ಕನ್ನಡ ಚಿತ್ರರಂಗದಲ್ಲಿ 1954ರಲ್ಲಿ ತೆರೆಕಂಡಿದ್ದ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ ಮುತ್ತುರಾಜ್ ಅವರು ಬೆಳ್ಳಿಪರದೆ ಪ್ರವೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಆಗಿ ರಾರಾಜಿಸಿದ್ದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಐತಿಹಾಸಿಕವಾಗಿ ದಾಖಲಾಗಿದೆ. ಆದರೆ ರಾಜ್ ಕುಮಾರ್ ಅಭಿಯನಯಕ್ಕೂ ಮುನ್ನ ರಾಜಾ ವಿಕ್ರಮ ಮತ್ತು ಜಗನ್ಮೋಹಿನಿ ಸಿನಿಮಾ ಕನ್ನಡದ ಸಿನಿ ಪ್ರೇಕ್ಷಕರಲ್ಲಿ ಸಂಚಲನವನ್ನು ಮೂಡಿಸಿತ್ತು.
ಈ ಸಿನಿಮಾದಲ್ಲಿ ನಟಿಸಿದ್ದು ಕೆಂಪರಾಜ ಅರಸ..ಅಷ್ಟೇ ಅಲ್ಲ ರಾಜಾ ವಿಕ್ರಮ ಸಿನಿಮಾದ ನಿರ್ದೇಶಕರೂ ಕೂಡಾ ಕೆಂಪರಾಜ ಅರಸ ಅವರ ಹೆಗ್ಗಳಿಕೆಯಾಗಿದೆ. ಈ ಸಿನಿಮಾ ತಮಿಳಿನಲ್ಲೂ ಕೆಂಪರಾಜ ಅರಸ್ ನಿರ್ದೇಶಿಸಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಪಳಗಿದ್ದ ಅರಸ್ 1942ರಲ್ಲಿ ಗುಬ್ಬಿ ವೀರಣ್ಣನವರ ಜೀವನ ನಾಟಕ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ವೀರಣ್ಣ ಹಾಗೂ ಶಾಂತಾ ಹುಬ್ಳೀಕರ್ ಕೂಡಾ ಅಭಿನಯಿಸಿದ್ದರು.
1948ರಲ್ಲಿ ಭಕ್ತ ರಾಮದಾಸ ಸಿನಿಮಾದಲ್ಲಿ ಬಾದಶಹನ ಪಾತ್ರ ನಿರ್ವಹಿಸುವ ಮೂಲಕ ಕೆಂಪರಾಜ ಅರಸ್ ಹೆಸರು ಪಡೆದಿದ್ದರು. ಕೊನೆಗೆ 1951ರಲ್ಲಿ ರಾಜಾ ವಿಕ್ರಮ ಸಿನಿಮಾವನ್ನು ನಿರ್ದೇಶಿಸಿ ಅಭಿನಯಿಸಿದ್ದರು. ಇದು ಕನ್ನಡಿಗರ ಮನಸ್ಸನ್ನು ಸೂರೆಗೊಂಡಿತ್ತು. ಅದಕ್ಕೆ ಕಾರಣ 1950ರ ದಶಕ ಪ್ರಾರಂಭವಾಗುವ ವೇಳೆ ಕನ್ನಡ ಚಿತ್ರರಂಗ ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದಿರಲಿಲ್ಲ. ಕನ್ನಡ ಚಿತ್ರ ನಿರ್ಮಾಣದಿಂದ ಹಿಡಿದು ಎಲ್ಲವೂ ಮದರಾಸ್ ಅನ್ನೇ ನೆಚ್ಚಿಕೊಂಡಿತ್ತು. ಆಗೊಂದು, ಈಗೊಂದು ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದ ಸಂದರ್ಭದಲ್ಲಿ ರಾಜಾ ವಿಕ್ರಮ ಕರ್ನಾಟಕದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ರಾಜಾ ವಿಕ್ರಮ ಕಥೆ ಏನೂ ಹೊಸದಾಗಿರಲಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಹೊಸ ಹುಮ್ಮಸ್ಸನ್ನು ನೀಡಿತ್ತು. ಈ ಚಿತ್ರ ಕನ್ನಡದಲ್ಲಿ ದಾಖಲೆಯನ್ನೇ ಅಂದು ನಿರ್ಮಿಸಿತ್ತು.
ಟೆಂಟ್ ಚಿತ್ರ ಮಂದಿರಗಳಲ್ಲಿ ಚಿತ್ರ ಮಂದಿರಕ್ಕೆ ಚಿತ್ರ ಪ್ರಾರಂಭಕ್ಕೆ ಮೊದಲು ಭಕ್ತಿಯಿಂದ ತೆಂಗಿನಕಾಯಿ ಒಡೆದು ಮಂಗಳಾರತಿ ಮಾಡಿದ್ದರಂತೆ. ಒಬ್ಬರಿಂದೊಬ್ಬರಿಗೆ ಈ ಚಿತ್ರದ ವಿಷಯ ಜನರಿಗೆ ತಲುಪಿ ಹಳ್ಳಿಗಳಿಂದ ತಮ್ಮ ಕುಟುಂಬಗಳೊಂದಿಗೆ, ಎತ್ತಿನಗಾಡಿಗಳಲ್ಲಿ ಅನೇಕರು ಪಟ್ಟಣಕ್ಕೆ ಬಂದು ಚಿತ್ರ ನೋಡುತ್ತಿದ್ದರು ಎಂಬುದು ದಾಖಲಾಗಿರುವುದು ಕನ್ನಡ ಚಿತ್ರರಂಗದ ಶ್ರೀಮಂತಿಕೆಯ ಪರ್ವ ಕಾಲಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅದೇ ವರ್ಷ 1951ರಲ್ಲಿ ಶಂಕರ್ ಸಿಂಗ್, ವಿಠಲಾಚಾರ್ಯರ ಜೋಡಿ ತಯಾರಿಸಿದ ಜಗನ್ಮೋಹಿನಿ ಚಿತ್ರ ಕೂಡಾ 25 ವಾರಗಳ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಜಯಭೇರಿ ಬಾರಿಸಿತ್ತು. ಜಗನ್ಮೋಹಿನಿ ಚಿತ್ರದಲ್ಲಿಯೂ ಕೆಂಪರಾಜು ಹೀರೋ ಆಗಿ ಅಭಿನಯಿಸಿದ್ದರು.
ನವಜೀವನ, ನಳದಮಯಂತಿ, ಜಲದುರ್ಗಾ, ಶ್ರೀಕೃಷ್ಣ, ರಾಜಾ ವಿಕ್ರಮ, ಶಿವ ಪಾರ್ವತಿ, ಭಕ್ತ ರಾಮದಾಸ, ಮಹಾನಂದಾ, ಕೃಷ್ಣಾಲೀಲಾ, ಜೀವನ ನಾಟಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕೆಂಪರಾಜ ಅರಸ್ ಅವರು, ಕೆಂಪರಾಜ್ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ ನಳದಮಯಂತಿ, ಜಲದುರ್ಗಾ, ರಾಜಾ ವಿಕ್ರಮ ಹಾಗೂ ಭಕ್ತ ರಾಮದಾಸ ಸಿನಿಮಾವನ್ನು ನಿರ್ದೇಶಿಸಿದ್ದರು. 1954ರಲ್ಲಿ ತಮಿಳಿನಲ್ಲಿ ಕಾರ್ ಕೋಟೈ(ಕಲ್ಲಿನ ಕೋಟೆ) ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಅರಸ್ ಹೀರೋ ಆಗಿ ನಟಿಸಿದ್ದರೆ,ಕೃಷ್ಣ ಕುಮಾರಿ, ಬಿಆರ್ ಪಂತುಲು, ಎಸ್ ವಿ ವೆಂಕಟರಾಮನ್ ಮುಖ್ಯಭೂಮಿಕೆಯಲ್ಲಿದ್ದರು. 1967ರಲ್ಲಿ ನಿರ್ಮಿಸಿದ್ದ ನಳ ದಮಯಂತಿ ಸಿನಿಮಾದಲ್ಲಿ ನರಸಿಂಹ ರಾಜು, ಭಾನುಮತಿ ಅಭಿನಯಿಸಿದ್ದರೂ ಕೂಡಾ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತು ಹೋಗಿತ್ತು.
ಜನಾನುರಾಗಿ ಡಿ.ದೇವರಾಜು ಅರಸ್ ತಮ್ಮ ಕೆಂಪರಾಜು
ಕೆಂಪರಾಜ ಅರಸ್ ಬೇರಾರು ಅಲ್ಲ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಯಾಗಿ ಹೆಸರು ಮಾಡಿದ್ದ ಡಿ.ದೇವರಾಜ ಅರಸ್ ಅವರ ಸಹೋದರ. 1918ರಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನ ಕಲ್ಲಹಳ್ಳಿಯಲ್ಲಿ ಕೆಂಪರಾಜ ಜನಿಸಿದ್ದರು. ಚಿಕ್ಕವಯಸ್ಸಿನಲ್ಲಿ ವೈದ್ಯರಾಗಬೇಕೆಂಬ ಇಚ್ಛೆ ಅವರದ್ದಾಗಿತ್ತಂತೆ, ಆದರೆ ಸ್ವಾತಂತ್ರ್ಯ ಚಳವಳಿ, ಹೋರಾಟದಲ್ಲಿ ಕೆಂಪರಾಜ ತೊಡಗಿಕೊಂಡಿದ್ದರು. ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದ ಸಂದರ್ಭದಲ್ಲಿ ಲಲಿತಾ ಎಂಬವರ ಜೊತೆ ಸ್ನೇಹ, ಬಳಿಕ ಆ ಸ್ನೇಹ ಪ್ರೇಮಕ್ಕೆ ತಿರುಗಿ ವಿವಾಹದಲ್ಲಿ ಅಂತ್ಯಕಂಡಿತ್ತು. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಂತೆ. ಈ ಸಂದರ್ಭದಲ್ಲಿ ತಮ್ಮನಿಗೆ ಬೆಂಬಲವಾಗಿ ನಿಂತಿದ್ದು ಅಣ್ಣ ದೇವರಾಜ ಅರಸ್!
ಹೀಗೆ ಬದುಕಿನ ಹಾದಿ ತಿರುವು ಪಡೆದುಕೊಂಡ ಪರಿಣಾಮ ವೈದ್ಯರಾಗಬೇಕೆಂಬ ಕನಸು ಅರ್ಧಕ್ಕೆ ನಿಂತು ಹೋಗುವಂತಾಗಿತ್ತು. ಬದುಕಿನ ಬಂಡಿ ಸಾಗಲು ಕೆಂಪರಾಜ ಅರಸ್ ಆಯ್ದುಕೊಂಡದ್ದು ಗುಬ್ಬಿ ವೀರಣ್ಣ ನಾಟಕ ಕಂಪನಿ! ನಾಟಕಗಳಲ್ಲಿ ಮಿಂಚಿದ್ದ ಯುವಕನನ್ನು ಗುಬ್ಬಿ ವೀರಣ್ಣ ಸಿನಿಮಾರಂಗದಲ್ಲೂ ಹೆಸರು ಗಳಿಸುವಂತೆ ಮಾಡಿದ್ದರು.
ಚಿತ್ರ ನಿರ್ಮಿಸಿ ಸೋಲು ಕಂಡ ಅರಸ!
ನಳ ದಮಯಂತಿ ಸಿನಿಮಾವನ್ನು ಕೆಂಪರಾಜ ಅರಸರು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಿರ್ದೇಶಿಸಿದ್ದರು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಲೇ ಇಲ್ಲ. ಕಾಡಿನ ಕಥೆ ಕನ್ನಡದಲ್ಲಿ ಕೊನೆಯದಾಗಿ ನಿರ್ಮಿಸಿದ ಚಿತ್ರವಾಯಿತು. ಕನ್ನಡ, ತಮಿಳು, ತೆಲುಗಿನಲ್ಲಿ ಚಿತ್ರ ನಿರ್ಮಿಸಿದ್ದ ಕೆಂಪರಾಜ ಅರಸರು ಆರ್ಥಿಕವಾಗಿ ಹೊಡೆತ ಬಿದ್ದಿದ್ದು, ಇದರಿಂದ ಎಲ್ಲಾ ಆಸ್ತಿ ಕಳೆದುಕೊಂಡು ಚಿತ್ರರಂಗದಿಂದ ದೂರಾಗಿಬಿಟ್ಟಿದ್ದರು.
ಅಣ್ಣ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಂಪರಾಜ ಅರಸ ಕೂಡಾ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ರಾಜಕೀಯದಿಂದ ವಿವಾದಕ್ಕೂ ಕಾರಣರಾಗಿದ್ದ ಕೆಂಪರಾಜ 1982ರಲ್ಲಿ ವಿಧಿವಶರಾಗಿದ್ದರು. ಆದರೆ ಕನ್ನಡ ಚಿತ್ರರಂಗಕ್ಕೆ ಕೆಂಪರಾಜ ಕೊಡುಗೆ ಮಾತ್ರ ಮರೆಯುವಂತದ್ದಲ್ಲ.