Advertisement

ಕನ್ನಡ ಹೋರಾಟಗಾರರೂ ಅಧ್ಯಕ್ಷರಾಗಬಹುದು

11:43 AM Jan 21, 2018 | Team Udayavani |

ಬೆಂಗಳೂರು: “ಸಾಹಿತ್ಯ ಕ್ಷೇತ್ರದಲ್ಲಿ ಇರುವವರು ಮಾತ್ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಅಂತೇನು ಇಲ್ಲ. ಕನ್ನಡ ಪರ ಹೋರಾಟಗಾರರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಹುದು,’ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

Advertisement

ರಾಜಾಜಿನಗರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಅಕ್ಷರ ಲೋಕದಲ್ಲಿ ಇದ್ದವರು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಕನ್ನಡತನಕ್ಕೆ ಧಕ್ಕೆ ಉಂಟಾದಾಗ ರಕ್ಷಣೆಗೆ ಮೊದಲು ಬರುವವರು ಕನ್ನಡ ಪರ ಹೋರಾಟಗಾರರು. ಅವರೇಕೆ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂದು ಪ್ರಶ್ನಿಸಿದರು.

ನಾನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿದ್ದ ವೇಳೆ ವಾಟಾಳ್‌ ನಾಗರಾಜ್‌ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಅಂದುಕೊಂಡಿದ್ದೆ. ಕನ್ನಡಕ್ಕಾಗಿ ಅವರು ಜೀವನವನ್ನೇ ಸವೆಸಿದ್ದಾರೆ. ಕನ್ನಡ ನೆಲ, ಜಲದ ಜತೆಗೆ ಕನ್ನಡ ಭಾಷೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಹೀಗಾಗಿ ನಮ್ಮಲ್ಲಿರುವ ಭ್ರಮೆಗಳನ್ನು ಮೊದಲು ಕಿತ್ತು ಹಾಕಬೇಕು ಎಂದರು.

ವರನಟ ಡಾ.ರಾಜ್‌ಕುಮಾರ್‌ ಅವರ 36 ಚಿತ್ರಗಳನ್ನು ನಿರ್ದೇಶಿಸಿರುವ ಎಸ್‌.ಕೆ.ಭಗವಾನ್‌ ಅವರನ್ನು ರಾಜಾಜಿನಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅವರು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್‌ ಕುಮಾರ್‌, ಮಾಜಿ ಮಹಾಪೌರರಾದ ಜಿ.ಪದ್ಮಾವತಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್‌.ಲೋಕೇಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿ ಹಲವರು ಉಪಸ್ಥಿತರಿದ್ದರು.

Advertisement

ಶಿವನಗರ ವೃತ್ತದಲ್ಲಿ ಹಬ್ಬದ ಸಂಭ್ರಮ: ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಜಾಜಿನಗರದ ಶಿವನಗರ ವೃತ್ತ ಮತ್ತು ವರಕವಿ ದ.ರಾ.ಬೇಂದ್ರೆ ರಸ್ತೆಯಲ್ಲಿ ಹಬ್ಬದ ಕಳೆ ಕಂಡುಬಂತು. ಬಸವೇಶ್ವರ ನಗರದ ಶಾರದಾ ಕಾಲೊನಿ ಮೂಲಕ ಹೊರಟ ಸಮೇಳನಾಧ್ಯಕ್ಷರ ಮೆರೆವಣಿಗೆ ಜಾನಪದ ಸಂಭ್ರಮಕ್ಕೆ ಸಾಕ್ಷಿಯಾಯಿತು.

ತೆರದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರೆವಣಿ ನಡೆದರೆ ಹುಲಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ಇನ್ನಿತರ ಜಾನಪದ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು. ಅತಿಥಿಗಳಿಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ದೊರೆಯಿತು.

ಪರಭಾಷಿಕರಿಗೆ ಕನ್ನಡ ಕಲಿಸಿ: “ನಗರಕ್ಕೆ ಬರುವ ಪರಭಾಷಿಗರಿಗೆ ಕನ್ನಡ ಕಲಿಯಲು ಸರ್ಕಾರೇತರ ಸಂಸ್ಥೆಗಳು ಮುಂದಾಗಬೇಕು. ಉಚಿತ ಕನ್ನಡ ಕಲಿಕೆಗಾಗಿ ಸಂಜೆ ಶಾಲೆಗಳನ್ನು ತೆರೆಯಬೇಕು ಆಗ ಮಾತ್ರ ಸಿರಿಗನ್ನಡಂಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬುವುದಕ್ಕೆ ಅರ್ಥ ಬರುತ್ತದೆ. ನಾನಾ ಕಾರಣಗಳಿಂದಾಗಿ ನಗರಕ್ಕೆ ಆಗಮಿಸುವವರಿಗೆ ಕನ್ನಡ ಕಲಿಸುವ ಕೆಲಸ ನಡೆಯಬೇಕು,’ ಎಂದು ಸಮ್ಮೇಳನಾಧ್ಯಕ್ಷ, ಚಿತ್ರ ನಿರ್ದೇಶಕ ಎಸ್‌.ಕೆ. ಭಗವಾನ್‌ ಹೇಳಿದರು.

ಚಿತ್ರರಂಗಕ್ಕೂ ಕನ್ನಡ ಪರ ಹೋರಾಟಕ್ಕೂ ಅವಿನಾಭಾವ ಸಂಬಂಧವಿದೆ. ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡ ಡಾ.ರಾಜ್‌ಕುಮಾರ್‌ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಿದರು. ಈಗ ಅವರು ಇದ್ದಿದ್ದರೆ ಮಹಾದಾಯಿ, ಎತ್ತಿನ ಹೊಳೆ, ಕಾವೇರಿ ಸೇರಿದಂತೆ ಹಲವು ಜಂಟಿಲ ಸಮಸ್ಯೆಗಳು ಕೊನೆಗೊಳ್ಳುತ್ತಿದ್ದವು.
-ಎಸ್‌.ಕೆ.ಭಗವಾನ್‌, ಸಮ್ಮೇಳನಾಧ್ಯಕ್ಷರು

ಕನ್ನಡತನಕ್ಕೆ ಧಕ್ಕೆಯಾದರೆ ಮೊದಲು ರಕ್ಷಣೆಗೆ ಬರುವವರು ಕನ್ನಡ ಪರ ಹೋರಾಟಗಾರರು. ಕೆಲವರು ಕನ್ನಡ ನೆಲ, ಜಲ, ಭಾಷೆ ಉಳಿವಿಗೆ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಅವರೇಕೆ ಸಮ್ಮೇಳನದ ಅಧ್ಯಕ್ಷರಾಗಬಾರದು? ಮೊದಲು ನಮ್ಮಲ್ಲಿರುವ ಭ್ರಮೆ ಕಿತ್ತೆಸೆಯಬೇಕು.
-ಪ್ರೊ. ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next