Advertisement
ದಾವಣಗೆರೆ ಜಿಲ್ಲೆಯ ಉದಯದ ಮುನ್ನವೇ ಅಂದರೆ 1996ರಲ್ಲೇ ಕನ್ನಡಮ್ಮನ ಹಬ್ಬವನ್ನ ಅದ್ಧೂರಿಯಾಗಿ ನಡೆಸಿದ ಕೀರ್ತಿ ಆನಗೋಡು ಗ್ರಾಮಕ್ಕೆ ಇದೆ. ಎನ್. ಮಹಾಲಿಂಗಪ್ಪ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಪರೂಪದ ಲೇಖಕಿ ಟಿ. ಗಿರಿಜಾರವರ ಸರ್ವಾಧ್ಯಕ್ಷತೆಯಲ್ಲಿ ಮೊಟ್ಟ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ(10.2.1996) ನಡೆದಿತ್ತು.
Related Articles
Advertisement
ಆನಗೋಡು ಗ್ರಾಮದಲ್ಲಿ ಸಾಹಿತ್ಯದ ಝರಿ.. ಹಿಂದಿನಿಂದಲೂ ಇದೆ. ಆನಗೋಡು ಕವಿ ರೇವಣಸಿದ್ದರ ಕರ್ಮಭೂಮಿ. ರೇವಣಸಿದ್ದಕವಿ, ಮರುಳಸಿದ್ಧರಿಗೆ ಕಾವ್ಯ ರಚಿಸಲು ಸ್ಫೂರ್ತಿ, ಪ್ರೇರಣೆ ನೀಡಿದ ಸ್ಥಳವೂ ಆಗಿದೆ. ಅಂತಹ ಸಾಹಿತ್ಯದ ಹಿನ್ನೆಲೆಯ ಆನಗೋಡು ಗ್ರಾಮ ಸದಾ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಆಟೋಟಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಕಳೆದ ವರ್ಷದಂತೆ ಈ ವರ್ಷವೂ ಆನಗೋಡು ಮತ್ತು ಸುತ್ತಮುತ್ತ ಗ್ರಾಮಸ್ಥರು ಬರದ ಬೇಗೆಯಲ್ಲಿ ಬೇಯುತ್ತಿದ್ದರೂ ಕನ್ನಡಮ್ಮನ ಹಬ್ಬಕ್ಕೆ ಸಜ್ಜಾಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಆನಗೋಡು, ನೇರ್ಲಿಗೆ ಮುಂತಾದ ಗ್ರಾಮಗಳ ಜನಪ್ರತಿನಿಧಿಗಳು, ಮುಖಂಡರು, ಯುವ ಜನಾಂಗ, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಗ್ರಾಮಸ್ಥರು ಟೊಂಕಕಟ್ಟಿ ನಿಂತಿದ್ದಾರೆ.
ಒಟ್ಟಾರೆಯಾಗಿ ಆನಗೋಡು ಗ್ರಾಮದಲ್ಲಿ ಇಂದು ನಡೆಯುತ್ತಿರುವ 8ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆನಗೋಡು ಸಮೀಪದ ರಾಮಗೊಂಡನಹಳ್ಳಿಯವರೇ ಆದ ಆರ್.ಜಿ. ನಾಗರಾಜ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 8ಕ್ಕೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್. ಬಸವಂತಪ್ಪ ರಾಷ್ಟ್ರಧ್ವಜ, ಆನಗೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರವಿ ನಾಡ ಧ್ವಜಾರೋಹಣ ಮಾಡುವರು. 8.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಪ್ರಾರಂಭವಾಗುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್(ವಾಸು) ಚಾಲನೆ ನೀಡುವರು.
ಬೆಳಗ್ಗೆ 11ಕ್ಕೆ ಸಿರಿಗೆರೆ ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿ, ಸಾನ್ನಿಧ್ಯ ವಹಿಸುವರು. ಶಾಸಕ ಪ್ರೊ| ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ನಾಡಿನ ಹಿರಿಯ ವಿದ್ವಾಂಸ ಡಾ| ಹಂ.ಪ. ನಾಗರಾಜಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಇತರರು ಭಾಗವಹಿಸುವರು. ನಿಕಟಪೂರ್ವ ಅಧ್ಯಕ್ಷ ಪ್ರೊ| ಎಚ್.ಎಸ್. ಹರಿಶಂಕರ್ ಈ ಬಾರಿಯ ಸಮ್ಮೇಳನ ಅಧ್ಯಕ್ಷರಿಗೆ ಸರ್ವಾಧ್ಯಕ್ಷತೆ ಹಸ್ತಾಂತರಿಸುವರು. ಸ್ಮರಣ ಸಂಚಿಕೆ, ವಿವಿಧ ಲೇಖಕರ ಪುಸ್ತಕಗಳು ಲೋಕಾರ್ಪಣೆ, ಪ್ರಜಾಸ್ನೇಹಿ… ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಧ್ಯಾಹ್ನ 1ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಡಾ| ಲೋಕೇಶ್ ಒಡೆಯರ್, ವಿಶ್ವಬಂಧು ಶ್ರೀ ಮರುಳಸಿದ್ಧರು- ಜಾತ್ಯತೀತತೆ, ಎನ್.ಟಿ. ಎರ್ರಿಸ್ವಾಮಿ, ಗ್ರಾಮೀಣ ಜನರ ಆರ್ಥಿಕತೆ ಸುಧಾರಣೆಗೆ ಹಣಕಾಸು ಸಂಸ್ಥೆಗಳ ಪಾತ್ರ, ಡಾ| ಎಚ್. ವಿಶ್ವನಾಥ್, ಗ್ರಾಮೀಣ ಸೊಗಡು ಮತ್ತು ಜಾನಪದ ಸಾಹಿತ್ಯ…ವಿಷಯ ಕುರಿತು ವಿಷಯ ಮಂಡನೆ ಮಾಡುವರು. 2.30ಕ್ಕೆ 2ನೇ ಗೋಷ್ಠಿಯಲ್ಲಿ ಎಸ್.ಟಿ. ಶಾಂತ ಗಂಗಾಧರ್, ಕನ್ನಡವೆಂಬುದು, ಡಾ| ಪ್ರಕಾಶ್ ಹಲಗೇರಿ, ಪ್ರಾಚೀನ ಸಾಹಿತ್ಯದ ಮೌಲ್ಯಗಳು, ಅರುಣಾಕುಮಾರಿ ಬಿರಾದಾರ್, ಕನ್ನಡದ ಸ್ತ್ರೀ ರತ್ನಗಳು… ವಿಷಯ ಮಂಡನೆ ಮಾಡುವರು.
ಸಂಜೆ 4ಕ್ಕೆ ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಎ. ಜಗದೀಶ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಂತರ 5.30ಕ್ಕೆ ಬಹಿರಂಗ ಅಧಿವೇಶನದಲ್ಲಿ ಕೆಲವಾರು ನಿರ್ಣಯ ಕೈಗೊಳ್ಳಲಾಗುವುದು. 6ಕ್ಕೆ ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರೋಪದಲ್ಲಿ ವಿದ್ವಾಂಸ ಪ್ರೊ| ಎಲ್.ಎನ್. ಮುಕುಂದರಾಜ್ ಸಮಾರೋಪ ನುಡಿಗಳಾಡುವರು. ಸರ್ವಾಧ್ಯಕ್ಷ ಆರ್.ಜಿ. ಹಳ್ಳಿ ನಾಗರಾಜ್ ಇತರರು ಭಾಗವಹಿಸುವರು.
ಈಚೆಗೆ ಶಿವೈಕ್ಯರಾದ ತ್ರಿವಿಧ ದಾಸೋಹಿ ಡಾ| ಶಿವಕುಮಾರ ಸ್ವಾಮೀಜಿಯವರ ಗೌರವಾರ್ಥ ಮಹಾಮಂಟಪಕ್ಕೆ ಅವರ ಹೆಸರಿಡಲಾಗಿದೆ. ಟಿ. ಗಿರಿಜಾರವರ ನೆನಪಿಗಾಗಿ ವೇದಿಕೆಗೆ ಅವರ ಹೆಸರಿಡುವ ಮೂಲಕ ಗೌರವಿಸಲಾಗುತ್ತಿದೆ.
ಹೋರಾಟದ ಭೂಮಿ…ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಆನಗೋಡು ಗ್ರಾಮ ಹೋರಾಟ ಭೂಮಿ. ರಸಗೊಬ್ಬರದ ಬೆಲೆ ಹೆಚ್ಚಳ ವಿರೋಧಿಸಿ 1992ರ ಸೆ. 13 ರಂದು ಆನಗೋಡಿನಲ್ಲಿ ನಡೆದ ಹೋರಾಟದಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಾಚಾರ್ ಸಾವನ್ನಪ್ಪಿದ್ದರು. ಪ್ರತಿ ವರ್ಷ ಸೆ.13 ರಂದು ಆನಗೋಡು ಗ್ರಾಮದಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ರೈತರ ಹುತಾತ್ಮ ದಿನಾಚರಣೆ ನಡೆಸಲಾಗುತ್ತಿದೆ.