Advertisement

9ರಿಂದ ಕನ್ನಡ ಸಿನಿಮಾ ಬಿಡುಗಡೆ, ಪ್ರದರ್ಶನವಿಲ್ಲ!

12:00 PM Mar 02, 2018 | |

ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೆ ಯುಎಫ್ಒ ಹಾಗೂ ಕ್ಯೂಬ್‌ (ಡಿಜಿಟಲ್‌ ಸಿನಿಮಾ ಪ್ರದರ್ಶಕ ಸಂಸ್ಥೆಗಳು) ವಿಧಿಸಿರುವ ದುಬಾರಿ ವೆಚ್ಚವನ್ನು ವಿರೋಧಿಸಿ ಮಾರ್ಚ್‌ 9ರಿಂದ ಯಾವುದೇ ಹೊಸ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. 

Advertisement

ಯುಎಫ್ಒ ಹಾಗೂ ಕ್ಯೂಬ್‌ ದರ ಕಡಿತಗೊಳಿಸುವ ನಿಟ್ಟಿನಲ್ಲಿ ಆರು ರಾಜ್ಯಗಳ ಚಲನಚಿತ್ರ ಮಂಡಳಿಗಳು ನಡೆಸಿದ ಸಭೆ ವಿಫ‌ಲವಾದ ಹಿನ್ನೆಲೆಯಲ್ಲಿ ಮಾ.2ರಿಂದಲೇ ಯುಎಫ್ಒ-ಕ್ಯೂಬ್‌ಗ ಯಾವುದೇ ಸಿನಿಮಾ ನೀಡದಿರುವ ನಿರ್ಧಾರಕ್ಕೆ ಆರು ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗಳು ಬಂದಿದ್ದವು.

ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ವಾರ ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು, ಮಾ.9ರಿಂದ ಬಿಕ್ಕಟ್ಟು ಬಗೆಹರಿಯುವವರೆಗೆ ಯುಎಫ್ಒ-ಕ್ಯೂಬ್‌ ಮೂಲಕ ಯಾವುದೇ ಸಿನಿಮಾ ಪ್ರದರ್ಶನ ಮಾಡದಿರಲು ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಯುಎಫ್ಒ -ಕ್ಯೂಬ್‌ನ ದುಬಾರಿ ದರ ಕುರಿತು ನಡೆದ ಸಭೆಗಳು ವಿಫ‌ಲವಾದ ಹಿನ್ನೆಲೆಯಲ್ಲಿ ಇಂದಿನಿಂದ ಯಾವುದೇ ಸಿನಿಮಾಗಳನ್ನು ಯುಎಫ್ಒ-ಕ್ಯೂಬ್‌ ಮೂಲಕ ಪ್ರದರ್ಶಿಸದಿರಲು ಕರ್ನಾಟಕ, ತಮಿಳುನಾಡು, ಆಂಧ್ರ,

ತೆಲಂಗಾಣ, ಕೇರಳ ಹಾಗೂ ಪುದುಚೇರಿ ರಾಜ್ಯಗಳ ವಾಣಿಜ್ಯ ಮಂಡಳಿ ನಿರ್ಧರಿಸಿವೆ. ಆದರೆ, ನಾವು ಈ ವಾರ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಅದಕ್ಕೆ ಕಾರಣ ಈಗಾಗಲೇ ಸಿನಿಮಾ ಬಿಡುಗಡೆಯನ್ನು ಘೋಷಿಸಿಕೊಂಡಿರುವ ನಾಲ್ಕು ಕನ್ನಡ ಸಿನಿಮಾಗಳಿಗೆ ತೊಂದರೆಯಾಗಬಾರದು ಎಂಬುದಾಗಿದೆ,’ ಎಂದರು.

Advertisement

ಪ್ರದರ್ಶನಕ್ಕೆ ಪರ್ಯಾಯ ವ್ಯವಸ್ಥೆ: ಏಕಾಏಕಿ ಪ್ರದರ್ಶನ ನಿಲ್ಲಿಸಿಬಿಟ್ಟರೆ ನಿರ್ಮಾಪಕನಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಾವು ಒಂದು ವಾರ ಮುಂದಕ್ಕೆ ಹಾಕಿದ್ದೇವೆ. ಆದರೆ ಬೇರೆ ರಾಜ್ಯಗಳಲ್ಲಿ ಇಂದಿನಿಂದಲೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಆದರೆ, ಮಾ.9ರಿಂದ ಯಾವುದೇ ಹೊಸ ಕನ್ನಡ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ.

ಈಗಾಗಲೇ ಯುಎಫ್ಒ-ಕ್ಯೂಬ್‌ ಜತೆ ನಡೆದ ಸಭೆಗಳು ವಿಫ‌ಲವಾಗಿದ್ದು, ನಾವು ಈಗಿನ ವೆಚ್ಚದಲ್ಲಿ ಶೇ.25ರಷ್ಟು ಕಡಿಮೆ ಮಾಡಿ ಎಂಬ ಬೇಡಿಕೆ ಇಟ್ಟರೂ, ಅವರು ಕೇವಲ ಶೇ.9ರಷ್ಟು ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಅವರು ನಮ್ಮ ಬೇಡಿಕೆಗೆ ಒಪ್ಪುವವರೆಗೆ ಅವರೊಂದಿಗೆ ವ್ಯವಹಾರ ನಡೆಸುವುದಿಲ್ಲ. ಒಂದು ವೇಳೆ ಅವರ ಒಪ್ಪದೇ ಇದ್ದರೆ ಸಿನಿಮಾ ಪ್ರದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಬಿಡುಗಡೆಗೆ ಸಿದ್ಧತೆ ಬೇಡ: ಸಿನಿಮಾ ಪ್ರದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಅನೇಕ ಸಂಸ್ಥೆಗಳು ಮುಂದೆ ಬಂದಿವೆ. ಹಾಗಾಗಿ, ಮುಂದಿನ ವಾರ ಯಾವುದೇ ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳ ಬಿಡುಗಡೆಗೆ ತಯಾರಿ ಮಾಡಿಕೊಳ್ಳಬಾರದು. ಈ ಬಿಕ್ಕಟ್ಟು ಪರಿಹಾರವಾದ ನಂತರ ಚಿತ್ರ ಬಿಡುಗಡೆ ಮಾಡಬೇಕು,’ ಎಂದು ಸಾ.ರಾ.ಗೋವಿಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next