ವಿಜಯಪುರ: ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡ ನಾಮಫಲಕಗಳಿಂದ ಮಾತ್ರ ಸಾಧ್ಯವಿಲ್ಲ. ಕನ್ನಡ ಕಲಾವಿದರನ್ನ ಬೆಳೆಸಬೇಕು, ಪ್ರೋತ್ಸಾಹಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಗಾಂಧಿ ಚೌಕದ ಮಹಂತಿನ ಮಠ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಪಾ ಆಶ್ರಯದಲ್ಲಿ ಜನ್ಮ ಶತಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸುಧಾರಕ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿಯನ್ನು ಕಸಾಪ ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್ ಅವರಿಂದ ಸ್ವೀಕರಿಸಿ ಮಾತನಾಡಿದರು.
ಸಮಾಜ ಸೇವೆಯನ್ನು ಗುರಿಯಾಗಿಸಿ ಕೊಂಡು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ನಾನು ಹೊರಗಿನ ಕ್ಷೇತ್ರದವನು ಎಂಬ ತಪ್ಪು ಸಂದೇಶ ಹರಡಲಾ ಗುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸೂಚನೆ ಮೇರೆಗೆ ಬೆಂ.ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಸಂಘಟನಾ ಉಸ್ತುವಾರಿಯಾಗಿ ವಹಿಸಿದ ಜವಾಬ್ದಾರಿ ನಿಭಾಯಿಸಲು ಓಡಾಡುತ್ತಿದ್ದೇನೆ.
ಸಾಹಿತ್ಯ ಪರಿಷತ್ ನನಗೆ ನೀಡಿದ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ತೆರಳಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದ ಬಳಿ ಎನ್‌ಎಸ್ ಯುಐ ಕಾರ್ಯಕರ್ತರಿಂದ ಎ.ಸಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು.
ಸರ್ಕಾರಿ ಜೂನಿಯರ್ ಕಾಲೇಜು ಉಪ ಪ್ರಾಂಶುಪಾಲ ವೆಂಕಟೇಶ್, ಶಿಕ್ಷಕ ರುದ್ರೇಶ್ ಮೂರ್ತಿ, ತಾಲೂಕು ಕಸಾಪ ರಾಮಕೃಷ್ಣ ಮೂರ್ತಿ, ಉಪಾಧ್ಯಕ್ಷ ರಾಜಗೋಪಾಲ, ಟೌನ್ ಅಧ್ಯಕ್ಷ ಮುನಿವೀರಣ್ಣ, ಗೌರವ ಕಾರ್ಯದರ್ಶಿ ಶಿವಕುಮಾರ್, ಚಂದ್ರಶೇಖರ್ ಹಡಪದ್ ಮತ್ತಿತರರು ಹಾಜರಿದ್ದರು.