Advertisement

ಅರಳುವ ಮುನ್ನವೇ ಕಮರಿ ಹೋದ ಸೌಂದರ್ಯ! 5ತಿಂಗಳ ಗರ್ಭಿಣಿ ಸುಟ್ಟು ಕರಕಲಾಗಿ ಹೋಗಿದ್ದಳು

10:21 AM Oct 20, 2019 | Nagendra Trasi |

ತಾನು ವೈದ್ಯಳಾಗಬೇಕು ಆ ಮೂಲಕ ಸೇವೆ ಮಾಡಬೇಕೆಂಬ ಹಂಬಲದೊಂದಿಗೆ ಎಂಬಿಬಿಎಸ್ ಮಾಡುತ್ತಿದ್ದ ಕೆ.ಎಸ್.ಸೌಮ್ಯ ಸತ್ಯನಾರಾಯಣ್ ಎಂಬಾಕೆ ಮೊದಲ ವರ್ಷದ ಎಂಬಿಬಿಎಸ್ ಮಾಡಿದ ನಂತರ ವೈದ್ಯಳಾಗಬೇಕೆಂಬ ಕನಸನ್ನು ಅರ್ಧಕ್ಕೆ ಕೈಬಿಟ್ಟು ಚಿತ್ತ ಹೊರಳಿಸಿದ್ದು ಚಿತ್ರರಂಗದತ್ತ. ಈಕೆ ಕೈಗಾರಿಕೋದ್ಯಮಿ, ಕನ್ನಡ ಚಿತ್ರರಂಗದ ಚಿತ್ರಕಥೆಗಾರ, ನಿರ್ಮಾಪಕ ಕೆಎಸ್ ಸತ್ಯನಾರಾಯಣ್ ಪುತ್ರಿ ಸೌಂದರ್ಯ. ಕೋಲಾರದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 1976ರ ಜುಲೈ 18ರಂದು ಸೌಂದರ್ಯ ಜನಿಸಿದ್ದರು.

Advertisement

ಒಂದನೇ ತರಗತಿ ನಂತರ ಬೆಂಗಳೂರಿಗೆ ಕುಟುಂಬದ ಜತೆ ಬಂದ ಈಕೆ ತಮ್ಮ ಶಿಕ್ಷಣ ಮುಂದುವರಿಸಿದ್ದರು. ಸಂಗೀತ, ನಾಟಕ, ನಾಟ್ಯದಲ್ಲಿ ಆಸಕ್ತಿ ಹೊಂದಿದ್ದ ಸೌಂದರ್ಯ ಹೆಸರಿಗೆ ತಕ್ಕಂತೆ ಸೌಂದರ್ಯ ದೇವತೆಯಾಗಿದ್ದ ಈಕೆ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಗಂಧರ್ವ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾರಂಗದಲ್ಲಿ ನಟಿಸಿದ್ದ ಪಂಚ  ಭಾಷೆ ತಾರೆ ಸೌಂದರ್ಯ ವಿಧಿಯ ಚಿತ್ತವೇ ಬೇರೆಯಾಗಿತ್ತು.

ಕನ್ನಡದ ದ್ವೀಪ ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ಸೌಂದರ್ಯ ನ್ಯಾಷನಲ್ ಫಿಲ್ಮ್ ಅವಾರ್ಡ್, ಎರಡು ಬಾರಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್, ದಕ್ಷಿಣದ ಫಿಲ್ಮ್ ಫೇರ್ ಅವಾರ್ಡ್, ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಕೀರ್ತಿ ಸೌಂದರ್ಯ ಅವರದ್ದಾಗಿತ್ತು.

1992ರಲ್ಲಿ ಹಂಸಲೇಖಾ ಅವರು ನಿರ್ಮಾಪಕರಾಗಿ, ನಿರ್ದೇಶಿಸಿದ್ದ ಗಂಧರ್ವ ಸಿನಿಮಾದಲ್ಲಿ ನಟಿಸಿದ್ದ ಸೌಂದರ್ಯ, ಅದೇ ವರ್ಷ ಟಾಲಿವುಡ್ ನ ರಾಯತು ಭರತಂ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಸೌಂದರ್ಯ ಆಂಧ್ರಪ್ರದೇಶದಲ್ಲಿ ಅತ್ಯಂತ ಜನಪ್ರಿಯತೆಗಳಿಸಿಕೊಂಡಿದ್ದರು. ತೆಲುಗು ಸಿನಿಮಾರಂಗದಲ್ಲಿ ಮಹಾನಟಿ ಸಾವಿತ್ರಿ ನಂತರ ಜನಪ್ರಿಯತೆ ಗಳಿಸಿದ ಎರಡನೇ ನಟಿಯೇ ಸೌಂದರ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Advertisement

1993ರಲ್ಲಿ ನಟ ರಾಜೇಂದ್ರ ಪ್ರಸಾದ್ ಜತೆ ರಾಜೇಂದ್ರುಡು ಗಜೇಂದ್ರುಡು ಸಿನಿಮಾದಲ್ಲಿ ನಟಿಸಿದ್ದರು. ಹಲೋ ಬ್ರದರ್, ಕೋಡಿ ರಾಮಕೃಷ್ಣ ನಿರ್ದೇಶನದ ಅಮ್ಮೋರು ಚಿತ್ರದಲ್ಲಿ ನಟಿಸಿದ್ದರು. ಹೀಗೆ ಖ್ಯಾತ ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಅಭಿತಾಬ್ ಬಚ್ಚನ್, ಕಮಲ್ ಹಾಸನ್, ವೆಂಕಟೇಶ್, ಪ್ರಭುದೇವ್, ಮಮ್ಮುಟ್ಟಿ, ಮೋಹನ್ ಲಾಲ್, ವಿಷ್ಣುವರ್ಧನ್, ಚಿರಂಜೀವಿ, ಅರ್ಜುನ್ ಸರ್ಜಾ ಜತೆ ನಟಿಸಿದ ಹೆಸರು ಪಡೆದಿದ್ದರು.

ಮೆಗಾ ಸೂಪರ್ ಸ್ಟಾರ್ ಕೃಷ್ಣಾ ಜತೆ 5 ಸಿನಿಮಾದಲ್ಲಿ, ಚಿರಂಜೀವಿಯ 4 ಸಿನಿಮಾ, ಬಾಲಕೃಷ್ಣ ಜತೆ ಒಂದು ಸಿನಿಮಾ, ವೆಂಕಟೇಶ್ ಜತೆಗೆ 8 ಸಿನಿಮಾ, ಪಾರ್ಥಿಬನ್, ವಿಜಯ್ ಕಾಂತ್, ವಿಕ್ರಮ್, ಆನಂದ್, ಕಾರ್ತಿಕ್ ಜತೆ, ಕನ್ನಡ ಚಿತ್ರರಂಗದ ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್, ರವಿಚಂದ್ರನ್, ಶಶಿಕುಮಾರ್, ರಮೇಶ್ ಅರವಿಂದ್, ಅವಿನಾಶ್ ಜತೆ ನಟಿಸಿದ್ದರು.

ಆಪ್ತಮಿತ್ರದ ನಟನೆ ಮರೆಯಲು ಸಾಧ್ಯವೇ?

ಪಿ.ವಾಸು ನಿರ್ದೇಶನದ ಆಪ್ತಮಿತ್ರ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್, ರಮೇಶ್ ಅರವಿಂದ್, ಸೌಂದರ್ಯ ನಟನೆಯನ್ನು ಮರೆಯಲು ಸಾಧ್ಯವೇ? ಆಪ್ತಮಿತ್ರ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸೌಂದರ್ಯ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಆದರೆ ವಿಧಿ ಲಿಖಿತ ಬೇರೆಯದೇ ಆಗಿತ್ತು. ಯಾಕೆಂದರೆ ಸೌಂದರ್ಯ ನಟಿಸಿದ್ದ ಕೊನೆಯ ಸಿನಿಮಾ ಎಂಬ ಇದು ಎಂಬ ಸುಳಿವು ಯಾರಿಗೂ ದೊರಕಿರಲಿಲ್ಲವಾಗಿತ್ತು.

ತನ್ನ 15 ವರ್ಷಗಳ ಸಿನಿಮಾರಂಗದ ಬದುಕಿನಲ್ಲಿ ಎಲ್ಲಾ ಘಟಾನುಘಟಿ ಸ್ಟಾರ್ ನಟರ ಜತೆ ನಟಿಸಿದ್ದ ಸೌಂದರ್ಯ ಬರೋಬ್ಬರಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ತನ್ನ ಬಾಲ್ಯ ಸ್ನೇಹಿತ, ಸಾಫ್ಟ್ ವೇರ್ ಇಂಜಿನಿಯರ್ ಜಿಎಸ್ ರಘು ಜತೆ ಸಪ್ತಪದಿ ತುಳಿದಿದ್ದರು. ಇನ್ನೇನು ಬೆಳ್ಳಿತೆರೆಯ ಕೀರ್ತಿಯ ಉತ್ತುಂಗದಲ್ಲಿರುವಾಗಲೇ ಅದೊಂದು ದುರ್ಘಟನೆ ನಡೆಯದೇ ಹೋಗಿದಿದ್ದರೇ ಇಂದು ಸೌಂದರ್ಯ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರೇನೋ…

ಚುನಾವಣಾ ಪ್ರಚಾರ….ಐದು ತಿಂಗಳ ಗರ್ಭಿಣಿ ಸುಟ್ಟು ಕರಕಲಾಗಿ ಹೋಗಿದ್ದಳು!

2004ರಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದ ಸ್ಟಾರ್ ನಟಿ ಸೌಂದರ್ಯ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಹೊರಟಿದ್ದರು. ಸಹೋದರ ಅಮರನಾಥ್ ಕೂಡಾ ಜತೆಗಿದ್ದರು. ಪೈಲಟ್ ಸೇರಿ ನಾಲ್ವರನ್ನು ಹೊತ್ತೊಯ್ಯಬಲ್ಲ ಪುಟ್ಟ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ನೂರು ಮೀಟರ್ ಎತ್ತರದಲ್ಲಿ ಯಾರು ಊಹಿಸದ ರೀತಿಯಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿತ್ತು. ನೂರಾರು ಮಂದಿ ವೀಕ್ಷಿಸುತ್ತಿದ್ದಂತೆಯೇ ಜಕ್ಕೂರಿನ ಕೃಷಿ ವಿಶ್ವವಿದ್ಯಾಲಯ ಆವರಣದ ಸಮೀಪದ ಅಗ್ನಿ ಹೆಸರಿನ ವಿಮಾನ ಪತನಕ್ಕೀಡಾಗಿತ್ತು…ಎಲ್ಲರ ಕಣ್ಣೆದುರೇ ಐದು ತಿಂಗಳ ಗರ್ಭಿಣಿ ಸ್ಪುರದ್ರೂಪಿ ನಟಿ ಸೌಂದರ್ಯ, ಸಹೋದರ ಅಮರ್ ನಾಥ್, ಪೈಲಟ್ ಕ್ಯಾಪ್ಟನ್ ಜಾಯ್ ಫಿಲಿಪ್ಸ್ ಮತ್ತು ಬಿಜೆಪಿ ಕಾರ್ಯಕರ್ತ ರಮೇಶ್ ಕದಂ ಸುಟ್ಟು ಕರಕಲಾಗಿ ಹೋಗಿದ್ದರು!

ನೂರಾರು ಕನಸುಗಳನ್ನು ಹೊತ್ತಿದ್ದ ಬೊಗಸೆ ಕಂಗಳ ಸೌಂದರ್ಯ ವಿಮಾನ ದುರಂತದಲ್ಲಿ ಸಾವನ್ನಪ್ಪಿದಾಗ ಆಕೆ ವಯಸ್ಸು ಕೇವಲ 31! ಸಾಯುವ ಮುನ್ನ ಸೌಂದರ್ಯ ಬೆಂಗಳೂರಿನಲ್ಲಿ ಅನಾಥ ಮಕ್ಕಳಿಗಾಗಿ ತನ್ನ ತಂದೆ ಹೆಸರಿನಲ್ಲಿ ಮೂರು ಶಾಲೆಗಳನ್ನು ಆರಂಭಿಸಿದ್ದರು. ಸೌಂದರ್ಯ ನಿಧನದ ನಂತರ ತಾಯಿ ಮಂಜುಳಾ ಬೆಂಗಳೂರಿನಲ್ಲಿಯೇ ಮಗಳ ನೆನಪಿಗಾಗಿ ಅಮರ ಸೌಂದರ್ಯ ವಿದ್ಯಾಲಯ ಹೆಸರಿನಲ್ಲಿ ಶಾಲೆ, ಸಂಸ್ಥೆಗಳು ಹಾಗೂ ಅನಾಥಾಶ್ರಮಗಳನ್ನು ಪ್ರಾರಂಭಿಸಿದ್ದರು. ಹೀಗೆ ಸಿನಿಮಾ, ರಾಜಕೀಯರಂಗದಲ್ಲಿ ಅರಳುವ ಮುನ್ನವೇ ಕಮರಿ ಹೋದ ನಟಿ ಸೌಂದರ್ಯ ಬದುಕು ಇಂದಿಗೂ ಸಿನಿಪ್ರಿಯರಿಗೆ ಅರಗಿಸಿಕೊಳ್ಳಲಾರದ ದುರಂತ ಘಟನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next