Advertisement

ಕಾಂಞಂಗಾಡು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ

05:16 PM Mar 10, 2018 | Team Udayavani |

ಕಾಸರಗೋಡು: ಮಹತ್ವಾಕಾಂಕ್ಷೆಯ ಯೋಜನೆಯಾದ ಕಾಂಞಂಗಾಡು – ಪಾಣತ್ತೂರು – ಭಾಗಮಂಡಲ – ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಅಂಗವಾಗಿ ಕಾಂಞಂಗಾಡಿನಿಂದ ಪಾಣತ್ತೂರು ವರೆಗಿನ ಸಮಗ್ರ ಸರ್ವೇಗೆ ಚಾಲನೆ ನೀಡಲಾಗಿದೆ.

Advertisement

ಸರ್ವೇಯ ನಿಮಿತ್ತ ಕಾಂಞಂಗಾಡಿನಿಂದ ಪಾಣತ್ತೂರು ತನಕದ ಪ್ರಾಥಮಿಕ ತಪಾಸಣೆ ಈಗಾಗಲೇ ನಡೆದಿದೆ. ಕಾಸರಗೋಡು ಮತ್ತು ಕಾಂಞಂಗಾಡು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂದಿನ ಸರ್ವೇ ಕಾರ್ಯ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸಿ.ಜೆ.ಕೃಷ್ಣನ್‌ ಮತ್ತು ಎಲ್ಲಾ ಕಾಮಗಾರಿಗಳನ್ನು ನಡೆಸುವ ತಮಿಳುನಾಡು ಸೇಲಂನ ಮುಕೇಶ್‌ ಆ್ಯಂಡ್‌ ಕಂಪೆನಿಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್‌ ಎಂ. ಮಣಿಕಂಠನ್‌, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾಂಞಂಗಾಡು ಸೆಕ್ಷನ್‌ ಸಹಾಯಕ ಎಂಜಿನಿಯರ್‌ ಕೆ. ರಾಜೀವನ್‌ ಅವರು ಸಹಿತವಿರುವ ತಂಡದ ನೇತೃತ್ವದಲ್ಲಿ ಸರ್ವೇ ಆರಂಭಗೊಂಡಿದೆ. 25 ಮಂದಿಯನ್ನು ಒಳಗೊಂಡ ತಂಡವು ಸರ್ವೇ ನಡೆಸುತ್ತಿದೆ.

ಜಿಲ್ಲೆಯ ಮೂಲಕ ಹಾದುಹೋಗುವ 44 ಕಿಲೋ ಮೀಟರ್‌ ಭಾಗದ ಸರ್ವೇ ಮೇ ತಿಂಗಳೊಳಗೆ ಪೂರ್ಣಗೊಳಿಸಿ ಕೇಂದ್ರ ಸಚಿವಾಲಯದ ಅಂಗೀಕಾರಕ್ಕೆ ಕಳುಹಿಸಲಾಗುವುದು. ವಾಹನ ಸಾಂದ್ರತೆ, ಮಣ್ಣಿನ ರಚನೆ, ಎತ್ತರ ತಗ್ಗು, ತಿರುವುಗಳು, ಸೇತುವೆಗಳ ಸಂಖ್ಯೆ, ಕಟ್ಟಡಗಳು, ಆರಾಧನಾಲಯಗಳು, ಜನಸಂಖ್ಯೆ, ವ್ಯಾಪಾರ ಸಂಸ್ಥೆಗಳು ಮೊದಲಾದವುಗಳನ್ನು ತಂಡವು ಪರಿಶೀಲಿಸಲಿದೆ. ಸರ್ವೇ ಕಾರ್ಯ ಪೂರ್ತಿಯಾದ ಬಳಿಕ ಒಂದು ತಿಂಗಳೊಳಗೆ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಸಾಧ್ಯತಾ ವರದಿಯನ್ನು ಸಲ್ಲಿಸಲಾಗುವುದು.

ತಿರುವುಗಳು, ಎತ್ತರ ತಗ್ಗುಗಳನ್ನು ಕಡಿಮೆ ಮಾಡಿ ಈಗಿರುವ ರಸ್ತೆ ಪ್ರದೇಶದ ಮೂಲಕ ಹಾದು ಹೋಗುವ ರೀತಿಯಲ್ಲಿ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಗತ್ಯವಿರುವ ಸ್ಥಳವನ್ನು ಕೇರಳ ಸರಕಾರವು ಸ್ವಾಧೀನಪಡಿಸಿ ನೀಡಬೇಕಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪೂರ್ತಿಯಾಗುವುದರೊಂದಿಗೆ ಕಾಞಂಗಾಡಿನಿಂದ ಮಲೆನಾಡು ಮುಖಾಂತರ ಮಡಿಕೇರಿಗಿರುವ ದೂರ ವ್ಯಾಪ್ತಿ ಅತ್ಯಂತ ಕಡಿಮೆಯಾಗಲಿದೆ.

Advertisement

ಜನದಟ್ಟಣೆ ಹೆಚ್ಚಿರುವ ಮೈಸೂರು, ಬೆಂಗಳೂರು, ಚೆನ್ನೈ, ಹೈದರಾಬಾದ್‌ ಮುಂತಾದ ಪ್ರಧಾನ ನಗರಗಳಿಗೆ ಸುಲಭದಲ್ಲಿ ತಲುಪುವ ಸೌಕರ್ಯ ಕಲ್ಪಿಸಲಾಗುವುದು. ಆದಿವಾಸಿ ಜನಾಂಗದವರೇ ಹೆಚ್ಚಿರುವ ಮಲೆನಾಡಿನ ದಕ್ಷಿಣ ಭಾಗದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯು ಈ ಸಮುದಾಯದ ಪ್ರಗತಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಸರ್ವೇ ಕಾರ್ಯಕ್ಕಾಗಿ ಎರಡೂವರೆ ಕೋಟಿ ರೂ. ಗಳನ್ನು ಮಂಜೂರು ಮಾಡಲಾಗಿದೆ.

ಕಾಂಞಂಗಾಡು – ಪಾಣತ್ತೂರು ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಿಂದ 2017ನೇ ಎಪ್ರಿಲ್‌ 19ರಂದು ಸಹಾಯಕ ಎಂಜಿನಿಯರ್‌ ಸಿ.ಜೆ. ಕೃಷ್ಣನ್‌ ನೇತೃತ್ವ ದಲ್ಲಿ ಕಾಂಞಂಗಾಡು – ಕೋಟಚ್ಚೇರಿ ಸರ್ಕಲ್‌ನಿಂದ ಪಾಣತ್ತೂರು ವರೆಗೆ ಪ್ರಾಥಮಿಕ ಸರ್ವೇ ನಡೆಸಿ ಮೇ 16ರಂದು ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಮೊದಲ ಹಂತ ಶೀಘ್ರ ಪೂರ್ತಿಗೊಂಡಿತ್ತಾದರೂ ಹೆಚ್ಚಿನ ಕಾಲಾವಕಾಶ ಬೇಕಾಗಿ ಬಂದುದು ಸರ್ವೇ ವಿಳಂಬಗೊಳ್ಳಲು ಕಾರಣವಾಯಿತು.

ಕೇರಳ – ಕರ್ನಾಟಕ ರಾಜ್ಯಗಳನ್ನು ಜೋಡಿಸಿ ಕಾಂಞಂಗಾಡಿನಿಂದ ಮಡಿಕೇರಿ ತನಕ 109 ಕಿಲೋ ಮೀಟರ್‌ನಷ್ಟು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಭಾಗವು ಕರ್ನಾಟಕದಲ್ಲಿ ಟೆಂಡರ್‌ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲಿಲ್ಲ. ಇದರಿಂದಾಗಿ ಹೆದ್ದಾರಿ ಕಾಮಗಾರಿ ಯೋಜನೆಯು ನನೆಗುದಿಗೆ ಬೀಳಬಹುದೆಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ಸರಕಾರದ ಮಂದಗತಿ ನೀತಿ 
ಕರ್ನಾಟಕ ಸರಕಾರದ ಭಾಗದಿಂದ ಮಂದಗತಿಯ ನೀತಿ ರಾಷ್ಟ್ರೀಯ ಹೆದ್ದಾರಿಯ ಶೀಘ್ರ ಕಾಮಗಾರಿಗಳಿಗೆ ಬಾಧಕವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಕೇರಳದಲ್ಲಿ ಸರ್ವೇ ಪ್ರಕ್ರಿಯೆಗಳನ್ನು ಆರಂಭಿಸಿದಾಗ ಕರ್ನಾಟಕದ ಗಡಿ ಪ್ರದೇಶವಾದ ಪಾಣತ್ತೂರಿನಿಂದ ಭಾಗಮಂಡಲ ಮೂಲಕ ಮಡಿಕೇರಿ ತನಕದ ಬಾಕಿ ಪ್ರದೇಶದ ಟೆಂಡರ್‌ ಪ್ರಕ್ರಿಯೆಗಳು ಇದುವರೆಗೆ ಪೂರ್ತಿಗೊಂಡಿಲ್ಲ. ಮೊದಲ ಟೆಂಡರ್‌ ನಲ್ಲಿ ಓರ್ವ ಗುತ್ತಿಗೆದಾರ ಮಾತ್ರ ಇರುವುದರಿಂದ ಅದು ಸಾಧ್ಯವಾಗಿಲ್ಲ. ಮತ್ತೆ ಟೆಂಡರ್‌ ನಡೆಸಲಿರುವ ಅನುಮತಿಗಾಗಿ ಸಲ್ಲಿಸಿದ ಕಡತ ರಾಷ್ಟ್ರೀಯ ಹೆದ್ದಾರಿ ವಿಭಾಗದ ಹೊಸದಿಲ್ಲಿ ಕಚೇರಿಯಲ್ಲಿದೆ. ಅನುಮತಿ ದೊರಕಿದ ಬಳಿಕವಷ್ಟೇ ಮುಂದಿನ ಟೆಂಡರ್‌ ನಡೆಯಬಹುದೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next