ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ತೃತೀಯ ದಿನವಾದ ಜ.16 ರಂದು ಬೆಳಗ್ಗೆ 6 ಉತ್ಸವ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ಬಲಿಯ ಬಳಿಕ ಮಧ್ಯಾಹ್ನ ಕೋಟೆಕ್ಕಾರು ಹಳೆಮನೆ ದಿ| ದೇರಣ್ಣ ರೈ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳಿಂದ ಅನ್ನದಾನ ನಡೆಯಿತು.
ಸಂಜೆ ನಡೆ ತೆರೆದ ಬಳಿಕ ಭಕ್ತರಿಂದ ವಿಶ್ವರೂಪ ದರ್ಶನ ನಡೆಯಿತು. ಬೆಳಗಾವಿ ರಜತ ಕುಲಕರ್ಣಿ ಮತ್ತು ಬಳಗದಿಂದ ಹಿಂದು ಸ್ತಾನಿ ಸಂತವಾಣಿ ಹಾಗೂ ದಾಸವಾಣಿ ಭಕ್ತರನ್ನು ರಂಜಿಸಿತು. ರಾತ್ರಿ ನಡುದೀಪೋ ತ್ಸವ, ದರ್ಶನ ಬಲಿ ಪೂಜೆ ನಡೆಯಿತು.
ಜಾತ್ರಾಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ. ಕ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ರಂಜಿಸಿತು. ವಿವಿಧ ಭಾಷೆಗಳ ಭಜನ್ಸ್ ಭಕ್ತರನ್ನು ಆಕರ್ಷಿಸಿತು. ಸಂಗೀತ ಕಾರ್ಯಕ್ರಮವು ಹರಿವರಾಸನಂನೊಂದಿಗೆ ಕೊನೆಗೊಂಡಿತು. ಪಕ್ಕವಾದ್ಯದಲ್ಲಿ ಆರ್ಗನ್ ಸತ್ಯ ನಾರಾಯಣ ಐಲ, ತಬಲ ಲವ ಐಲ ಮತ್ತು ರಿದಂ ಪೇಡ್‌ನಲ್ಲಿ ರವಿಕಾಂತ್ ಮಾನ್ಯ ಹಾಗೂ ಶಿವಾನಂದ ಉಪ್ಪಳ ಸಹಕರಿಸಿದರು.
ಇಂದಿನ ಕಾರ್ಯಕ್ರಮ
ಜ. 17 ರಂದು ಬೆಳಗ್ಗೆ 6 ಗಂಟೆಗೆ ಉತ್ಸವ ಶ್ರೀ ಭೂತಬಲಿ, 10.30ರಿಂದ ತುಲಾಭಾರ ಸೇವೆ, 12.30ರಿಂದ ಮಹಾಪೂಜೆ, ಅನ್ನದಾನ, ಸಂಜೆ 4 ಗಂಟೆಗೆ ನಡೆ ತೆರೆಯುವುದು. 4.30ಕ್ಕೆ ಭಜನೆ, 6ಗಂಟೆಗೆ ತಾಯಂಬಕ, 6.15ಕ್ಕೆ ಭರತನಾಟ್ಯ, ಸಂಜೆ 6.30ಕ್ಕೆ ದೀಪಾರಾಧನೆ, 9 ಗಂಟೆಗೆ ಶ್ರೀಬಲಿ ಉತ್ಸವ, 9.45ರಿಂದ ವಿಶೇಷ ಬೆಡಿ ಪ್ರದರ್ಶನ, ಮುಂಜಾನೆ 2.45ರಿಂದ ಶಯನ, ಕವಾಟ ಬಂಧನ ನಡೆಯಲಿರುವುದು.