ಬೀದರ: ಜಿಲ್ಲಾ ಕೇಂದ್ರ ಬೀದರನಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರ ಪರಿಶ್ರಮದ ಫಲವಾಗಿದೆ ಎಂದು ಕಥೆಗಾರ್ತಿ ಪಾರ್ವತಿ ಸೋನಾರೆ ನುಡಿದರು. ಪರಿಷತ್ ಜಿಲ್ಲಾ ಘಟಕದ ಚುನಾವಣೆ ಪ್ರಯುಕ್ತ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಕನ್ನಡ ಭವನದ ಬಳಿ ಕಸಾಪ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುರೇಶ ಚನಶೆಟ್ಟಿ ಪರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನಗಳು ನಿರ್ಮಾಣಗೊಂಡು ದಶಕಗಳೇ ಕಳೆದಿವೆ. ಬೀದರನಲ್ಲಿ ಮಾತ್ರ ಕನ್ನಡ ಭವನ ಕನಸಾಗಿಯೇ ಉಳಿದುಕೊಂಡಿತ್ತು. ಚನಶೆಟ್ಟಿ ಗಡಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ ನಗರದಲ್ಲಿ ರಾಜ್ಯದಲ್ಲೇ ಮಾದರಿ ಕನ್ನಡ ಭವನ ನಿರ್ಮಾಣವಾಗಲಿದೆ ಎಂದು ತಿಳಿಸಿದರು.ಕನ್ನಡಪರ ಚಟುವಟಿಕೆ ನಡೆಸಿಕೊಂಡು ಹೋಗಲು ಜಿಲ್ಲಾ ಕೇಂದ್ರ ಅಷ್ಟೇ ಅಲ್ಲ; ಜಿಲ್ಲೆಯ ಎಂಟೂ ತಾಲೂಕು ಕೇಂದ್ರಗಳಲ್ಲೂ ಕನ್ನಡ ಭವನಗಳು ನಿರ್ಮಾಣಗೊಳ್ಳಬೇಕಿದೆ.
ಚನಶೆಟ್ಟಿ ನೇತೃತ್ವದ ತಂಡ ಈ ಕೆಲಸ ಮಾಡುವ ಸಂಪೂರ್ಣ ವಿಶ್ವಾಸವಿದೆ. ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಮತದಾರರು ತಂಡದ ಕೈ ಬಲಪಡಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಜಿಯಾ ಬಳಬಟ್ಟಿ ಮನವಿ ಮಾಡಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ ಮಾತನಾಡಿ, ಸುರೇಶ ಅವರು ಕನ್ನಡ ಸಾಹಿತಿಗಳಿಗೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ನೆಲೆ ಹಾಗೂ ಬೆಲೆ ತಂದು ಕೊಡುವ ಕೆಲಸ ನಿರಂತರ ಮಾಡುತ್ತಿದ್ದಾರೆ ಎಂದರು.
ಲೇಖಕಿ ವಿದ್ಯಾವತಿ ಬಲ್ಲೂರ ಮಾತನಾಡಿ, ಜಿಲ್ಲೆಯ ಮಹಿಳಾ ಸಾಹಿತಿಗಳಿಗೆ ಚನಶೆಟ್ಟಿ ಸೂಕ್ತ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಹಾಗೂ ಕನ್ನಡಿಗರ ಒಳಿತಿಗಾಗಿ ಅವರ ಗೆಲುವು ಅನಿವಾರ್ಯ ಎಂದರು. ಈ ವೇಳೆ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ, ಖಜಾಂಚಿ ಟಿ.ಎಂ. ಮಚ್ಚೆ, ತಾಲೂಕಾಧ್ಯಕ್ಷ ಎಂ.ಎಸ್. ಮನೋಹರ, ವೀರಶೆಟ್ಟಿ ಚನಶೆಟ್ಟಿ, ಗಂಗಾಂಬಿಕೆ ಬಿರಾದಾರ, ಧರ್ಮವೀರ ಬಿರಾದಾರ ಇದ್ದರು. ಸಕಲೇಶ್ವರಿ ಚನಶೆಟ್ಟಿ ಸ್ವಾಗತಿಸಿದರು. ಸಾಕ್ಷಿ ಬಿರಾದಾರ ನಿರೂಪಿಸಿದರು. ಸಂಗೀತಾ ಶೆಟಕಾರ ವಂದಿಸಿದರು.