ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 3ರಿಂದ ಭಕ್ತಿ ಸಂಭ್ರಮದಿಂದ ಆಯೋಜಿಸಿದ “ಗರಡಿ ಸಂಭ್ರಮ-150′ ಬುಧವಾರ ಬೆಳಗ್ಗೆ ಸಂಪನ್ನಗೊಂಡಿತು. 5 ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ, ದೈವ-ದೇವರ ಪ್ರಸಾದವನ್ನು ಸ್ವೀಕರಿಸಿದರು.
ಮನೋಜ್ ಶಾಂತಿ ನೇತೃತ್ವದ ತಂಡದ ನಾಗಬ್ರಹ್ಮಮಂಡ ಲೋತ್ಸ ವವು ಮಂಗಳವಾರ ತಡರಾತ್ರಿ 12.30ಕ್ಕೆ ಆರಂಭವಾಗಿ ಬುಧವಾರ ಬೆಳಗ್ಗೆ 5.30ರ ವೇಳೆಗೆ ಸಮಾಪನ ಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ಅತ್ಯಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು.
ನಾಗಬ್ರಹ್ಮಮಂಡಲೋತ್ಸವದಲ್ಲಿ ಮೊದಲ ಬಾರಿಗೆ ಕಾವೂರಿನ ಮನೋಜ್ ಶಾಂತಿ ನಾಗಪಾತ್ರಿ, ಅಭಿಜಿತ್ ಪೂಜಾರಿ ಕೆರೆಕಾಡು, ಅಜಿತ್ ಪೂಜಾರಿ ಕೆರೆಕಾಡು (ಹಾಲಿಟ್ಟು ಸೇವೆ) ನಾಗಕನ್ನಿಕೆಯಾಗಿ ಸೇವೆ ಸಲ್ಲಿಸಲು ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮಂಡಳಿ ಅವಕಾಶ ನೀಡಿರುವುದು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಿತು.
“ಉದಯವಾಣಿ’ ಜತೆಗೆ ಪ್ರತಿಕ್ರಿಯಿ ಸಿದ ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ. ಅವರು, “ಗರಡಿ ಸಂಭ್ರಮ ನಿರೀಕ್ಷೆಗೂ ಮೀರಿ ಬಹು ಯಶಸ್ಸು ಕಂಡಿದೆ. ಕ್ಷೇತ್ರದ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವ-ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ. ಕ್ಷೇತ್ರದ ಆಡಳಿತ ಮಂಡಳಿ, ಸಂಭ್ರಮ ಉತ್ಸವ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾಡಿನ ವಿವಿಧ ಭಾಗದ ಸ್ವಯಂ ಸೇವಕರು ಹಾಗೂ ಸಂಘ ಸಂಸ್ಥೆಯ ಸಹಕಾರದಿಂದ ಈ ಯಶಸ್ಸು ಲಭಿಸಿದೆ’ ಎಂದರು.