ಬೆಂಗಳೂರು : ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ, ಅವಳ ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಎಂದು ಮೃತ ನಟಿ ಸೌಜನ್ಯಾ(ಸವಿ ಮಾದಪ್ಪ) ಅವರ ಪೋಷಕರು ಹೇಳಿದ್ದಾರೆ.
ಗುರುವಾರ ಮುಂಜಾನೆ ಸವಿ ಮಾದಪ್ಪ ಅವರು ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ನಾಲ್ಕು ದಿನಗಳಲ್ಲಿ ಐದು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಪೋಷಕರಲ್ಲಿ ಕ್ಷಮೆ ಕೋರಿದ್ದಾರೆ. ಹಾಗೂ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.
ಮಗಳ ಸಾವಿನ ಬಗ್ಗೆ ಆಘಾತ ಹಾಗೂ ಅನುಮಾನ ವ್ಯಕ್ತಪಡಿಸಿರುವ ಸವಿ ಮಾದಪ್ಪ ಅವರ ತಂದೆ ಪ್ರಭು ಮಾದಪ್ಪ, ‘ನಮ್ಮ ಮಗಳ ಆತ್ಮಹತ್ಯೆ ಬಗ್ಗೆ ನಮಗೆ ಅನುಮಾನ ಇದೆ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ನಮ್ಮ ಮಗಳು ಫ್ಲ್ಯಾಟ್‌ನಲ್ಲಿ ಒಬ್ಬಳೇ ವಾಸವಿದ್ದಳು. ಮೂರು ದಿನದ ಹಿಂದೆ ಕರೆ ಮಾಡಿ 1 ಲಕ್ಷ ರೂಪಾಯಿ ಕೇಳಿದ್ದಳು. ಏಕೆ ಎಂದು ಪ್ರಶ್ನಿಸಿದ್ದಕ್ಕೆ ಕಮಿಟ್ಮೆಂಟ್ ಇದೆ ಎಂದಿದ್ದಳು. ಇಂದು ಬೆಳಗ್ಗೆಯೂ ಸವಿ ಜತೆ ನನ್ನ ಪತ್ನಿ ರೇಣುಕಾ ಮಾತಾಡಿದ್ದರು. ಇವತ್ತೇ ಊರಿಗೆ ಬರುತ್ತಿದ್ದೇನೆ ಎಂದಿದ್ದಳು. ಮಗಳ ಸಾವಿನ ಕುರಿತು ದೂರು ಕೊಡುತ್ತೇವೆ. ಶವ ಇಳಿಸುವಾಗಲೂ ಸಹ ನಮಗೆ ಮಾಹಿತಿ ನೀಡಿಲ್ಲ’ ಎಂದು ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಚೌಕಟ್ಟು ಹಾಗೂ ಫನ್ ಸಿನಿಮಾದಲ್ಲಿ ನಟಿಸಿದ್ದ ಸವಿ ತನ್ನ ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು ಎನ್ನಲಾಗಿದೆ. ಊಟ ತರುವಂತೆ ವಿವೇಕ್ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.