“ಓಮಿನಿ’ ಅಂದ್ರೆ ಮೊದಲು ನೆನಪಿಗೆ ಬರುವುದು ಕಾರು. ಈಗ ಇದೇ “ಓಮಿನಿ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂದಹಾಗೆ, “”ಓಮಿನಿ’ ಎಂಬ ಪದಕ್ಕೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂಬ ಅರ್ಥವಿದೆ. ಹಾಗಾಗಿ, ಸಿನಿಮಾದ ಸಬ್ಜೆಕ್ಟ್ಗೆ ಹೊಂದಾಣಿಕೆಯಾಗುವುದರಿಂದ “ಓಮಿನಿ’ ಅಂಥ ಟೈಟಲ್ ಇಡಲಾಗಿದೆ.
“ಓಮಿನಿ’ ಕಾರಿನ ಹೆಸರಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೆ ಸಿನಿಮಾದಲ್ಲಿ ಕಾರ್ ಕೂಡ ಬೇರೆ ಥರದಲ್ಲೇ ಒಂದು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸಿನಿಮಾದ ಟೈಟಲ್ ಬಗ್ಗೆ ವಿವರಣೆ ಕೊಡುತ್ತದೆ ಚಿತ್ರತಂಡ.
ಸದ್ಯ ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಓಮಿನಿ’ ಚಿತ್ರದ ಮೊದಲ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಓಮಿನಿ’ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಶ್ರೀ ಬೆಳ್ಳುಡಿ ಫಿಲಂಸ್’ ಹಾಗೂ “ಎಸ್. ಆರ್ ಗ್ರೂಪ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಓಮಿನಿ’ ಚಿತ್ರಕ್ಕೆ ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ರಾಮು ಸಂಗೀತ, ಎಂ. ಬಿ. ಅಳ್ಳಿಕಟ್ಟಿ ಛಾಯಾಗ್ರಹಣವಿದೆ.
ಸಿದ್ದು ಮೂಲಿಮನಿ, ಪೂಜಾ ಜನಾರ್ದನ, ಅಶ್ವಿನಿ ಚಂದ್ರಶೇಖರ್, ಭರತ್ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು “ಓಮಿನಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದೇ ವೇಳೆ “ಓಮಿನಿ’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಮಂಜು ಹೆದ್ದೂರ್, “ಸಿನಿಮಾದ ಹೆಸರು “ಓಮಿನಿ’ ಅಂತಿದ್ದರೂ, ಓಮಿನಿ ಕಾರಿಗೂ ನಮ್ಮ ಸಿನಿಮಾಕ್ಕೂ ಸಂಬಂಧವಿಲ್ಲ. ಸಿನಿಮಾದೊಳಗೆ ಸಿನಿಮಾದ ಕಥೆಯೊಂದು ನಡೆಯುತ್ತದೆ. ಲವ್, ಸಸ್ಪೆನ್ಸ್, ಹಾರರ್ ಸೇರಿದಂತೆ ಎಲ್ಲಾ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ. ಸದ್ಯ ಟ್ರೇಲರ್ ಬಿಡುಗಡೆ ಮೂಲಕ ಸಿನಿಮಾದ ಪ್ರಮೋಶನ್ಸ್ ಶುರು ಮಾಡಿದ್ದು, ಆಗಸ್ಟ್ 19ಕ್ಕೆ ಸಿನಿಮಾ ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದರು.
“ಓಮಿನಿ’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ತೀರ್ಥಹಳ್ಳಿ ಸುತ್ತಮುತ್ತ ನಡೆಸಲಾಗಿದೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಇದೇ ವೇಳೆ “ಓಮಿನಿ’ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.