Advertisement

ಕನ್ನಡ ಹೃದಯ ಶ್ರೀಮಂತಿಕೆ ಭಾಷೆ:ಸಾಹಿತಿ ಡಾ|ಗುರುಲಿಂಗ

08:51 PM Oct 25, 2021 | Team Udayavani |

ಧಾರವಾಡ: ಭಾರತೀಯ ಸಂಸ್ಕೃತಿಯಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನವಿದೆ. ಕನ್ನಡ ಭಾಷೆಯು ಸಾಮಾನ್ಯವಾದುದಲ್ಲ, ಅದು ಸಮೃದ್ಧವಾದ ಹೃದಯ ಶ್ರೀಮಂತಿಕೆಯಿಂದ ಕೂಡಿದ ಭಾಷೆಯಾಗಿದೆ ಎಂದು ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಹೇಳಿದರು.

Advertisement

ರಂಗಾಯಣವು 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಡಾ| ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಪಂ| ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಅ. 24 ರಿಂದ 31ರವರೆಗೆ ಹಮ್ಮಿಕೊಂಡ “ಕನ್ನಡಕ್ಕಾಗಿ ನಾವು’ ಕನ್ನಡ ರಾಜ್ಯೋತ್ಸವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಿಕವಿ ಪಂಪ, ಕುವೆಂಪು, ದ.ರಾ. ಬೇಂದ್ರೆ ಅವರಂತಹ ಅನೇಕ ಶ್ರೇಷ್ಠ ಸಾಹಿತಿಗಳನ್ನು ನೀಡಿದ ಕನ್ನಡ ಭಾಷೆ ಕರ್ನಾಟಕವನ್ನು ಶ್ರೀಮಂತಗೊಳಿಸಿದೆ. ಆಧುನಿಕ ಕಾಲದಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದಾಗಿ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿದ್ದರೂ ಕೂಡ ಅನೇಕ ಸಾಹಿತಿಗಳು, ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪಣತೊಟ್ಟಿದ್ದಾರೆ ಎಂದರು.

ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾಗೂ ಡಾ|ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ|ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ ಡಾ| ಡಿ.ಎಂ ಹಿರೇಮಠ, ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ, ರಂಗಾಯಣದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುಳಾ ಯಲಿಗಾರ ಮೊದಲಾದವರು ಉಪಸ್ಥಿತರಿದ್ದರು. ರಂಗಾಯಣ ನಿರ್ದೇಶಕ ರಮೇಶ ಎಸ್‌. ಪರವಿನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಪಕ್ಕೀರಪ್ಪ ಮಾದನಭಾವಿ ನಿರೂಪಿಸಿದರು. ಸ್ಮಿತಾ ಅಂಗಡಿ ವಂದಿಸಿದರು.

ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದ ಕಿತ್ತೂರು ಚನ್ನಮ್ಮ ದೃಶ್ಯ ರೂಪಕವು ಮೈನವಿರೇಳುವಂತೆ ಮಾಡಿತು. ಸಿಕಂದರ ದಂಡಿನ ನಿರ್ದೇಶಿಸಿದ ಕಾವ್ಯಂ ನಾಟಕವನ್ನು ರಂಗಸಾಮ್ರಾಟ ಅಭಿನಯ ಶಾಲೆ ಕಲಾವಿದರು ಪ್ರಸ್ತುತಪಡಿಸಿದರು. ಅ.25ರಂದು ಸಂಜೆ 7ಕ್ಕೆ ಪಂ| ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ರಂಗಗೀತೆಗಳು, ಮೈಲಾರ ಮಹಾದೇವ ದೃಶ್ಯ ರೂಪಕವನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡದಿಂದ ಸಮೂಹ ನೃತ್ಯವನ್ನು ಸಂಜೀವ ದುಮಕನಾಳ ಹಾಗೂ ತಂಡದವರು ಪ್ರಸ್ತುತಪಡಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next