ಶ್ರೀನಿವಾಸಪುರ: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಬಹುಭಾಷಾ ಕಲಿಕೆ ಅತ್ಯಗತ್ಯ. ಇಲ್ಲಿನ ಜನರ ಆಡು ಭಾಷೆ ತೆಲುಗಾದರೂ ಕನ್ನಡ ಕಲಿಯಲು ಪ್ರತಿರೋಧ ಮಾಡಿಲ್ಲ. ಇವರ ಕನ್ನಡತನ ಎಂದೂ ಅಳಿಸಲಾಗಲಿಲ್ಲ. ಅವರು ತಮ್ಮ ಬದುಕಿನೊಂದಿಗೆ ಆರಾಧಿಸಿಕೊಂಡು ಬಂದಿದ್ದಾರೆ ಎಂದು ಸಮ್ಮೇಳನ ಸರ್ವಾಧ್ಯಕ್ಷ, ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ಗೌನಿಪಲ್ಲಿ ಸಪ್ತಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವೇದಿಕೆಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಪುಂಗವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನ್ನಡ ನಾಡು, ನಾನಾ ಪ್ರಭೇದಗಳಲ್ಲಿ ವಿಸ್ತಾರವಾಗಿ ಬೆಳೆದಿದೆ. ಕವಿಗಳಿಗೆ ಮಾರ್ಗದರ್ಶನ ನೀಡಲೆಂದೇ ರಚನೆಯಾದ ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗದಿಂದ ಹಿಡಿದು ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯದವರೆಗೆ ಕಥೆ ಕಾದಂಬರಿ, ವಿಮರ್ಶೆ, ಸೃಜನ ಶೀಲ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯ ಬೆಳೆದಿರುವುದು ಗಮನಾರ್ಹ ಎಂದರು.ಹಾಗೆ ಕಲ್ಪನಾ ಸಾಹಿತ್ಯದಲ್ಲೇ, ಮಗ್ನರಾಗಿದ್ದ ಸಾಹಿತಿಗಳು ನೆಲದ ಸಂಸ್ಕೃತಿ ಪ್ರತಿಬಿಂಬಿಸುವ ಶ್ರಮ ಜೀವಿಗಳು ಸೃಜನಶೀಲ ಸಾಹಿತ್ಯದ ಕಡೆಗೆ ಕ್ರಮೇಣ ನಂದಿದ್ದನ್ನು ಕೊಂಡಾಡಿದರು.
ಕನ್ನಡ ಅಳವಡಿಕೆ: ನಿತ್ಯ ಆಡು ಭಾಷೆ ತೆಲುಗಾಗಿದ್ದ ಈ ಪ್ರದೇಶದಲ್ಲಿ, ಶಿಕ್ಷಣದ ಕ್ರಾಂತಿಯಿಂದ ಈಗಿನ ಪೀಳಿಗೆ ಕನ್ನಡವನ್ನು ಬಳಸಿ ಆಡು ಭಾಷೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಭಾಷೆ ಬೆಳವಣಿಗೆಗೆ ಸಂಸ್ಕೃತಿ ಆಚಾರ ವಿಚಾರ ಬದುಕು ಶಿಕ್ಷಣ ಅಭಿವೃದ್ಧಿಗೆ ಆದ್ಯತೆ ಸಿಗಬೇಕಾಗಿದೆ. ಇಲ್ಲಿನ ಆ ಕಾಲದ ಶಿಕ್ಷಣ ನನ್ನ ಕಣ್ಣು ತೆರೆಸಿದೆ. ನನ್ನಿಂದೇನಾದರೂ ಸಮಾಜಕ್ಕೆ ಒಳ್ಳೆಯದಾಗಿದ್ದರೆ, ಅದು ಅಂದಿನ ಶಾಲೆಯಲ್ಲಿ ಮೈಗೂಡಿಸಿಕೊಂಡ ನೈತಿಕ ಮೌಲ್ಯಗಳ ಜ್ಞಾನದ ಸಂಕೇತವೇ ಸರಿ ಎಂದು ಸ್ಮರಿಸಿದರು.
ಕನ್ನಡದ ಪ್ರಗತಿಗೆ ಶ್ರಮಿಸಿ: ರಂಗ ಕಲಾಕರ್ಮಿ ಡಾ.ರಮೇಶ್‌ಚಂದ್ರ ದತ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅಷ್ಟಕ್ಕೇ ಸುಮ್ಮನಿದ್ದರೆ ಸಾಲದು. ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿರುವ ಭಾಷೆಯನ್ನು ನಾಡಿನ ಮೂಲೆ ಮೂಲೆಯಲ್ಲೂ ಮತ್ತಷ್ಟು ಮೇರು ಮಟ್ಟಕ್ಕೆ ಬೆಳೆಸಬೇಕು. ಬೆಂಗಳೂರಲ್ಲಿ ಜನರು ಹಣದ ವ್ಯಾಮೋಹದ ಕಡೆ ಹೋಗಿ ಐಟಿ ಬಿಟಿಯಲ್ಲಿ ಬಿದ್ದು ಒದ್ದಾಡುವಂತಾಗಿದೆ. ಪ್ರತಿಯೊಬ್ಬರೂ ಕನ್ನಡದ ಪ್ರಗತಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಪರಿಸರ ಉಳಿಸಿ: ನಿಕಟ ಪೂರ್ವ ಅಧ್ಯಕ್ಷ ವೈ.ವಿ.ವೆಂಕಟಾಚಲ ಸಮ್ಮೇಳನಾಧ್ಯಕ್ಷರಿಗೆ ಪರಿಷತ್ ಧ್ವಜ ಹಸ್ತಾಂತರಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸಿ ಪರಿಸರ ಮಾಲಿನ್ಯ ತಪ್ಪಿಸಲು ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ತಾಲೂಕು ಅಧ್ಯಕ್ಷ ಜಿ.ಎನ್.ಕುಬೇರಗೌಡ, ಸಪ್ತಗಿರಿ ಶಾಲೆ ಕಾರ್ಯದರ್ಶಿ ಟಿ.ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ವೆಂಕಟ್ರಾಮಪ್ಪ, ಪುರಸಭೆ ಅರೋಗ್ಯಾಧಿಕಾರಿ ರಮೇಶ್, ಸಾಹಿತಿ ಚೌಡರೆಡ್ಡಿ, ಕೆ.ಎಂ.ಚೌಡಪ್ಪ, ಕೆ.ವಿ.ರಾಮಚಂದ್ರ, ವಾಸವಿ ಎಸ್.ರವಿಕುಮಾರ್, ಚಲಪತಿ, ನಟರಾಜ್, ಹರೀಶ್, ನಾಗೇಂದ್ರ ಕೊಳ್ಳೂರು, ಸುರೇಶ್ ಉಪಸ್ಥಿತರಿದ್ದರು.