Advertisement

ಡ್ರಗ್‌ ನಂಟಿದ್ದರೆ ಸಾಬೀತುಪಡಿಸಿ; ಮುಂಬಯಿ ಪೊಲೀಸರಿಗೆ ಕಂಗನಾ ಸವಾಲು

01:14 AM Sep 09, 2020 | mahesh |

ಮುಂಬಯಿ: “ನನ್ನನ್ನು ಈಗಲೇ ಡ್ರಗ್‌ ಪರೀಕ್ಷೆಗೆ ಒಳಪಡಿಸಿ. ಡ್ರಗ್‌ ಡೀಲರ್‌ಗಳೊಂದಿಗೆ ನಾನು ನಂಟು ಹೊಂದಿರುವುದು ಸಾಬೀತಾ­ದರೆ, ನಾನು ಮುಂಬಯಿ ಬಿಟ್ಟು ತೆರಳುತ್ತೇನೆ.’ ಹೀಗೆಂದು ಮುಂಬಯಿ ಪೊಲೀಸರಿಗೆ ಸವಾಲು ಹಾಕಿರುವುದು ಬಾಲಿವುಡ್‌ ನಟಿ ಕಂಗನಾ ರಣೌತ್‌. ಕಂಗನಾ ಅವರ ಮಾಜಿ ಪ್ರಿಯಕರ ಅಧ್ಯಾಯನ್‌ ಸುಮನ್‌ ಎಂಬ­ವರು ಈ ಹಿಂದೆ ನೀಡಿದ್ದ ಸಂದರ್ಶನ­ವೊಂದರಲ್ಲಿ, ಕಂಗನಾ ಡ್ರಗ್‌ ಸೇವಿಸುತ್ತಾರೆ ಮಾತ್ರವಲ್ಲ ನನಗೂ ಸೇವಿಸುವಂತೆ ಬಲ­ವಂತ­­ಪಡಿಸಿದ್ದರು ಎಂದು ಹೇಳಿದ್ದರು.

Advertisement

ಈ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಶಿವಸೇನೆ ಶಾಸಕ ಸುನೀಲ್‌ ಪ್ರಭು ಮತ್ತು ಪ್ರತಾಪ್‌ ಸರ್‌ನಾಯಕ್‌ ಸರಕಾರವನ್ನು ಮನವಿ ಮಾಡಿದ್ದು, ಅದಕ್ಕೆ ಮಹಾರಾಷ್ಟ್ರ ಸರಕಾರ ಒಪ್ಪಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌, ಡ್ರಗ್‌ ವಿಚಾರ ಸಂಬಂಧ ಕಂಗನಾ ವಿರುದ್ಧ ತನಿಖೆಗೆ ಆದೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂಗನಾ, “ಮುಂಬಯಿ ಪೊಲೀಸರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ದಯ­ವಿಟ್ಟು ನನ್ನ ರಕ್ತದ ಮಾದರಿ ಸಂಗ್ರಹಿಸಿ, ನನ್ನನ್ನು ಡ್ರಗ್‌ ಪರೀಕ್ಷೆಗೆ ಒಳಪಡಿಸಿ. ನನ್ನ ದೂರವಾಣಿ ಕರೆಗಳ ವಿವರಗಳನ್ನೂ ಪಡೆದು, ತನಿಖೆ ನಡೆಸಿ. ನನಗೆ ಯಾರಾದರೂ ಡ್ರಗ್‌ ಡೀಲರ್‌ಗಳೊಂದಿಗೆ ಲಿಂಕ್‌ ಇರುವುದು ಸಾಬೀತು ಮಾಡಿದರೆ, ನಾನು ತಪ್ಪೊಪ್ಪಿಕೊಳ್ಳು­ತ್ತೇನೆ. ಮಾತ್ರವಲ್ಲ, ಆ ಕ್ಷಣದಲ್ಲೇ ಮುಂಬಯಿ ಬಿಟ್ಟು ತೆರಳುತ್ತೇನೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರಕಾರ ಮತ್ತು ಕಂಗನಾ ವಿರುದ್ಧ ಕಳೆದ ಕೆಲವು ದಿನಗಳಿಂದ ನಡೆಯುತ್ತಿ­ರುವ ಜಟಾಪಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಕಂಗನಾ ಅವರು ಸ್ಥಳೀಯಾಡ­ಳಿತದ ಅನುಮತಿ ಪಡೆಯದೇ ಮುಂಬಯಿ ಯಲ್ಲಿ­ರುವ ತಮ್ಮ ಕಚೇರಿಯಲ್ಲಿ 12ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ಕುರಿತ ನೋಟಿಸ್‌ವೊಂದನ್ನು ಕಚೇರಿ ಹೊರಗೆ ಅಂಟಿಸಲಾಗಿದೆ.

“ದೇವರು ನಮ್ಮೊಂದಿಗಿದ್ದಾನೆ’
ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಬಂಧಿಸು­ತ್ತಿದ್ದಂತೆ ಸುಶಾಂತ್‌ ಸಿಂಗ್‌ ಅವರ ಸಹೋದರಿ ಶ್ವೇತಾ ಸಿಂಗ್‌ “ದೇವರು ನಮ್ಮೊಂದಿಗಿ­ದ್ದಾನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ, ಮಂಗಳವಾರ 3ನೇ ದಿನದ ವಿಚಾರಣೆ ವೇಳೆ ಎನ್‌ಸಿಬಿ ಮುಂದೆ ಹಾಜರಾಗಿದ್ದ ರಿಯಾ, ಕಳೆದ ವಾರವಷ್ಟೇ ಬಂಧಿತನಾದ ಸಹೋದರ ಶೋವಿಕ್‌ಗೆ ಮುಖಾ­ಮುಖಿ­ಯಾಗಿದ್ದಾರೆ. ಸೋದರನನ್ನು ನೋಡು­ತ್ತಿದ್ದಂತೆ ರಿಯಾ ಕಣ್ಣೀರಿಟ್ಟಿದ್ದಾರೆ ಎಂದು ಮೂಲ­ಗಳು ಹೇಳಿವೆ.

Advertisement

ಸುಶಾಂತ್‌ ಸೋದರಿ ವಿರುದ್ಧ ಎಫ್ಐಆರ್‌
ಸುಶಾಂತ್‌ರ ಮಾನಸಿಕ ಕಾಯಿಲೆಗೆ ಔಷಧ ನೀಡುವಾಗ ವೈದ್ಯರ ಔಷಧ ಚೀಟಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋ­ಪಿಸಿ ರಿಯಾ ಸಲ್ಲಿಸಿದ್ದ ದೂರಿನ ಮೇರೆಗೆ ಮುಂಬಯಿ ಪೊಲೀಸರು ಸುಶಾಂತ್‌ ಸೋದರಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಸುಶಾಂತ್‌ ಕುಟುಂಬದ ವಕೀಲರು ಈ ಎಫ್ಐಆರ್‌ ಕಾನೂನು­ಬಾಹಿರ ಎಂದಿದ್ದಾರೆ. ಜತೆಗೆ, ಎಫ್ಐಆರ್‌ ವಜಾಕ್ಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಅಥವಾ ರಿಯಾ ವಿರುದ್ಧ ಮಾನಹಾನಿ ಕೇಸ್‌ ದಾಖಲಿ­­ಸಲು ಯೋಚಿಸಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next