ಅಮ್ಮ ಎಂದವರನ್ನೂ ಸನ್ಮಾನಿಸುವ ದಿನ ಬರಬಹುದು!: ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಸ್ವಾತಂತ್ರ ಬಂದು 7 ದಶಕಗಳೇ ಕಳೆದರೂ ಯಾವ ಕ್ಷೇತ್ರಗಳ ಲ್ಲಿಯೂ ಸ್ವಂತಿಕೆ ಇಲ್ಲ. ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಇಂದು ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಚಾರವೇ ಆದರೂ, ನಮ್ಮದೇ ನಾಡಿನಲ್ಲಿ ಮಾತೃಭಾಷೆಯಲ್ಲಿ ತೀರ್ಪು ನೀಡಿದವರರಿಗೆ ಪ್ರಶಸ್ತಿ ನೀಡಬೇಕಾಗಿರುವುದು ದುರ್ದೈವದ ಸಂಗತಿ. ಮುಂದೊಂದು ದಿನ ಮನೆಯಲ್ಲಿ ಅಮ್ಮ ಎಂದು ಕರೆಯುವ ಮಕ್ಕಳನ್ನೂ ಸನ್ಮಾನಿಸಬೇಕಾದ ದಿನಗಳು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡದಲ್ಲಿಯೇ ತೀರ್ಪು ಪ್ರಕಟಿಸಿದರೆ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನ್ಯಾಯ ವ್ಯವಸ್ಥೆಯಲ್ಲೂ ಪಾರದರ್ಶಕತೆ ತರುವುದರಿಂದ ಜನರಲ್ಲಿ ನ್ಯಾಯಾಂಗದ ಬಗೆಗೆ ವಿಶ್ವಾಸ ಮೂಡುತ್ತದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರಾಥಮಿಕ ಶಿಕ್ಷಣ ಭಾಷಾ ನೀತಿ ಪೋಷಕರ ವಿವೇಚನೆಗೆ ಬಿಟ್ಟ ಆಯ್ಕೆ ಎಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಹಾಕಬೇಕಿದೆ. ಈ ತೀರ್ಪು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಭವಿಷ್ಯದಲ್ಲಿ ಮಾರಕವಾಗಲಿದೆ.
-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next