ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೆ ತಯಾರಾಗಿರುವ “ದ ರೂಲರ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ “ದ ರೂಲರ್’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
“ದ ರೂಲರ್’ ನೈಜ ಘಟನೆಗಳನ್ನಾಧರಿಸಿ ತೆರೆಗೆ ಬರುತ್ತಿರುವ ಸಿನಿಮಾವಾಗಿದೆ. ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಮತ್ತು ಈಗಲೂ ಅಲ್ಲಲ್ಲಿ ನಡೆಯುತ್ತಿರುವ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.
ಸಂವಿಧಾನವೊಂದು ಜನಸಾಮಾನ್ಯರಿಗೆ ಎಂಥ ಆಸರೆ ಮತ್ತು ಶಕ್ತಿ ಕೊಡುತ್ತದೆ. ಸಂವಿಧಾನ ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥದ್ದು ಎಂಬ ವಿಷಯವನ್ನು ಮೂಲವಾಗಿಸಿಕೊಂಡು “ದ ರೂಲರ್’ ಸಿನಿಮಾವನ್ನು ಮಾಡಲಾಗಿದೆ. ಈ 5ಜಿ ಜಮಾನದಲ್ಲೂ ಕೂಡ ಜಾತಿ ಎಂಬ ಪಿಡುಗು ಎಷ್ಟರ ಮಟ್ಟಿಗೆ ಸಮಾಜದಲ್ಲಿ ಬೇರೂರಿದೆ ಅದರ ಪರಿಣಾಯ ಏನಾಗುತ್ತಿದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಇನ್ನು ಬಿಡುಗಡೆಯಾಗಿರುವ “ದ ರೂಲರ್’ ಸಿನಿಮಾದ ಟೀಸರ್‌ನಲ್ಲಿ ಜಾತಿ ವೈಷಮ್ಯ, ಸಮುದಾಯಗಳ ಸಂಘರ್ಷದಲ್ಲಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ದರೆ, ಮತ್ತೂಂದು ಕಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನ ಪ್ರತಿಪಾದಿಸಿ, ಅದರ ಶಕ್ತಿಯನ್ನ ಪ್ರದರ್ಶಿಸುವ ಮತ್ತೂಂದು ಮಜಲನ್ನ ಅನಾವರಣಗೊಳಿಸಲಾಗಿದೆ. ಟೀಸರ್ ಬಿಡುಗಡೆ ಯಾದ ಕೆಲವೇ ದಿನಗಳಲ್ಲಿ ಒಂದು ಮಿಲಿಯನ್ ವೀವ್ಸ್ ಪಡೆದುಕೊಂಡಿದ್ದು, ಚಿತ್ರತಂಡದ ಮೊಗದಲ್ಲಿ ನಗು ಮೂಡಿಸಿದೆ.
ಸಾಮಾಜಿಕ ಹೋರಾಟಗಾರ ಹಾಗೂ 150ಕ್ಕೂ ಹೆಚ್ಚು ಅಂತರ್ಜಾತೀಯ ವಿವಾಹಗಳನ್ನ ಮಾಡಿಸಿರುವ ಕೋಲಾರದ ಡಾ. ಕೆ. ಎಂ ಸಂದೇಶ್ “ದ ರೂಲರ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. “ಎಂ. ಎನ್. ಎಂ ಮೂವೀಸ್’ ಬ್ಯಾನರ್‌ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ದ ರೂಲರ್’ ಸಿನಿಮಾಕ್ಕೆ ಉದಯ್ ಭಾಸ್ಕರ್ ನಿರ್ದೇಶನ ಮಾಡಿದ್ದಾರೆ.
ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಪುನೀತ್, ಸಂದೇಶ್ ಮೊದಲಾದವರು “ದ ರೂಲರ್’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕರುಣ್ ಕೆ.ಜಿ.ಎಫ್ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ಪವರ್ ಆಫ್ ಕಾನ್ಸ್ಟಿಟ್ಯೂಷನ್’ ಎಂಬ ಅಡಿಬರಹವನ್ನು ಇಟ್ಟುಕೊಂಡಿರುವ “ದ ರೂಲರ್’ ಸಿನಿಮಾವನ್ನು ಶೀಘ್ರದಲ್ಲಿಯೇ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.