ಕಾಣಿಯೂರು : ಮನುಷ್ಯರ ಮಧ್ಯೆ ಬಾಂಧವ್ಯದ ಬೆಸುಗೆ ಇದ್ದಾಗ ಪ್ರೀತಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ ಇದ್ದಾಗ ಯಾವುದೇ ಸಮಸ್ಯೆ ಬರುವುದಿಲ್ಲ. ನಾವು ನಮ್ಮ ಧರ್ಮವನ್ನು ಪ್ರೀತಿಸಿ, ಇತರರ ಧರ್ಮವನ್ನು ಗೌರವಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಶನಿವಾರ ರಾತ್ರಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಡೆದ ಜಾತ್ರೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಿ.ಜೆ. ಚಂದ್ರಕಲಾ ಅರುವಗುತ್ತು, ನ್ಯಾಯವಾದಿ ಇಡ್ಯಡ್ಕ ಮೋಹನ ಗೌಡ, ಕಾಸ್ಪಾಡಿ ಜೋಡುದೈವಗಳ ಮೊಕ್ತೇಸರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಬೈಲುವಾರು ಪಂಗಡದ ಅಧ್ಯಕ್ಷ ಗೌತಮ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ ಸ್ವಾಗತಿಸಿ, ಇಡ್ಯಡ್ಕ ಶಾಲಾ ಮುಖ್ಯಗುರು ಜಯಂತ್ ವೈ. ಕಾರ್ಯಕ್ರಮ ನಿರೂಪಿಸಿದರು.
ಚಾರ್ವಾಕ ಪದ್ಮಶ್ರೀ ಬಿ.ಸಿ. ಮತ್ತು ತಂಡದವರಿಂದ ಮೂಡಿಬಂದ ಚಾರ್ವಾಕ ಶ್ರೀ ಕಪಿಲೇಶ್ವರ ಭಕ್ತಿಗೀತೆಗಳ ಧ್ವನಿಸುರುಳಿಯನ್ನು ಮಾಜಿ ಸಚಿವ ರಮಾನಾಥ ರೈ ಬಿಡುಗಡೆಗೊಳಿಸಿದರು. ಬೆಳಗ್ಗೆ ನಿತ್ಯಬಲಿ, ಮಹಾಪೂಜೆ, ಮಧ್ಯಾಹ್ನ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ, ರಾತ್ರಿ ಜಯಂತ್ ವೈ. ಸಂಯೋಜನೆಯಲ್ಲಿ ಚಾರ್ವಾಕ ಮತ್ತು ಇಡ್ಯಡ್ಕ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಬಳಿಕ ಮಹಾರಂಗಪೂಜೆ, ಉತ್ಸವ ಬಲಿ, ದೇವರ ರಥೋತ್ಸವ, ಅನ್ನಸಂತರ್ಪಣೆ ನಡೆದವು.
ಸೇವಾ ಮನೋಭಾವ ಅಗತ್ಯ
ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ಸೇವಾ ಮನೋಭಾವದಿಂದ ಮುನ್ನಡೆದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬ ಮನುಷ್ಯ ತನ್ನ ಸಂಪಾದನೆಯ ಅಲ್ಪಭಾಗವನ್ನು ದೇವರಿಗೆ ಅರ್ಪಿಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧಾರ್ಮಿಕ ಕೇಂದ್ರಗಳ ಮೂಲಕ ಸಂಸ್ಕೃತಿ ಉಳಿಯಲು ಸಾಧ್ಯವಿದೆ ಎಂದರು.