Advertisement
ಇನ್ನೂ 4 ವಿಕೆಟ್‌ಗಳನ್ನು ಕೈಲಿರಿಸಿಕೊಂಡಿರುವ ಸ್ಮಿತ್ ಪಡೆ ಸದ್ಯ 48 ರನ್ನುಗಳ ಮುನ್ನಡೆಯಲ್ಲಿದೆ. 25 ರನ್ ಗಳಿಸಿರುವ ಕೀಪರ್ ಮ್ಯಾಥ್ಯೂ ವೇಡ್ ಹಾಗೂ 14 ರನ್ ಮಾಡಿರುವ ಮಿಚೆಲ್ ಸ್ಟಾರ್ಕ್ ಕ್ರೀಸಿನಲ್ಲಿದ್ದಾರೆ. ಆಸೀಸ್ ತನ್ನ ಮೊತ್ತವನ್ನು ಮುನ್ನೂರರ ತನಕ ವಿಸ್ತರಿಸಿದರೂ ಅದು ಇಲ್ಲಿನ “ಟರ್ನಿಂಗ್ ಟ್ರ್ಯಾಕ್’ನಲ್ಲಿ ಟೀಮ್ ಇಂಡಿಯಾಕ್ಕೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಸ್ಟಾರ್ಕ್ ಮುನ್ನುಗ್ಗಿ ಬಾರಿಸುವ ಛಾತಿ ಹೊಂದಿರುವುದರಿಂದ, ಸೋಮವಾರ ಮೊದಲ ಅವಧಿಯಲ್ಲೇ, ಹೆಚ್ಚು ರನ್ ನೀಡದೆ ಕಾಂಗರೂ ಬಾಲ ಕತ್ತರಿಸಿದರಷ್ಟೇ ಟೀಮ್ ಇಂಡಿಯಾ ಉಳಿವಿನ ಪ್ರಯತ್ನ ಆರಂಭಿಸಬಹುದು.
Related Articles
ವಿಕೆಟ್ ನಷ್ಟವಿಲ್ಲದೆ 40 ರನ್ ಮಾಡಿದಲ್ಲಿಂದ ರವಿವಾರದ ಆಟ ಆರಂಭಿಸಿದ ಆಸ್ಟ್ರೇಲಿಯ, ಯಾವ ಹಂತದಲ್ಲೂ ಅವಸರದ ಬ್ಯಾಟಿಂಗ್ ತೋರ್ಪಡಿಸಲಿಲ್ಲ. ಸ್ಪಿನ್ನರ್‌ಗಳಿಗೆ ಸಿಕ್ಕಾಪಟ್ಟೆ ನೆರವು ನೀಡುವ ಈ ಪಿಚ್‌ನಲ್ಲಿ ಎಚ್ಚರಿಕೆ, ತಾಳ್ಮೆ, ಏಕಾಗ್ರತೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಬ್ಯಾಟಿಂಗ್ ನಡೆಸುತ್ತ ಹೋಯಿತು. 90 ಓವರ್‌ಗಳ ಇಡೀ ದಿನದಾಟದಲ್ಲಿ ಆಸ್ಟ್ರೇಲಿಯ ಗಳಿಸಿದ್ದು ಕೇವಲ 197 ರನ್ ಮಾತ್ರ. ತಂಡದ ಒಟ್ಟು ಮೊತ್ತವಾದ 237 ರನ್ 106 ಓವರ್‌ಗಳಿಂದ ಬಂದಿರುವುದು ಪ್ರವಾಸಿಗರ ಬ್ಯಾಟಿಂಗ್ ಗತಿಗೆ ಕನ್ನಡಿ ಹಿಡಿಯುತ್ತದೆ. ಸರಾಸರಿ ಕೇವಲ 2.23.
Advertisement
ಭಾರತದ ಸ್ಪಿನ್ ದಾಳಿ ಕೂಡ ಹರಿತವಾಗಿಯೇ ಇತ್ತು. ಅಶ್ವಿನ್-ಜಡೇಜ ಜೋಡಿ ಅಡಿಗಡಿಗೂ ಅಗ್ನಿ ಪರೀಕ್ಷೆಯನ್ನೊಡ್ಡುತ್ತ ಹೋಯಿತು. ಆದರೆ ಆಸೀಸ್ ಕ್ರಿಕೆಟಿಗರು ಭಾರತದವರಂತೆ ಯಾವ ಹಂತದಲ್ಲೂ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ. ಮುನ್ನುಗ್ಗಿ ಬಾರಿಸಿ ಎಡವಟ್ಟು ಮಾಡಿ ಕೊಳ್ಳಲಿಲ್ಲ. “ರನ್ ಬೇಕಾದರೆ ನಿಧಾನವಾಗಿ ಬರಲಿ, ವಿಕೆಟ್ ಮಾತ್ರ ಕೈಯಲ್ಲಿರಲಿ’ ಎಂಬ ಕಾರ್ಯ ತಂತ್ರದಲ್ಲಿ ಕಾಂಗರೂ ಟೀಮ್ ಧಾರಾಳ ಯಶಸ್ಸು ಕಂಡಿತು.
ಆಮೆಗತಿಯಲ್ಲಿ ಸಾಗಿದ ಆಟಒಬ್ಬೊಬ್ಬ ಆಟಗಾರ ಎದುರಿಸಿದ ಎಸೆತಗಳೇ ಆಸ್ಟ್ರೇಲಿಯ ಇನ್ನಿಂಗ್ಸಿನ ಕತೆಯನ್ನು ಸಾರುತ್ತದೆ. ಸದಾ ಮುನ್ನುಗ್ಗಿ ಬೀಸುವ ವಾರ್ನರ್ 33 ರನ್ನಿಗೆ 67 ಎಸೆತ, ರೆನ್‌ಶಾ 60 ರನ್ನಿಗೆ 196 ಎಸೆತ, ಸ್ಮಿತ್ ಕೇವಲ 8 ರನ್ನಿಗೆ 52 ಎಸೆತ, ಶಾನ್ ಮಾರ್ಷ್ 66 ರನ್ನಿಗೆ 197 ಎಸೆತ, ವೇಡ್ ಅಜೇಯ 25 ರನ್ನಿಗೆ 68 ಎಸೆತ… ಹೀಗೆ ಆಮೆಗತಿಯಲ್ಲಿ ಸಾಗುತ್ತದೆ ಆಸೀಸ್ ಬ್ಯಾಟಿಂಗ್ ಬಂಡಿ. ಭಾರತ ಮತ್ತು ಆಸ್ಟ್ರೇಲಿಯ ಇನ್ನಿಂಗ್ಸ್‌ಗಳಲ್ಲಿ ಈ ವರೆಗೆ ಸಮಾನ ಸಂಖ್ಯೆಯ 18 ಬೌಂಡರಿಗಳು ದಾಖಲಾಗಿವೆ. ಈವರೆಗಿನ ಏಕೈಕ ಸಿಕ್ಸರ್ ರೆನ್‌ಶಾ ಬ್ಯಾಟಿನಿಂದ ಸಿಡಿದಿದೆ. ಸಿಕ್ಸರ್ ಕೊಟ್ಟವರು ರವೀಂದ್ರ ಜಡೇಜ. ಅವರೇ ದ್ವಿತೀಯ ದಿನದ ಯಶಸ್ವಿ ಬೌಲರ್. ಜಡೇಜ ಸಾಧನೆ 49ಕ್ಕೆ 3 ವಿಕೆಟ್. ಅಶ್ವಿನ್ 41 ಓವರ್ ಎಸೆದರೂ ಒಂದೇ ವಿಕೆಟಿಗೆ ತೃಪ್ತಿಪಡಬೇಕಾಯಿತು. ಉಳಿದೆರಡು ವಿಕೆಟ್ ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ಪಾಲಾಯಿತು. ತೃತೀಯ ಸ್ಪಿನ್ನರ್ ಗೈರಲ್ಲಿ ಸ್ಥಳೀಯ ಆಫ್ ಸ್ಪಿನ್ನರ್ ಕರುಣ್ ನಾಯರ್ ಅವರನ್ನು ದಾಳಿಗಿಳಿಸಿ ಪರಿಣಾಮ ವನ್ನು ಗಮನಿಸಬಹುದಿತ್ತು. ಆದರೆ ನಾಯರ್‌ಗೆ ಲಭಿಸಿದ್ದು ಒಂದೇ ಓವರ್. ಅದೂ ದಿನದ ಕೊನೆಯ ಹಂತದಲ್ಲಿ. ಆಗಲೇ ಭಾರತ ಹೊಸ ಚೆಂಡನ್ನು ಕೈಗತ್ತಿ ಕೊಂಡಿತ್ತು. ಹೊಸ ಚೆಂಡಿನಲ್ಲಿ ಭಾರತಕ್ಕೆ ಸಿಕ್ಕಿದ್ದು ಒಂದೇ ಯಶಸ್ಸು, ಅದು ಶಾನ್ ಮಾರ್ಷ್ ಅವರ “ಬಿಗ್ ವಿಕೆಟ್’ ರೂಪದಲ್ಲಿ ಬಂತು. ಈ ವಿಕೆಟ್ ಉಮೇಶ್ ಯಾದವ್ ಬುಟ್ಟಿಗೆ ಬಿತ್ತು. 200 ರನ್ನಿಗೆ 94 ಓವರ್!
ದಿನದ ಮೊದಲ ಅವಧಿಯ 29 ಓವರ್‌ಗಳಲ್ಲಿ ಆಸ್ಟ್ರೇಲಿಯ ಗಳಿಸಿದ್ದು ಬರೀ 47 ರನ್. ಆಗ ವಾರ್ನರ್ ಮತ್ತು ಸ್ಮಿತ್ ಪೆವಿಲಿಯನ್ ಸೇರಿದ್ದರು. 2ನೇ ಅವಧಿಯ ಆಟದಲ್ಲಿ 35 ಓವರ್ ಎಸೆಯಲಾಯಿತು. ಆಸೀಸ್ ಪೇರಿಸಿದ್ದು 76 ರನ್ ಮಾತ್ರ. ಭಾರತಕ್ಕೆ ಹೆಚ್ಚಿನ ಯಶಸ್ಸು ಲಭಿಸಿದ್ದು ಕೂಡ ಇದೇ ಅವಧಿಯಲ್ಲಿ. ಆಗ ರೆನ್‌ಶಾ, ಹ್ಯಾಂಡ್ಸ್ ಕಾಂಬ್ ಮತ್ತು ಮಿಚೆಲ್ ಮಾರ್ಷ್ ಆಟ ಮುಗಿದಿತ್ತು. ಟೀ ಅವಧಿಯ ಸ್ಕೋರ್ 5ಕ್ಕೆ 163.
ಅಂತಿಮ ಅವಧಿಯಲ್ಲಿ ಶಾನ್ ಮಾರ್ಷ್ ಅಮೋಘ ತಾಳ್ಮೆ ಪ್ರದರ್ಶಿಸಿದರು. 26 ಓವರ್‌ಗಳಿಂದ 74 ರನ್ ಒಟ್ಟುಗೂಡಿತು. ಉರುಳಿದ್ದು ಒಂದೇ ವಿಕೆಟ್.
ಆಸ್ಟ್ರೇಲಿಯ 100 ರನ್ನಿಗೆ 53.4 ಓವರ್, 200 ರನ್ನಿಗೆ 93.5 ಓವರ್ ತೆಗೆದುಕೊಂಡಿತು. ಭುಜದ ಮೇಲೆ ತೇಲಿದ ಚೆಂಡನ್ನು ಬಿಡದೇ ಹಿಡಿದ ಅಶ್ವಿನ್
ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಕ್ಯಾಚೊಂದನ್ನು ಪಡೆದರು. ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯದ ಪೀಟರ್ ಹ್ಯಾಂಡ್ಸ್‌ಕಾಂಬ್ ಚೆಂಡನ್ನು ಮಿಡ್ ವಿಕೆಟ್‌ನತ್ತ ಬಾರಿಸಿದ್ದರು. ಬಹು ಎತ್ತರದಲ್ಲಿ ಸಾಗುತ್ತಿದ್ದ ಚೆಂಡನ್ನು ಅಶ್ವಿನ್ ನೆಗೆದು ಕೈಗೆ ಪಡೆದು ನೆಲಕ್ಕೆ ಬಿದ್ದರು. ಬಿದ್ದಾಗ ಚೆಂಡು ಅಶ್ವಿನ್ ಕೈತಪ್ಪಿ ಬಲಗೈ ಭುಜದ ಮೇಲೆ ಹರಿದಾಡಿ ಸ್ವಲ್ಪ ಎತ್ತರಕ್ಕೆ ಚಿಮ್ಮುದೆ. ಆದರೂ ಪಟ್ಟುಬಿಡದೇ ಅಶ್ವಿನ್ ಚೆಂಡನ್ನು ಮತ್ತೆ ಹಿಡಿತಕ್ಕೆ ಪಡೆದರು. ಇದು ಜಡೇಜಗೆ ಸಿಕ್ಕ 3ನೇ ವಿಕೆಟ್ ಆಗಿದೆ. ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 189
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ಡೇವಿಡ್ ವಾರ್ನರ್ ಬಿ ಅಶ್ವಿನ್ 33
ಮ್ಯಾಟ್ ರೆನ್‌ಶಾ ಸ್ಟಂಪ್ಡ್ ಸಾಹಾ ಬಿ ಜಡೇಜ 60
ಸ್ಟೀವ್ ಸ್ಮಿತ್ ಸಿ ಸಾಹಾ ಬಿ ಜಡೇಜ 8
ಶಾನ್ ಮಾರ್ಷ್ ಸಿ ನಾಯರ್ ಬಿ ಯಾದವ್ 66
ಪೀಟರ್ ಹ್ಯಾಂಡ್ಸ್‌ಕಾಂಬ್ ಸಿ ಅಶ್ವಿನ್ ಬಿ ಜಡೇಜ 16
ಮಿಚೆಲ್ ಮಾರ್ಷ್ ಎಲ್‌ಬಿಡಬ್ಲ್ಯು ಇಶಾಂತ್ 0
ಮ್ಯಾಥ್ಯೂ ವೇಡ್ ಬ್ಯಾಟಿಂಗ್ 25
ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ 14 ಇತರ 15
ಒಟ್ಟು (6 ವಿಕೆಟಿಗೆ) 237 ವಿಕೆಟ್ ಪತನ: 1-52, 2-82, 3-134, 4-160, 5-163, 6-220. ಬೌಲಿಂಗ್:
ಇಶಾಂತ್ ಶರ್ಮ 23-6-39-1
ಉಮೇಶ್ ಯಾದವ್ 24-7-57-1
ಆರ್. ಅಶ್ವಿನ್ 41-10-75-1
ರವೀಂದ್ರ ಜಡೇಜ 17-1-49-3
ಕರುಣ್ ನಾಯರ್ 1-0-7-0