ಬೆಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೀಗ ದಶಮಾನೋತ್ಸವದ ಸಂಭ್ರಮ. ಆದರೆ, ಈ ಸಂಭ್ರಮ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆಯೇ ಹೊರತು ಶಾಸ್ತ್ರೀಯ ಭಾಷೆ ಸ್ಥಾನಮಾನದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದು ದುರಂತ. 2008ರ ಅ. 31ರಂದು ಆಗಿನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರು ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿ ನ. 1ರ ಕರ್ನಾಟಕ ರಾಜ್ಯೋತ್ಸವವನ್ನು ಸ್ಮರಣೀಯಗೊಳಿಸಿದರು. ಅದರಂತೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತಾದರೂ ನಂತರ ದ ಬೆಳವಣಿಗೆಗಳು ಪ್ರಶ್ನಾರ್ಹವಾಗಿಯೇ ಉಳಿದವು ಬಿಟ್ಟರೆ, ಹತ್ತು ವರ್ಷವಾಗುತ್ತಿದ್ದರೂ ಶಾಸ್ತ್ರೀಯ ಭಾಷೆ ಸ್ಥಾನಮಾನದ ಲಾಭವನ್ನು ಕನ್ನಡಕ್ಕೆ ಒದಗಿಸಿಕೊಡಲು ಹೆಚ್ಚಿನ ಕೆಲಸಗಳೇನೂ ಆಗಿಲ್ಲ. ಹೌದು, ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ಕನಿಷ್ಠ ಕಟ್ಟಡ, ಆಡಳಿತ ಮಂಡಳಿ, ನಿರ್ದೇಶಕರ ನೇಮಕ ಮುಂತಾದ ಪ್ರಾಥಮಿಕ ಪ್ರಕ್ರಿಯೆಗಳೂ ನಡೆದಿಲ್ಲ. ಕೇವಲ ಘೋಷಣೆಯೊಂದಿಗೆ ನಿಂತ ನೀರಾಗಿದೆ.
2008ರಲ್ಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತ್ತಾದರೂ ತಮಿಳುನಾಡಿನ ಗಾಂಧಿ ಎಂಬುವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಲಿಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರವೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಇದಕ್ಕೆ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದುದೂ ಒಂದು ಕಾರಣವಾಗಿತ್ತು.
2011ರಲ್ಲಿ ಮೈಸೂರಿನಲ್ಲಿರುವ ಭಾಷಾ ಸಂಸ್ಥಾನದ ಆವರಣದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆಯಾಯಿತು. ಕೇಂದ್ರದಿಂದ ಸುಮಾರು 5 ಕೋಟಿ ರೂ. ಬಿಡುಗಡೆಯಾಯಿತು. ಈ ಪೈಕಿ ಒಂದು ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ಮೂರು ಎಕರೆ ಜಮೀನು ಗುರುತಿಸಿ ಖಾತೆ ಮಾಡಿಸಿ, ಅದಕ್ಕಾಗಿ ಮೂರು ಕೋಟಿ ರೂ. ನಿಗದಿಪಡಿಸಲಾಯಿತು. ಅಷ್ಟಕ್ಕೇ ಕೆಲಸ ನಿಂತಿದೆ.
2011ರಲ್ಲಿ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆ ತಿರಸ್ಕರಿಸಿದ್ದ ಕೇಂದ್ರ, ಯಾವ ರೀತಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿ ಪತ್ರ ಬರೆದಿತ್ತು. ಅದರಂತೆ 2015ರಲ್ಲಿ ಹೊಸ ಪ್ರಸ್ತಾವನೆ ಕಳುಹಿಸಲಾಗಿತ್ತು. ಇನ್ನೊಂದೆಡೆ 2016ರಲ್ಲಿ ಗಾಂಧಿ ದಾಖಲಿಸಿದ್ದ ಪ್ರಕರಣ ಇತ್ಯರ್ಥವಾಗಿ, ತೊಡಕು ನಿವಾರಣೆಯಾಗಿತ್ತು. ಈ ಮಧ್ಯೆ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭ್ಯವಾದ ಬಳಿಕ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನದಿಂದ ಬೆಂಗಳೂರಿಗೆ ಸ್ಥಳಾಂತರಿಸಲು
ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗವನ್ನೂ ನಿಗದಿಪಡಿಸಲಾಗಿತ್ತು. 2016ರ ಏ.25ರಂದು ಅಂದಿನ ಕನ್ನಡ ಅಭಿವೃದಿಟಛಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅವರು ರಾಜ್ಯದಿಂದ ನಿಯೋಗವೊಂದನ್ನು ಕರೆದೊಯ್ದು, ದೆಹಲಿಯಲ್ಲಿದ್ದ ರಾಜ್ಯದ ಸಂಸದರ ನೆರವು ಪಡೆದು ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮತಿ ಇರಾನಿ ಅವರನ್ನು ಭೇಟಿ ಮಾಡಿ ಅಧ್ಯಯನ ಕೇಂದ್ರ ಸ್ಥಳಾಂತರಿಸುವಂತೆ ಕೋರಿದ್ದರು.
ಅದಕ್ಕೆ ಸ್ಪಂದಿಸಿದ್ದ ಕೇಂದ್ರ ಸಚಿವರು, ತಾತ್ಕಾಲಿಕ ಕಚೇರಿಗೆ ಕಟ್ಟಡ ತೋರಿಸಿದರೆ 15 ದಿನಗಳಲ್ಲಿ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಕಟ್ಟಡ ಗುರುತಿಸುವ ಕಾರ್ಯ ಆರಂಭವಾಯಿತಾದರೂ ಅದು ಬೆಂಗಳೂರಿನಲ್ಲಿರಬೇಕೋ, ಅಥವಾ ಸೂರಿನಲ್ಲಿರಬೇಕೋ ಎಂಬ ಪ್ರಶ್ನೆ ಎದುರಾಯಿತು. ಸಮಸ್ಯೆ ಬಗೆಹರಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಶಾಸ್ತ್ರೀಯ ಭಾಷಾ ಕೇಂದ್ರದ ಯೋಜನಾ ನಿರ್ದೇಶಕ ಖಂಡೋಬಾ ಅವರ ಸಂಚಾಲಕತ್ವದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹನುಮಂತಯ್ಯ ಮತ್ತು ತಾರಾನಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಕೇಂದ್ರೀಯ ಭಾಷಾ ಸಂಸ್ಥಾನದಿಂದ ಪ್ರತ್ಯೇಕಗೊಳಿಸಬೇಕೇ? ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಬೇಕೇ? ಈ ಕೇಂದ್ರಕ್ಕೆ ಮೈಸೂರು ಮತ್ತು ಬೆಂಗಳೂರು ಪೈಕಿ ಯಾವುದು ಸೂಕ್ತ? ಎಂಬ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಸುವಂತೆ ಈ ಸಮಿತಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿತ್ತು. ಈ ಪೈಕಿ ಹನುಮಂತಯ್ಯ ಅವರು ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ತಾರನಾಥ್ ಅವರು ಮೈಸೂರಿನಲ್ಲಿ ಇರಬೇಕು ಎಂದು ಹೇಳಿದ್ದರು. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಕಾರಣ ಅವರು ಕೂಡ ಕೇಂದ್ರ ಮೈಸೂರಿನಲ್ಲಿದ್ದರೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಹೀಗಾಗಿ ಕಟ್ಟಡ ಗುರುತಿಸುವ ಕಾರ್ಯವೂ ನೆನೆಗುದಿಗೆ ಬಿತ್ತು. ಇದರಿಂದಾಗಿ ಕೇಂದ್ರದಿಂದ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ಇದುವರೆಗೆ ಬರಬೇಕಾಗಿದ್ದ ಹತ್ತಾರು ಕೋಟಿ ರೂಪಾಯಿ ಬಾರದೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಎಂಬುದು ದಾಖಲೆಗಷ್ಟೇ ಸೀಮಿತವಾಗಿದೆ.
– ಪ್ರದೀಪ್ ಕುಮಾರ್ ಎಂ.