ಕಾಸರಗೋಡು: ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾಕರುಳ್ಳ ಪ್ರದೇಶಗಳಲ್ಲಿರುವ ಸರಕಾರಿ ಕಚೇರಿಗಳಲ್ಲಿ ಕನ್ನಡ ಮತ್ತು ತಮಿಳು ಭಾಷೆ ಬಲ್ಲವರನ್ನು ನೇಮಿಸಬೇಕೆಂದು ಭಾಷಾ ಅಲ್ಪಸಂಖ್ಯಾಕರು ಅನುಭವಿಸುತ್ತಿರುವ ಸಮಸ್ಯೆಗಳ ಅಧ್ಯಯನ ಸಮಿತಿ ಕೇರಳ ಸರಕಾರಕ್ಕೆ ಶಿಫಾರಸು ಮಾಡಿದೆ.
ಕೇರಳದ ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿ ಭಾಷಾ ಅಲ್ಪಸಂಖ್ಯಾಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ಸರಕಾರ ನೇಮಿಸಿದ ಭಾಷಾ ಅಲ್ಪಸಂಖ್ಯಾಕ ಅಧ್ಯಯನ ಸಮಿತಿ ತನ್ನ ವರದಿಯಲ್ಲಿ ಭಾಷಾ ಸಮಸ್ಯೆಯಿಂದಾಗಿ ಭಾಷಾ ಅಲ್ಪಸಂಖ್ಯಾಕರು ಸಂವಿಧಾನಬದ್ಧವಾಗಿ ಲಭಿಸಬೇಕಾದ ಎಲ್ಲ ಸವಲತ್ತುಗಳಿಂದಲೂ ವಂಚಿತರಾಗುತ್ತಿದ್ದಾರೆ. ಅಲ್ಲದೆ ಸೌಲಭ್ಯ ವಿತರಣೆಯಲ್ಲೂ ವಿಳಂಬವಾಗುತ್ತಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಯಥಾ ಸ್ಥಿತಿ ಸಂರಕ್ಷಿಸಬೇಕು, ಭಾಷಾ ಅಲ್ಪಸಂಖ್ಯಾಕರಿಗೆ ಕೊಡಮಾಡಿದ ಎಲ್ಲ ಸವಲತ್ತುಗಳನ್ನು ನೀಡಬೇಕೆಂದು ಹೇಳಿದೆ.
ಭಾಷಾ ಅಲ್ಪಸಂಖ್ಯಾಕರು 1950ಕ್ಕೆ ಮುನ್ನವೇ ಕೇರಳದಲ್ಲಿ ವಾಸಿಸಲು ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸುವ ದಾಖಲೆಗಳು ಬೇಕಾಗಿರುವುದರಿಂದ ವಿವಿಧ ಸರ್ಟಿಫಿಕೆಟ್‌ಗಳು ಲಭಿಸಲು ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಕಾಲಾವಧಿಯನ್ನು 1950ಕ್ಕೆ ಬದಲಾಗಿ 1970ಕ್ಕೆ ಬದಲಾಯಿಸಬೇಕೆಂದು ಶಿಫಾರಸು ಮಾಡಿದೆ.
ತುಳು ಭಾಷೆ ಮಾತನಾಡುವವರನ್ನು ಭಾಷಾ ಅಲ್ಪಸಂಖ್ಯಾಕ ವಿಭಾಗದಲ್ಲಿ ಸೇರ್ಪಡೆ ಗೊಳಿಸದಿರುವುದರಿಂದ ಅವರಿಗೆ ಪ್ರತ್ಯೇಕ ಸವಲತ್ತುಗಳನ್ನು ನೀಡಬೇಕು. ಅಲ್ಪಸಂಖ್ಯಾಕ ಭಾಷೆ ಮಾತನಾಡುವ ಜನರಿರುವ ಪ್ರದೇಶಗಳ ಸರಕಾರಿ ಕಚೇರಿಗಳ ನಾಮ ಫಲಕಗಳಲ್ಲಿ ಅಂತಹ ಭಾಷೆಗಳನ್ನು ಸೇರ್ಪಡೆಗೊಳಿಸಬೇಕು. ಎಲ್ಲ ಅರ್ಜಿ ನಮೂನೆಗಳು, ಕೈಪಿಡಿಗಳು ಭಾಷಾ ಅಲ್ಪಸಂಖ್ಯಾಕ ಭಾಷೆಗಳಲ್ಲೂ ಲಭಿಸಬೇಕು.
ಅಧ್ಯಾಪಕರ ಅರ್ಹತೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ, ಪ್ಲಸ್ ವನ್, ಪ್ಲಸ್ ಟು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಕನ್ನಡ, ತಮಿಳು ಭಾಷೆಗಳಲ್ಲೂ ನೀಡಬೇಕು. ಸರಕಾರಿ ವೆಬ್‌ಸೈಟ್‌ಗಳಲ್ಲೂ ಈ ಭಾಷೆಗಳನ್ನು ಸೇರ್ಪಡೆಗೊಳಿಸಬೇಕು. ಕೊಂಕಣಿ ಭಾಷೆಯನ್ನು ಅಲ್ಪಸಂಖ್ಯಾಕ ಭಾಷೆಯಾಗಿ ಪರಿಗಣಿಸಬೇಕು ಮೊದಲಾದವು ಸರಕಾರಕ್ಕೆ ಸಲ್ಲಿಸಿದ ಶಿಫಾರಸಿನಲ್ಲಿದೆ. ಭಾಷಾ ಅಲ್ಪಸಂಖ್ಯಾಕ ಸ್ಪೆಷಲ್ ಆಫೀಸರ್ ಡಾ| ನಡುವಟ್ಟಂ ಗೋಪಾಲಕೃಷ್ಣನ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ವರದಿಯನ್ನು ಸಲ್ಲಿಸಿದ್ದಾರೆ.