Advertisement

ಕನ್ನಡ ವ್ಯಾಕರಣ, ಛಂದಸ್ಸು ಸರಳೀಕರಿಸಬೇಕಿದೆ

08:54 PM Oct 16, 2019 | Lakshmi GovindaRaju |

ಮೈಸೂರು: ಇಂದಿನ ವಿದ್ಯಾರ್ಥಿಗಳಲ್ಲಿ ಕನ್ನಡವನ್ನು ಭಾಷೆಯಾಗಿ ಅಧ್ಯಯನ ಮಾಡುವುದೇ ಒಂದು ಸವಾಲು ಎಂಬ ಮನೋಭಾವ ಮೂಡಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್‌.ಕೆ. ಲೋಲಾಕ್ಷಿ ಹೇಳಿದರು. ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕೆ.ಎಸ್‌. ರೇಣುಕಾಪ್ರಸಾದ್‌ ಅವರ ಶಬ್ದಮಣಿ ದರ್ಪಣದ ಅವಲೋಕನ ಹಾಗೂ ಛಂದೋಲೋಕ ಕೃತಿಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸಾವಿರಾರು ವರ್ಷಗಳ ದೀರ್ಘ‌ ಪರಂಪರೆಯುಳ್ಳ ಕನ್ನಡ ಭಾಷೆಯ ಮೇಲೆ ಹೊಸ ಪೀಳಿಗೆಗೆ ಒಂದು ರೀತಿಯ ಜಿಗುಪ್ಸೆ ಇದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪಠ್ಯದಲ್ಲಿ ಕನ್ನಡವನ್ನು ಭಾಷೆಯಾಗಿ ಓದಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಕನ್ನಡ ವ್ಯಾಕರಣ ಹಾಗೂ ಛಂದಸ್ಸು ಕಬ್ಬಿಣದ ಕಡೆಯಾಗಿದೆ. ಈ ನಿಟ್ಟಿನಲ್ಲಿ ವ್ಯಾಕರಣ ಮತ್ತು ಛಂದಸ್ಸನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಮೂಲಕ ಸರಳೀಕರಿಸುವ ಕೆಲಸ ನಡೆಯಬೇಕಿದೆ ಎಂದರು.

ಒಂದು ಕಾಲದಲ್ಲಿ ಜೈಮಿನಿ ಭಾರತವನ್ನು ಹಳ್ಳಿಗರು ಒಂದೆಡೆ ಸೇರಿ ಅಭ್ಯಾಸ ಮಾಡುವ ಮೂಲಕ ಕಂಠಪಾಠ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಎಲ್ಲರೂ ಮೊಬೈಲ್‌ನಲ್ಲಿಯೇ ಎಲ್ಲರೂ ಕಳೆದುಹೋಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ 16 ಮಂದಿ ಶಿಕ್ಷಕರಿಗೆ ಕರ್ನಾಟಕ ಗುರು ಶಿರೋಮಣಿ, 6 ಮಂದಿಗೆ ಕರ್ನಾಟಕ ಸಾಹಿತ್ಯ ಶಿರೋಮಣಿ ಹಾಗೂ 10 ಮಂದಿಗೆ ಕರ್ನಾಟಕ ಸಂಘಟನಾ ಶಿರೋಮಣಿ ಪ್ರಶಸ್ತಿ ನೀಡಲಾಯಿತು.

ನಂತರ ಸಿಸ್ಟರ್‌ ಲೀನಾ ಮಸ್ಕರೇನಸ್‌ ಸ್ಮರಣಾರ್ಥ ಕವಿಗೋಷ್ಠಿ ನಡೆಯಿತು. ಈ ವೇಳೆ ಮೇಯರ್‌ ಪುಷ್ಪಲತಾ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕವಿ ಡಾ. ಜಯಪ್ಪ ಹೊನ್ನಾಳಿ, ಬಾಲ ಸಾಹಿತ್ಯ ಚಿಂತನ ಬಳಗದ ಅಧ್ಯಕ್ಷ ಡಾ. ಮಾದುಪ್ರಸಾದ್‌ ಹುಣಸೂರು, ರಂಗಕರ್ಮಿ ರಾಜಶೇಖರ ಕದಂಬ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next