ವಿಜಯಪುರ: ಸರ್ಕಾರ ಕನ್ನಡ ನೆಲದಲ್ಲಿ ಬದುಕುವ ಮರಾಠಿ ಸಮುದಾಯದ ಅಭಿವೃದ್ದಿ ನಿಗಮ ಸ್ಥಾಪಿಸಿದೆಯೇ ಹೊರತು, ಮರಾಠಿ ಭಾಷೆ ಅಥವಾ ಮಹರಾಷ್ಟ ಮರಾಠಿಗರ ಅಭಿವೃದ್ಧಿಗೆ ಸ್ಥಾಪಿಸಿದ ನಿಗಮವಲ್ಲ. ಹೀಗಾಗಿ ಭಾವನೆ, ಮನಸ್ಸುಗಳನ್ನು ಒಡೆಯುವ ಕೆಲಸ ಮಾಡಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮರಾಠಾ ಸಮುದಾಯದ ಅಭ್ಯುದಯಕ್ಕೆ ಸಿಎಂ ಯಡಿಯೂರಪ್ಪ ನಿಗಮ ಸ್ಥಾಪನೆ ಕ್ರಮ ಸೂಕ್ತ ಹಾಗೂ ಸ್ವಾಗತಾರ್ಹ ಎಂದು ಸಮರ್ಥಿಸಿದರು.
ಕರ್ನಾಟಕದಲ್ಲಿರುವ ಮರಾಠ ಸಮುದಾಯದವರು ಶತ ಶತಮಾಗಳಿಂದ ಕನ್ನಡ ನೆಲದಲ್ಲೇ ಬದುಕಿದ್ದಾರೆ. ಮರಾಠ ಸಮುದಾಯದವರ ಸ್ವಾಭಿಮಾನ ಹೆಚ್ಚಿಸಿರುವ ಶಿವಾಜಿ ಮಹಾರಾಜರ ಪೂರ್ವಜರು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕ ಸೊರಟೂರು ಮೂಲದ ಕನ್ನಡಿಗರು. ಅಪಾರ ಗೋ ಸಂಪತ್ತು ಹೊಂದಿದ್ದ ಶಿವಾಜಿ ವಂಶಜರು ಮಹಾರಾಷ್ಟ್ರ ರಾಜ್ಯದ ಶಿಖರಶಿಗಣಾಪು ಗ್ರಾಮಕ್ಕೆ ವಲಸೆ ಹೋಗಿದ್ದಾರೆ. ಇತಿಹಾಸದ ಅರಿವಿಲ್ಲದ ಜನರಿಂದ ಮಾತ್ರ ಪ್ರತಿರೋಧ ಮಾಡಲಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: ಭಾರತದಲ್ಲಿ ‘ದೆಹಲಿಯೇ ಬೆಸ್ಟ್ ಸಿಟಿ’: ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿ ಬಿಡುಗಡೆ !
ಈಗಲೂ ಕನ್ನಡದ ಮರಾಠಿಗರು ಕನ್ನಡದಲ್ಲೇ ವ್ಯವಹರಿಸುತ್ತಾರೆ. ಮರಾಠಿ ಸಮುದಾಯದ ಜನರಲ್ಲಿಯೂ ಅನೇಕರು ಬಡವರಿದ್ದಾರೆ. ಅವರ ಅಭಿವೃದ್ಧಿಗೆ ನಿಗಮ ಸ್ಥಾಪಿಸಿದರೆ ಎಲ್ಲರೂ ಮುಕ್ತವಾಗಿ ಸ್ವಾಗತಿಸಬೇಕು ಎಂದರು.
ಹೀಗಾಗಿ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5 ರ ಬಂದ್ ಕೈಬಿಡಬೇಕು ಎಂದು ಮನವಿ ಮಾಡಿದರು. 40 ವರ್ಷಗಳ ಹಿಂದೆ ಬಸವ ಜಯಂತಿ ಅಚರಿಸಿದವರೇ ಮಹಾರಾಷ್ಟ ರಾಜ್ಯದಲ್ಲಿ ಎಂಬುದನ್ನು ನಾವೆಲ್ಲ ಅರಿಯಬೇಕು. ಇದರಿಂದ ಅನ್ಯರ ಭಾವನೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ ಜೋಡೆತ್ತುಗಳ ಹವಾ: 14.55 ಟನ್ ಕಬ್ಬು ತುಂಬಿದ ಗಾಡಿ ಎಳೆದ ಎತ್ತುಗಳು !