ಮಂಗಳೂರು : ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಂಜೀವ ಅವರ ಅಪ್ರಾಪ್ತ ವಯಸ್ಸಿನ ಪುತ್ರಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿಯವರು ಜಿಲ್ಲಾ ಹಾಗೂ ಬಂಟ್ವಾಳ ಮಹಿಳಾ ಮೋರ್ಚಾ ತಂಡವು ಶಾಸಕ ರಾಜೇಶ್ ನಾೖಕ್ ಹಾಗೂ ಬಿಜೆಪಿ ಪ್ರಮುಖರ ಜತೆ ಬಾಲಕಿಯ ಮನೆಗೆ ಭೇಟಿ ನೀಡಿದ್ದು ಘಟನೆಯ ಬಗ್ಗೆ ಪೋಷಕರ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದೆ. ಪೋಷಕರು ಹೊರಗೆ ಹೋಗಿದ್ದಾಗ ಘಟನೆ ಸಂಭವಿಸಿದ್ದು ಆತ್ಮಹತ್ಯೆಯ ಬಗ್ಗೆ ಸಂಶಯವಿದೆ. ಅತ್ಯಂತ ಬಡ ಹಾಗೂ ಮುಗ್ದ ಕುಟುಂಬವಾಗಿದ್ದು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದೆ. ಆರೋಪಿಯು ಬಾಲಕಿಗೆ ಆನೇಕ ದಿನಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ ಎಂದರು. ಇದೊಂದು ಲವ್ ಜಿಹಾದ್‌ನ ಭಾಗವಾಗಿದೆ ಎಂದವರು ಆರೋಪಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮನವಿ ನೀಡಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ ಎಂದರು.
ಶಾಸಕರು ಹಾಗೂ ಸ್ಥಳೀಯ ಗ್ರಾ.ಪಂ.ಸದಸ್ಯರು ಕ್ರಮವಹಿಸಿ ಸಂತ್ರಸ್ತ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಹಾಗೂ ಕ್ಷೇಮನಿಧಿಯನ್ನು ಸ್ಥಾಪಿಸಿ ಸಂಘಟನೆಗಳು ಹಾಗೂ ದಾನಿಗಳ ನೆರವಿನೊಂದಿಗೆ ಅವರಿಗೆ ಮನೆ ನಿರ್ಮಾಣ ಮಾಡಿ ನೀಡಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.
ಹದಿಹರೆಯದ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರು ಹಾದಿತಪ್ಪದಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳಾ ಮೋರ್ಚಾ ಕೂಡಾ ಮುಂದಿನ ದಿನಗಳಲ್ಲಿ ತಳಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಧನಲಕ್ಷ್ಮೀ ಗಟ್ಟಿ ಹೇಳಿದರು.
ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಆಶಾ ಡಿಸಿಲ್ವ, ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ, ಕಾರ್ಯದರ್ಶಿ ಭವಾನಿ ಶೆಟ್ಟಿ, ಮಂಗಳೂರು ನಗರ ಮಂಡಲ ಅಧ್ಯಕ್ಷೆ ಪೂರ್ಣಿಮಾ ರಾವ್ ಉಪಸ್ಥಿತರಿದ್ದರು.