Advertisement
ಲೋಕೇಶ್ ಅವರ ಹಾದಿ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ!ತಮಗೆ ದೊರೆತ ಪಾತ್ರಕ್ಕೆ ತಕ್ಕಂತೆ ನಟಿಸಿ ಅದಕ್ಕೆ ಜೀವ ತುಂಬಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು ಲೋಕೇಶ್. ಕಷ್ಟ, ಕಾರ್ಪಣ್ಯಗಳ ಮೂಲಕ ಹೋರಾಡಿ ಕನ್ನಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿಕೊಂಡಿದ್ದಾರೆ.
ಲೋಕೇಶ್ ಅವರು ತಮ್ಮ 10ನೆಯ ವಯಸ್ಸಿಗೆ ಭಕ್ತ ಪ್ರಹ್ಲಾದನ ಪಾತ್ರ( ಡಾ.ರಾಜ್ ಕುಮಾರ್ ಅಭಿನಯಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾಕ್ಕಿಂತ ಮೊದಲು 1958ರಲ್ಲಿ ಎಚ್ ಎಸ್ ಕೃಷ್ಣಸ್ವಾಮಿ ಹಾಗೂ ಸುಬ್ಬಯ್ಯ ನಾಯ್ಡು ಅವರು ನಿರ್ದೇಶಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿನ ಪಾತ್ರ. ಇದರಲ್ಲಿ ಉದಯ್ ಕುಮಾರ್, ಕೆಎಸ್ ಅಶ್ವತ್ಥ್, ಲೀಲಾವತಿ, ಬಾಲಕ ಲೋಕೇಶ್ ನಟಿಸಿದ್ದರು) ಮಾಡುವ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು.
ರಂಗಭೂಮಿಯಲ್ಲಿ ತಮ್ಮ ನಟನೆಯ ತಾಕತ್ತು ತೋರಿಸಿದ್ದ ಲೋಕೇಶ್ ಅವರು ಚಿತ್ರರಂಗದಲ್ಲಿಯೂ ಅದನ್ನು ಸಾಬೀತುಪಡಿಸಿದ್ದರು. ತಂದೆ ಸುಬ್ಬಯ್ಯ ನಾಯ್ಡು ಅವರು ರಂಗಭೂಮಿಯ ದಿಗ್ಗಜ ಎನ್ನಿಸಿಕೊಂಡಿದ್ದರು. ತಂದೆಯ ನಿಧನದ ನಂತರ ಲೋಕೇಶ್ ಅವರು ನಟರಂಗ ನಾಟಕ ರಂಗ ಕಟ್ಟಿದ್ದರು. ತುಘಲಕ್, ಕಾಕನಕೋಟೆ, ಷಹಜಹಾನ್, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ಮುಂತಾದ ಪ್ರಮುಖ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಗಳಿಸಿದ್ದರು. ಕಾಕನಕೋಟೆ ಸಿನಿಮಾದ ಮೂಲಕ ಲೋಕೇಶ್ ಅವರು ಮತ್ತಷ್ಟು ಜನಪ್ರಿಯಗೊಂಡಿದ್ದರು.
Related Articles
ಲೋಕೇಶ್ ಅವರು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಕಲಿಕೆ ಅವರಿಗೆ ಪ್ರಯಾಸದಾಯಕವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಇಂಜೆಕ್ಷನ್ ಅಂದರೆ ಲೋಕೇಶ್ ಗೆ ಎಲ್ಲಿಲ್ಲದ ಭಯವಿತ್ತಂತೆ. ಕೊನೆಗೆ ಇಂಜಿನಿಯರ್ ಆಗೋದು ಬೇಡ, ಡಾಕ್ಟರ್ ಆಗೋದು ಬೇಡ ಎಂದು ಕಾಲಿಟ್ಟಿದ್ದು ಮತ್ತದೇ ನಟನೆಗೆ! ಅಂತೂ 1958ರಲ್ಲಿ ತೆರೆ ಕಂಡ ಭಕ್ತ ಪ್ರಹ್ಲಾದಲ್ಲಿ ಬಾಲ ನಟನಾಗಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
Advertisement
ನಿನಗಾಗಿ ನಾನು, ದೇವರ ಕಣ್ಣು, ಪರಿವರ್ತನೆ, ಕಾಕನಕೋಟೆ, ವಂಶ ಜ್ಯೋತಿ, ಪರಸಂಗದ ಗೆಂಡೆತಿಮ್ಮ, ಸುಳಿ, ಅದಲು ಬದಲು, ಮುಯ್ಯಿ, ದಾಹ, ಚಂದನದ ಗೊಂಬೆ, ಭಕ್ತ ಸಿರಿಯಾಳ, ಹದ್ದಿನ ಕಣ್ಣು, ಎಲ್ಲಿಂದಲೋ ಬಂದವರು, ಯಾವು ಹೂವು, ಯಾರ ಮುಡಿಗೋ ಹೀಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್ ಅವರು ಪರಭಾಷೆ ಚಿತ್ರಗಳಲ್ಲಿ ನಟಿಸದೇ ಕನ್ನಡ ಚಿತ್ರರಂಗದಲ್ಲಿಯೇ ಭದ್ರವಾಗಿ ನೆಲೆಯೂರಿ ಪ್ರೇಕ್ಷಕರ ಮನಗೆದ್ದಿದ್ದರು.
ಲೋಕೇಶ್ ಅವರ ನಾಟಕದಲ್ಲಿನ ಅದ್ಭುತ ಪಾತ್ರಕ್ಕೆ ಮನಸೋತಿದ್ದ ಗಿರಿಜಾ ಅವರು ಗೆಳತಿಯರಲ್ಲಿ ಪಂಥಕಟ್ಟಿ ಲೋಕೇಶ್ ಅವರನ್ನು ಮಾತನಾಡಿಸಿದ್ದರಂತೆ. ಹೀಗೆ ಬೆಳೆದ ಸ್ನೇಹದಿಂದಾಗಿಯೇ ಕೊನೆಗೆ ಇಬ್ಬರು ಸತಿ, ಪತಿಗಳಾಗಿದ್ದರು. ಹಿರಿಯರ ಒಪ್ಪಗೆಯೊಂದಿಗೆ ಲೋಕೇಶ್ ಹಾಗೂ ಗಿರಿಜಾ ಅವರು ದೇವಸ್ಥಾನವೊಂದರಲ್ಲಿ ಸರಳವಾಗಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಅದೇ ದಿನ ಕಲಾಕ್ಷೇತ್ರದಲ್ಲಿ ಇಬ್ಬರೂ ನಾಟಕದಲ್ಲಿ ಪಾತ್ರ ಮಾಡಿದ್ದರಂತೆ. ಅಲ್ಲಿ ಲೋಕೇಶ್ ಅಪ್ಪ, ಗಿರಿಜಾ ಅವರದ್ದು ಮಗಳ ಪಾತ್ರವಂತೆ. ನಾಟಕದ ಕೊನೆಯ ದೃಶ್ಯದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಳ್ಳುವ ಮೂಲಕ ದಂಪತಿಗಳಾಗುತ್ತಿದ್ದಾರೆ ಎಂದು ಅನೌನ್ಸ್ ಮಾಡಿದ್ದರು!ಶಿಸ್ತು, ಮುಂಗೋಪಿ, ಮೂಡಿಯಾಗಿದ್ದ ಲೋಕೇಶರ ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆ ತಿಮ್ಮ ಹಾಗೂ ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಸೃಜನ್ ಹಾಗೂ ಪೂಜಾ ಲೋಕೇಶ್, ಪತ್ನಿ ಗಿರಿಜಾ ಜೊತೆ ಸಂತೃಪ್ತ ಜೀವನ ನಡೆಸುತ್ತಿದ್ದ ಲೋಕೇಶ್ ಅವರು 2004ರ ಅಕ್ಟೋಬರ್ 14ರಂದು ಇಹಲೋಕ ತ್ಯಜಿಸಿದ್ದರು. ಆದರೂ ಲೋಕೇಶ್ ಅವರ ಪಾತ್ರ ಇಂದಿಗೂ ನಮ್ಮನ್ನು ಕಾಡುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ…