ಪಣಜಿ: ಗೋವಾ ಕನ್ನಡಿಗರ ಬಹುಬೇಡಿಕೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಕರ್ನಾಟಕ ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಕನ್ನಡ ಭವನ ನಿರ್ಮಾಣಕ್ಕೆ ಮೀಸಲಿಟ್ಟಿದ್ದಾರೆ. ಇದಕ್ಕಾಗಿ ಅವರನ್ನು ನಾವು ಅಭಿನಂದಿಸಬೇಕು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಸಿ. ಸೋಮಶೇಖರ್ ಹೇಳಿದರು.
ಗೋವಾದ ವಾಸ್ಕೊದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಅಖೀಲ ಗೋವಾ ಕನ್ನಡ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಡಿನಾಡಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಗೋವಾ ಸರ್ಕಾರವನ್ನು ಮನವಿ ಮಾಡುತ್ತೇನೆ. ಗೋವಾದಲ್ಲಿ ನಾಲ್ಕೈದು ಲಕ್ಷ ಜನ ಕನ್ನಡಿಗರಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಗೋವಾವನ್ನು ಕಟ್ಟಿದವರು ಕನ್ನಡಿಗರು. ಗೋವಾದಲ್ಲಿ ಬೆವರು ಸುರಿಸಿ ದುಡಿಯುವವರು ಕನ್ನಡಿಗರು. ಗೋವಾದಲ್ಲಿ ಕನ್ನಡಿಗರ ರಕ್ಷಣೆ ಬಹಳ ಮುಖ್ಯ. ಕರ್ನಾಟಕದಲ್ಲಿ ನಾವು ಕೊಂಕಣಿ ಅಕಾಡಮಿ ಮಾಡಿದ್ದೇವೆ. ಕರ್ನಾಟಕ ಕೊಂಕಣಿ ಅಕಾಡಮಿಗೆ ನಮ್ಮ ಪ್ರಾಧಿಕಾರವೇ ಕಳೆದ ಒಂದು ವರ್ಷದಲ್ಲಿ 5 ಕೋಟಿ ರೂ. ಗಳನ್ನು ನೀಡಿದೆ. ಗೋವಾದಲ್ಲಿಯೂ ಕನ್ನಡ ಸಾಹಿತ್ಯ ಅಕಾಡಮಿ ಮಾಡಬೇಕು. ಕಾಸರಗೋಡಿನಲ್ಲಿಯೂ ಕಯ್ನಾರ ರೈ ಅವರ ಹೆಸರಿನಲ್ಲಿ ಸಾಹಿತ್ಯ ಅಕಾಡಮಿ ನಿರ್ಮಾಣ ಮಾಡಿ 2 ಕೋಟಿ ರೂ.ಗಳನ್ನು ಅಲ್ಲಿನ ಸರ್ಕಾರ ನೀಡಿದೆ ಎಂದು ಹೇಳಿದರು.
ಬೈನಾದಲ್ಲಿ ಕನ್ನಡಿಗರ ಮನೆ ತೆರವಾದಾಗ ಇಲ್ಲಿ ಮನೆ ಕಳೆದುಕೊಂಡ ಸಾವಿರಾರು ಕನ್ನಡಿಗರ ಆಕ್ರಂದನವನ್ನು ನಾವು ಕಂಡಿದ್ದೇವೆ. ಹಿಂದಿನ ಸರ್ಕಾರಗಳು ಇವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಪ್ರಯತ್ನ ನಡೆಸಿತ್ತು. ಪ್ರಸಕ್ತ ಸರ್ಕಾರ ಕೂಡ ಈ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಾಸ್ಕೊ ಶಾಸಕ ದಾಜಿ ಸಾಲ್ಕರ್, ಗೋವಾದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಕನ್ನಡಿಗರ ಯೋಗದಾನವಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಗೋವಾ ಸರ್ಕಾರದಿಂದ ಜಾಗ ಕೊಡಿಸಲು ಅಗತ್ಯ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಕದ್ ಮಾತನಾಡಿ, ಗೋವಾದಲ್ಲಿ ಒಂದು ಕನ್ನಡ ಭವನ ನಿರ್ಮಾಣವಾಗಬೇಕು. ಕನ್ನಡಿಗರು ಮತ್ತು ಗೋವಾದ ಜನತೆ ಒಬ್ಬರೊಬ್ಬರು ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು ಎಂದರು.
ಮುಖ್ಯ ಅತಿಥಿ ಗೋವಾ ಕಸಾಪ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ವಿಜಯಪುರ-ಬಾಗಲಕೋಟೆ ಜನ ಕಟ್ಟಡ ನಿರ್ಮಾಣದಂತಹ ಕೆಲಸ ಮಾಡಿದರೆ ಧಾರವಾಡ ಭಾಗದ ಜನ ಗೋವಾದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ ಮಾವಜೊ, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಅಖೀಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿದ್ದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಗೋವಾ ಘಟಕದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗಡಿನಾಡ ಕನ್ನಡಿಗರ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಮೇಲೆ ಒಂದು ಅವಲೋಕನ ಕಾರ್ಯಕ್ರಮ ನಡೆಯಿತು. ನಂತರ ಸಾಂಸ್ಕೃತಿಕ ಸಂಭ್ರಮ, ಕವಿಗೋಷ್ಠಿ, ಸಮಾರೋಪ ಸಮಾರಂಭ ನಡೆಯಿತು.