Advertisement

ಸಾಹಿತಿಗಳ ಹುಟ್ಟೂರಿನಲ್ಲಿ ಕನ್ನಡ ಭವನ

11:56 AM Jun 20, 2018 | Team Udayavani |

ಬೆಂಗಳೂರು: ನಾಡಿನ ಹೆಸರಾಂತ ಸಾಹಿತಿಗಳ ಹುಟ್ಟೂರಿನಲ್ಲೇ ಕನ್ನಡ ಭವನ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್‌ ನಿರ್ಧರಿಸಿದ್ದು, ಆರಂಭಿಕ ಹಂತದಲ್ಲಿ ಅಕ್ಕಮಹಾದೇವಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಊರಿನಲ್ಲಿ ಭವನ ತಲೆಎತ್ತಲಿದೆ.

Advertisement

ವಚನಗಾರ್ತಿ ಅಕ್ಕಮಹಾದೇವಿ ಅವರ ತವರೂರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡತಡಿ ಮತ್ತು ಡಾ.ಚಂದ್ರಶೇಖರ ಕಂಬಾರರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಘೋಡಿಗೇರಿಯಲ್ಲಿ ಕನ್ನಡ ಭವನ ನಿರ್ಮಿಸಲು ನಿರ್ಧರಿಸಿದ್ದು, ಭವನ ನಿರ್ಮಾಣಕ್ಕಾಗಿ ಕಸಾಪ ಹಲವು ಸಾಹಿತಿಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ ಆರ್ಥಿಕ ಸಹಾಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಹಿಂದಿನ ಸರ್ಕಾರ, ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ 20 ಲಕ್ಷ ರೂ. ನೆರವು ನೀಡಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಹಿತಿಗಳ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೆಸರಿನಲ್ಲಿ ಜಮೀನು ಪಡೆದ ನಂತರ ಭವನಗಳ ನಿರ್ಮಾಣ ಕಾರ್ಯ ನಡೆಯಲಿದೆ.

ಮುಂದಿನ ಪೀಳಿಗೆಗೆ ತಮ್ಮೂರಿನ ಸಾಹಿತಿಗಳ ಕೊಡುಗೆ ತಿಳಿಸುವ ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಸಾಹಿತ್ಯ ಪರಿಷತ್ತು ಮುಂದಾಗಿದೆ. ಈ ಕನ್ನಡ ಭವನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಕಮ್ಮಟ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಭವನದಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು, ಕಥೆ, ಕಾದಂಬರಿ, ನಾಟಕ ಮತ್ತು ಸಂಶೋಧನಾ ಕೃತಿಗಳ ದೊರೆಯಲಿವೆ.

ಭವನದ ನಿರ್ವಹಣೆಯನ್ನು ಆಯಾ ಜಿಲ್ಲಾ ಸಾಹಿತ್ಯ ಪರಿಷತ್ತು ನೋಡಿಕೊಳ್ಳಲಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್‌ ತಿಳಿಸಿದ್ದಾರೆ. ವಿದೇಶಗಳಲ್ಲಿ ಸಾಹಿತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಿಸಿರುವ ಉದಾಹರಣೆಗಳಿವೆ.ಇದೀಗ ಸಾಹಿತ್ಯ ಪರಿಷತ್ತು, ಇಂತಹ ಪರಂಪರೆಗೆ ಮುನ್ನುಡಿಯನ್ನು ಬರೆದಿದೆ.

Advertisement

ಹೋರಾಡಿದವರ ಊರಲ್ಲೂ ಭವನ: ದೇಶ‌ಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ನಾಡಿನ ಹಲವು ಮಂದಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದಾರೆ. ಅವರನ್ನೂ ನೆನೆಯುವ ಕಾರ್ಯಕ್ಕೆ ಪರಿಷತ್ತು ಮುಂದಾಗಿದೆ. ಬ್ರಿಟಿಷರ ವಿರುದ್ಧ ಸೆಣಸಾಟ ನಡೆಸಿ ವೀರ ಮರಣವನ್ನಪ್ಪಿದ ಸೇನಾನಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಭವನ ನಿರ್ಮಿಸುವ ಆಲೋಚನೆ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿದೆ.

ಅಲ್ಲದೆ ಕನ್ನಡ ನೆಲ-ಜಲಕ್ಕಾಗಿ ಹೋರಾಟ ನಡೆಸಿದವರ ತವರೂರಿನಲ್ಲೂ ಕನ್ನಡ ಭವನಗಳನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಬಗ್ಗೆ ಪರಿಷತ್ತಿನ ಕಾರ್ಯಕಾರಿಣಿಯಲ್ಲೂ ಚರ್ಚೆನಡೆದಿದೆ. ಮುಂದಿನ ದಿನಗಳಲ್ಲಿ ಇವುಗಳ ನಿರ್ಮಾಣ ಕಾರ್ಯ ಕೂಡ ನಡೆಯಲಿದೆ.

ಕನ್ನಡದ ಖ್ಯಾತ ಸಾಹಿತಿಗಳ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸುವ ಕಸಾಪದ ಯೋಜನೆ ಪ್ರಶಂಸನೀಯ. ಕನ್ನಡ ಸಾರಸ್ವತ ಲೋಕದಲ್ಲಿ ಈ ಪ್ರಯತ್ನ ನಡೆದಿರುವುದು ಖುಷಿ ತಂದಿದೆ
-ಕುಂ.ವೀರಭದ್ರಪ್ಪ, ಕಾದಂಬರಿಕಾರ 

Advertisement

Udayavani is now on Telegram. Click here to join our channel and stay updated with the latest news.

Next