ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ಗದ್ದೆಯಲ್ಲಿ ಉಳುಮೆ ಮಾಡಿದ್ದಾರೆ. ಹೊಲದಲ್ಲಿ ಯಂತ್ರದ ಸಹಾಯದಿಂದ ಮಣ್ಣನ್ನು ಹದಗೊಳಿಸುತ್ತಿರುವ ವಿಡಿಯೋ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ರೈತ ಮಹಿಳೆಯ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಅವರು ತಮ್ಮ ಹೊಲದಲ್ಲಿ ಉಳಿಮೆ ಮಾಡಿದ್ದಲ್ಲ. ಬದಲಾಗಿ ಸುಲ್ತಾನ್ ಸಿನಿಮಾದಲ್ಲಿಯ ಒಂದು ದೃಶ್ಯಕ್ಕಾಗಿ.
ತಮಿಳು ನಟ ಕಾರ್ತಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಕಾಲಿವುಡ್‍ನ ‘ಸುಲ್ತಾನ್’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಭರ್ಜರಿಯಾಗೆ ನಡೆಯುತ್ತಿದೆ. ಚಿತ್ರದಲ್ಲಿಯ ಒಂದು ಸೀನ್‍ಗಾಗಿ ರಶ್ಮಿಕಾ ರೈತ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ರೈತ ಮಹಿಳೆಯ ವೇಷಭೂಷಣ ಧರಿಸಿದ ರಶ್ಮಿಕಾ, ಗದ್ದೆಗೆ ಇಳಿದು ಭೂಮಿ ಉಳುಮೆ ಮಾಡಿದ್ದಾರೆ. ಈ ದೃಶ್ಯದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಈ ದೃಶ್ಯ ಚಿತ್ರೀಕರಣದ ವೇಳೆ ತಮಗಾದ ಸಂತಸ ಹೇಳಿಕೊಂಡಿದ್ದಾರೆ.
ಇನ್ನು ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿಯೇ ಪಾರುಪತ್ಯೆ ಮೆರೆಯತ್ತಿರುವ ಈ ಚೆಲುವೆ ಅಲ್ಲು ಅರ್ಜುನ್ ಅವರ ‘ಪುಷ್ಪಾ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ.