Advertisement

ವಿದೇಶಿ ವಿಮಾನಗಳಲ್ಲೂ ಪಸರಿಸಿದ ಕನ್ನಡ ಡಿಂಡಿಮ

06:45 AM Nov 06, 2018 | Team Udayavani |

ಬೆಂಗಳೂರು:ಪ್ರಯಾಣಿಕರೆ ನಿಮಗೆ ಬ್ರಿಟೀಷ್‌ ಏರ್‌ವೇಸ್‌ಗೆ ಸ್ವಾಗತ, ವಿಮಾನದಲ್ಲಿ ಯಾರಿಗೂ ತೊಂದರೆ ಆಗದಂತೆ ನಿಮ್ಮ ಲಗೇಜುಗಳನ್ನು ವ್ಯವಸ್ಥಿತವಾಗಿ ಇಡಬೇಕು. ವಿಮಾನ ಹಾರಾಟ ಮಾಡುವ ಸಂದರ್ಭದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ನಿಮ್ಮ ಮೊಬೈಲ್‌ ನಿಷ್ಕ್ರಿಯಗೊಳಿಸಿ. ವಿಮಾನದಲ್ಲಿ ದೂಮ್ರಪಾನ ನಿಷೇಧಿಸಲಾಗಿದೆ. ನಾವು ಕನ್ನಡ, ತಮಿಳು ಮಲಯಾಳಿ, ಹಿಂದಿ, ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೇವೆ. ನಿಮಗೆ ಏನೇ ಸಮಸ್ಯೆ ಇದ್ದರೆ ಕನ್ನಡದಲ್ಲಿಯೂ ಮಾತನಾಡಿ, ನಾವು  ಮೂರು ಜನ ಇದ್ದೇವೆ. ನಾವು ಕನ್ನಡದಲ್ಲಿ ಮಾತನಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸುರಕ್ಷತೆಯ ಪಟ್ಟಿಯನ್ನು ನೋಡಿ.

Advertisement

ಹೀಗೆಂದು ಅಚ್ಚ ಕನ್ನಡದಲ್ಲಿ ಉದ್ಘೋಷ ಮಾಡುವುದು ನಮ್ಮ ಬಿಎಂಟಿಸಿ ಅಥವಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಲ್ಲ. ಬ್ರಿಟೀಷ್‌ ಏರ್‌ವೇಸ್‌ನಲ್ಲಿ!

ಕರ್ನಾಟಕದಲ್ಲಿ ಕನ್ನಡ ಮಾತನಾಡಲು ಕನ್ನಡಿಗರೇ ತಾತ್ಸಾರ ತೋರಬಹುದು. ಕನ್ನಡ ಮಹಿಮೆ ಅರಿತಿರುವ ವಿದೇಶಿಗರು ಆಕಾಶದಲ್ಲೂ ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. ಬ್ರಿಟೀಷ್‌ ಏರ್‌ವೇಸ್‌ನಲ್ಲಿ ನೀವು ಬೆಂಗಳೂರಿನಿಂದ ಪ್ರಯಾಣಿಸಿದರೆ ಕನ್ನಡದಲ್ಲಿಯೇ ನಿಮಗೆ ಸ್ವಾಗತಿಸುತ್ತಾರೆ.

ನಮ್ಮನ್ನಾಳಿ ಹೋದ ಬ್ರಿಟಿಷರು ನಮ್ಮ ಸಂಪತ್ತಿನ ಜೊತೆಗೆ ನಮ್ಮ ಕನ್ನಡವನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಉದಾರತೆ ತೋರುತ್ತಿದ್ದಾರೆ. ಆಂಗ್ಲರ ಆಕಾಶದಲ್ಲೂ ಕನ್ನಡ ಡಿಂಡಿಮ ಮೊಳಗುತ್ತಿರುವುದು ಸಂತಸದ ವಿಷಯ. ಕನ್ನಡ ಭಾಷೆಗೆ ನಮ್ಮ ನಾಡಿನಲ್ಲಿಯೇ ಮಾನ್ಯತೆ ದೊರೆಯುತ್ತಿಲ್ಲ ಎಂಬ ಮಾತುಗಳಿಗೆ ವ್ಯತಿರಿಕ್ತವಾದ ಈ ಬೆಳವಣಿಗೆ ನವೆಂಬರ್‌ನಲ್ಲಿ ಕನ್ನಡಿಗರು ಹೆಮ್ಮೆ ಪಡುವ ವಿಷಯ.

ಬ್ರಿಟಿಷ್‌ ಏರ್‌ವೇಸ್‌  ಕನ್ನಡದ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಭಾಷಾ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಗಗನ ಸಖೀಯರಿಗೆ ಕನ್ನಡ ಭಾಷೆಯಲ್ಲಿ ಉದ್ಘೋಷಣೆ ಮಾಡುವುದನ್ನೂ ಕಲಿಸಿದೆ. ಇದು ಬೇರೆ ಭಾಷೆ ಬಾರದ ಕನ್ನಡಿಗರು ಇಂಗ್ಲೆಂಡ್‌ ಪ್ರವಾಸ ಕೈಗೊಂಡರೂ ವಿಮಾನ ಪ್ರಯಾಣದಲ್ಲಿ ಯಾವುದೇ ಭಾಷಾ ಸಮಸ್ಯೆಯಾಗದೇ ಆತಂಕವಿಲ್ಲದೇ ಪ್ರಯಾಣ ಮಾಡುವ ಭರವಸೆಯನ್ನು ತುಂಬಿಸಿದೆ.

Advertisement

ಅದೇ ರೀತಿ ಸಿಂಗಪೂರ್‌ ಮತ್ತು ಹಾಂಕಾಂಗ್‌ಗೆ ತೆರಳುವ ಕಾಪೆ ಪೆಸಿಫಿಕ್‌ ವಿಮಾನಯಾನ ಸಂಸ್ಥೆಯೂ ಕನ್ನಡಿಗರ ಅನುಕೂಲಕ್ಕಾಗಿ ಧ್ವನಿ ಮುದ್ರಿತ ಕನ್ನಡ ಸುರಕ್ಷಾ ಸೂಚನೆಗಳನ್ನು ನೀಡಲಾಗುತ್ತದೆ. ಏರ್‌ ಫ್ರಾನ್ಸ್‌ನಲ್ಲಿಯೂ ಆಗಾಗ ಕನ್ನಡ ಭಾಷೆಯ ಬಳಕೆ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಮಾಡುವ ಕನ್ನಡಿಗರಿಗೆ ವಿದೇಶಕ್ಕೆ ತೆರಳುವಾಗಲೂ ಮಾತೃ ಭಾಷೆಯ ಧ್ವನಿ ಕೇಳುವುದು ಹೆಮ್ಮೆ ಪಡುವಂತೆ ಮಾಡಿದೆ.

ಕನ್ನಡದ ಮೆನು:ಅನೇಕ ವಿದೇಶಿ ವಿಮಾನಯಾನ ಸಂಸ್ಥೆಗಳು ಕನ್ನಡದ ಪ್ರಯಾಣಿಕರಿಗೆ ವಿಮಾನಯಾನದಲ್ಲಿ ಪ್ರಯಾಣಿಸುವಾಗ ಆಹಾರ ಸೇವನೆಯಲ್ಲಿ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ವಿಮಾನಯಾನ ಪ್ರಯಾಣದಲ್ಲಿ ದೊರೆಯುವ ಆಹಾರ ಪದಾರ್ಥಗಳ ಪಟ್ಟಿಯನ್ನೂ ಕನ್ನಡದಲ್ಲಿ ನೀಡುವ ಪರಿಪಾಠ ಆರಂಭಿಸಿವೆ. ಎಮಿರೇಟ್ಸ್‌, ಏರ್‌ ಫ್ರಾನ್ಸ್‌, ಲುಪ್ತಾನ್ಸಾ, ಕಾಪೆ ಫೆಸಿಫಿಕ್‌ ವಿದೇಶಿ ಸೇರಿದಂತೆ ಅನೇಕ ವಿದೇಶಿ ವಿಮಾನಯಾನ ಸಂಸ್ಥೆಗಳು ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ ಕನ್ನಡದ ಮೆನು ಸಿದ್ದಪಡಿಸಿ ಕೊಡುವುದನ್ನು ಆರಂಭಿಸಿದ್ದಾರೆ.

ಕನ್ನಡ ಸಿನೆಮಾ ಪ್ರದರ್ಶನ ಆರಂಭ: ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಬೇಸರ ಕಳೆಯಲು ಕುಳಿತ ಸೀಟಿನ ಎದುರೇ ಟಿವಿ ಇರುವುದರಿಂದ ಅದರಲ್ಲಿ ನಿಮಗೆ ಯಾವ ಭಾಷೆಯ ಕಾರ್ಯಕ್ರಮ ಹಾಗೂ ಸಿನೆಮಾ ಬೇಕೋ ಅದನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಬಹುತೇಕ ವಿಮಾನಯಾನ ಸಂಸ್ಥೆಗಳಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಿ ಸಿನೆಮಾಗಳನ್ನು ಅಳವಡಿಸಲಾಗಿರುತ್ತದೆ. ಅರಬ್‌ ರಾಷ್ಟ್ರಗಳಿಗೆ ತೆರಳುವ ಕನ್ನಡದ ಪ್ರಯಾಣಿಕರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಕನ್ನಡ ಸಿನೆಮಾಗಳನ್ನೂ ನೋಡುವ ಅವಕಾಶವನ್ನು ಕಲ್ಪಿಸಿದೆ. ಈ ಮೂಲಕ ಕನ್ನಡ ಸಿನೆಮಾಗಳಿಗೆ ಮಾರುಕಟ್ಟೆ ವಿಸ್ತಾರವಾಗುತ್ತಿದೆ.

ವಿಮಾನಯಾನದಲ್ಲಿ ಕನ್ನಡದಲ್ಲಿ ಮೆನು ಇರುವುದರಿಂದ ಮತ್ತು ಕನ್ನಡ ಸಿನೆಮಾಗಳನ್ನು ಅಳವಡಿಸಿರುವುದರಿಂದ ಕನ್ನಡದ
ವಾತಾವರಣದಲ್ಲಿಯೇ ನಾವು ವಿದೇಶ ಪ್ರಯಾಣ ಮಾಡುವುದು ಖುಷಿಯಾಗುತ್ತದೆ. ಎಮಿರೇಟ್ಸ್‌ ಸೇರಿ ವಿದೇಶ ವಿಮಾನಯಾನ ಸಂಸ್ಥೆಗಳು ಕನ್ನಡಕ್ಕೆ ಅವಕಾಶ ಕೊಟ್ಟಿರು ವುದು ಹೆಮ್ಮೆ ಅನಿಸುತ್ತದೆ.
– ಎನ್‌. ಎಂ. ಮಂಜುಳಾ, ಅನಿವಾಸಿ ಕನ್ನಡಿಗರು

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next