Advertisement
ತಾಲೂಕಿನ ಸೋಲದೇವನಹಳ್ಳಿಯಲ್ಲಿ (ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು ರಸ್ತೆ) 1 ಎಕರೆಯಲ್ಲಿ ಅಪರೂಪದ ಚಿತ್ರಸಂಪುಟಗಳ ಕಲಾತ್ಮಕವಾದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಒಳ ಆವರಣದ ಸುತ್ತಲೂ ಅಪರೂಪದ 62 ಚಿತ್ರಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕ ರಂಗಮಂದಿರವಿದೆ. ಸಣ್ಣಪುಟ್ಟ ರಂಗ ಪ್ರದರ್ಶನ, ಸಭೆ ಸಮಾರಂಭಕ್ಕೆ ಇಲ್ಲಿ ಅವಕಾಶವಿದೆ. ನೆಲಮಂಗಲ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಈ ಮಂದಿರವಿದ್ದು ನಿತ್ಯ ಮಂದಿರ ವೀಕ್ಷಣೆಗೆ ಬರುವವರಿಗಾಗಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ತೆರೆದಿರುತ್ತದೆ. ವಸತಿ ವ್ಯವಸ್ಥೆಗಾಗಿ ಅಲ್ಲಿಯೇ ಸುಸಜ್ಜಿತ ಎರಡು ಕೊಠಡಿಗಳು ಹಾಗೂ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ ಎಂದು ಡಾ| ಲೀಲಾವತಿ ಪುತ್ರ ನಟ ವಿನೋದ್ರಾಜ್ ವಿವರಿಸಿದ್ದಾರೆ.
ಲೀಲಾವತಿ ಅಮ್ಮನವರು ಯಕ್ಷಗಾನದಲ್ಲಿ ಪಾರಂಗತರು, ಸಂಗೀತ, ಸಾಕು ಪ್ರಾಣಿ ಪ್ರಿಯರು. ಅದಮ್ಯ ಜೀವನ ಪ್ರೀತಿಯ ಲೀಲಮ್ಮರಿಗೆ ಕೃಷಿ ಎಂದರೆ ಪ್ರೀತಿ, ವಿಶೇಷ ತಳಿಗಳ ಪರಿಷ್ಕರಣೆ ನಡೆಸಿದ ಅಮ್ಮನಿಗೆ ಪಶು ಸಂಗೋಪನೆ, ಗ್ರಾಮೀಣ ಪ್ರಕೃತಿ ಮಡಿಲ ಬದುಕು ಆಪ್ಯಾಯಮಾನವಾದದ್ದು. ಅವರ ಆಕಾಂಕ್ಷೆಯಂತೆ ಸೋಲದೇವನಹಳ್ಳಿಯಲ್ಲಿ ಜನ, ಜಾನು ವಾರು ಆಸ್ಪತ್ರೆ ನಿರ್ಮಿಸಿ ಸೇವೆಗೆ ಸಮರ್ಪಿಸಿದ್ದಾರೆ. ಬಡ ಸಣ್ಣಪುಟ್ಟ ಕಲಾವಿದರಿಗೆ ಯಾರ ಗಮನಕ್ಕೂ ಬಾರದೆ ಮಾಸಾಶನದ ರೀತಿಯಲ್ಲಿ ಪ್ರತೀ ತಿಂಗಳು ಸಹಾಯಧನ ಕಳಿಸುತ್ತಾರೆ ವಿನೋದ್ರಾಜ್. ತಮಿಳುನಾಡಿನ ಪುದುಪ್ಯಾಕಂ ಗ್ರಾಮದಲ್ಲಿಯೂ 30 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಅಭಿಮಾನದಿಂದ ಹೇಳುತ್ತ ಅಮ್ಮನ ಋಣ ಸಂದಾಯಕ್ಕೆ ನನಗೆ ಸಿಕ್ಕ ಅವಕಾಶವಿದು ಎಂದರು.