“ಕನ್ನೇರಿ’ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. “ಈ ಗಾಳಿ ತಂಗಾಳಿ’ ಹಾಡನ್ನು ಶಾಸಕ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಮಾರ್ಚ್ 4ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಚಿತ್ರದಿಂದ ಮೂರು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿತ್ತು.
ವಿ ರಘು ಶಾಸ್ತ್ರಿ ಬರೆದಿರುವ “ಈ ಗಾಳಿ ತಂಗಾಳಿ’ ಹಾಡಿಗೆ ಶ್ವೇತಾ ಪ್ರಭು ಧ್ವನಿಯಾಗಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿದೆ.
ಈ ಮೊದಲೇ ಹೇಳಿದಂತೆ “ಕನ್ನೇರಿ’ ಮಹಿಳಾ ಪ್ರಧಾನ ಹಾಗು ನೈಜ ಘಟನೆಯಾಧಾರಿತ ಚಿತ್ರ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ “ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಂಡು ಕಥೆ ಹೆಣೆಯಲಾಗಿದೆ.ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ.
ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇಶನದ ಸಾರಥ್ಯ ನೀಸಾಸಂ ಮಂಜು ಅವರದು. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ನಟಿಸಿದ್ದಾರೆ.