Advertisement

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

01:11 PM May 17, 2024 | Team Udayavani |

ತೆಲಂಗಾಣದಲ್ಲಿ 10 ದಿನಗಳ ಕಾಲ 400ಕ್ಕೂ ಹೆಚ್ಚು ಚಿತ್ರಮಂದಿರಗಳು ತನ್ನ ಪ್ರದರ್ಶನವನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಅದಕ್ಕೆ ಕಾರಣ ಸಿನಿಮಾ ಕೊರತೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲೂ ಯಾವ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಜೊತೆಗೆ ಐಪಿಎಲ್‌, ಚುನಾವಣೆ ಎಂದು ಜನ ಚಿತ್ರಮಂದಿರಕ್ಕೂ ಬರುತ್ತಿಲ್ಲ… ಸುಖಾಸುಮ್ಮನೆ ಥಿಯೇಟರ್‌ ನಡೆಸಿದರೆ ಖರ್ಚು ಭರಿಸುವುದು ಕಷ್ಟ ಎಂಬ ಕಾರಣಕ್ಕೆ ಅಲ್ಲಿನ ಪ್ರದರ್ಶಕರ ಸಂಘ ಈ ನಿರ್ಧಾರಕ್ಕೆ ಬಂದೇ ಬಿಟ್ಟಿದೆ.

Advertisement

ಇದು ತೆಲಂಗಾಣದಲ್ಲಿ ತಾನೇ ಎಂದು ಕನ್ನಡ ಚಿತ್ರರಂಗ ಅಸಡ್ಡೆ ತೋರಿಸುವಂತಿಲ್ಲ. ಮುಂದೊಂದು ದಿನ ಕರ್ನಾಟಕದಲ್ಲೂ ಈ ಪರಿಸ್ಥಿತಿ ತಲೆದೋರಿದರೂ ಅಚ್ಚರಿ ಇಲ್ಲ. ಇವತ್ತು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳನ್ನು ನಡೆಸುವುದು ಸವಾಲಿನ ಕೆಲಸ. ಈ ನಡುವೆ ಚಿತ್ರರಂಗದಿಂದ ಸಿನಿಮಾಗಳು ಪೂರೈಕೆಯಾಗದೇ ಇದ್ದಾಗ ಚಿತ್ರಮಂದಿರ ನಡೆಸುವುದು ಕಷ್ಟದ ಕೆಲಸ. ಇದೇ ಕಾರಣದಿಂದ ಇವತ್ತು ಅನೇಕ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುತ್ತಿವೆ.

ತಾತ್ಕಾಲಿಕ ಸ್ಥಗಿತ

ಕರ್ನಾಟಕದಲ್ಲಿ 550ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿವೆ. ಆದರೆ, ಪ್ರಸ್ತುತ ಇದರಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿವೆ ಎಂದರೆ ಬರುವ ಉತ್ತರ 300 ಪ್ಲಸ್‌. ಅದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಿನ ಸಿನಿಮಾಗಳ ಕೊರತೆ. ನಗರದೊಳಗಿನ ಚಿತ್ರಮಂದಿರಗಳು ಕೆಲವು ಶೋಗಳೊಂದಿಗೆ ಚಿತ್ರಮಂದಿರ ನಡೆಸುತ್ತಿದ್ದರೆ, ತಾಲೂಕು, ಜಿಲ್ಲಾ ಕೇಂದ್ರಗಳ ಅದೆಷ್ಟೋ ಚಿತ್ರಮಂದಿರಗಳು ಸದ್ಯಕ್ಕೆ ತಾತ್ಕಾಲಿಕವಾಗಿ ಶೋ ನಿಲ್ಲಿಸಿವೆ. ಈ ಮೂಲಕ ಅನವಶ್ಯಕ ವೆಚ್ಚವನ್ನು ತಪ್ಪಿಸುತ್ತಿವೆ.

ಈ ಕುರಿತು ಮಾತನಾಡುವ ವೀರೇಶ್‌ ಚಿತ್ರಮಂದಿರದ ಮಾಲೀಕರು ಹಾಗೂ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, “ತೆಲಂಗಾಣದ ಚಿತ್ರಮಂದಿರಗಳ ಸ್ಥಿತಿ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ನಮ್ಮಲ್ಲಿ ಈಗಾಗಲೇ 200ರಿಂದ 250 ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ. ಉಳಿದ ಚಿತ್ರಮಂದಿರಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಶೋಗಳು ನಡೆಯುತ್ತಿಲ್ಲ. ಅದಕ್ಕೆ ಕಾರಣ ಸಿನಿಮಾದ ಕೊರತೆ. ಇವತ್ತು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರ ನಡೆಸುವುದು ಕಷ್ಟವಿದೆ. ಇಂತಹ ಸಮಯದಲ್ಲಿ ಶೋ ನಡೆಸುವ ಬದಲು ಸ್ಥಗಿತಗೊಳಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಕೆಲವು ಚಿತ್ರಮಂದಿರಗಳು ಬಂದಿವೆ’ ಎನ್ನುತ್ತಾರೆ.

Advertisement

ಬದ್ಧತೆಯ ಕೊರತೆ

ಒಂದು ಸಮಯದಲ್ಲಿ ವೈಭವದಲ್ಲಿ ಮೆರೆದ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಇವತ್ತಿನ ಈ ಸ್ಥಿತಿಗೆ ಕಾರಣವೇನು ಎಂದರೆ, ಬದ್ಧತೆಯ ಕೊರತೆ ಎಂಬ ಉತ್ತರ ಚಂದ್ರ ಶೇಖರ್‌ ಅವರಿಂದ ಬರುತ್ತದೆ. “ಇವತ್ತು ಚಿತ್ರರಂಗದಲ್ಲಿ ಬದ್ಧತೆ ಕಡಿಮೆಯಾಗಿದೆ. ನಾನು ಯಾವುದೇ ಒಂದು ವಿಭಾಗದ ಬಗ್ಗೆ ಹೇಳುತ್ತಿಲ್ಲ. ಚಿತ್ರರಂಗವೆಂದರೆ ಅದೊಂದು ಕುಟುಂಬ. ಒಂದು ಸಿನಿಮಾ ಹೊರಬರ ಬೇಕಾ ದರೆ ಅಲ್ಲಿ ಎಲ್ಲಾ ವಿಭಾಗಗಳು ಭಾಗಗಳು ಬದ್ಧತೆಯಿಂದ ಕೆಲಸ ಮಾಡ ಬೇಕಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಬದ್ಧತೆ ಕಡಿಮೆಯಾಗಿದೆ’ ಎನ್ನುತ್ತಾರೆ.

ರೆಗ್ಯುಲರ್‌ ನಿರ್ಮಾಪಕರು ದೂರ

ಅದೊಂದು ಸಮಯವಿತ್ತು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ವರ್ಷಕ್ಕೆ ಎರಡು ಮೂರು ಸ್ಟಾರ್‌ ಸಿನಿಮಾಗಳನ್ನು ಮಾಡುತ್ತಿದ್ದವು. ಸ್ಟಾರ್‌ಗಳು ಕೂಡಾ ಆ ನಿರ್ಮಾಪಕರ ಜೊತೆ ಅನ್ಯೋನ್ಯವಾಗಿದ್ದು, ಸಿನಿಮಾ ಮುಗಿಸಿಕೊಡುತ್ತಿದ್ದರು. ಆದರೆ, ಕಳೆದ ಒಂದಷ್ಟು ವರ್ಷಗಳಿಂದ ರೆಗ್ಯುಲರ್‌ ನಿರ್ಮಾಪಕರೆನಿಸಿಕೊಂಡವರು ಸಿನಿಮಾರಂಗದಿಂದ ದೂರವಾಗುತ್ತಿದ್ದಾರೆ.

ಇದು ಕೂಡಾ ಇವತ್ತಿನ ಚಿತ್ರರಂಗದ ಸ್ಥಿತಿಗೆ ಕಾರಣ. ಈ ಕುರಿತು ಮಾತನಾಡುವ ಚಂದ್ರಶೇಖರ್‌, “ನೀವೇ ಸೂಕ್ಷ್ಮವಾಗಿ ಗಮನಿಸಿ ಮೂರ್‍ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದ ರೆಗ್ಯುಲರ್‌ ನಿರ್ಮಾಪಕರೆನಿಸಿಕೊಂಡಿದ್ದವರು ಈಗ ಸಿನಿಮಾರಂಗದಿಂದ ದೂರವಾಗಿದ್ದಾರೆ. ಇವತ್ತಿನ ವ್ಯವಸ್ಥೆಯಲ್ಲಿ ಸಿನಿಮಾ ಮಾಡೋದು ಕಷ್ಟ ಎಂಬ ಭಾವನೆ ಅವರಲ್ಲಿದೆ’ ಎನ್ನುತ್ತಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next