ಮುಂಬಯಿ: 2002 ರ ಬಿಲ್ಕಿಸ್ ಬಾನು ಪ್ರಕರಣ ದೇಶದಲ್ಲಿ ಮತ್ತೆ ಸದ್ದು ಮಾಡಿದೆ. ಪ್ರಕರಣದ 11 ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡುವ ಮೂಲಕ ಪ್ರಕರಣ ಮತ್ತೆ ಸದ್ದು ಮಾಡಿದೆ.
ಬಿಲ್ಕಿಸ್ ಬಾನು ಪ್ರಕರಣದ ಚರ್ಚೆ ಸುದ್ದಿಯಲ್ಲಿರುವಾಗಲೇ ಈ ಕುರಿತು ಸಿನಿಮಾರಂಗದಲ್ಲೂ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಬಿಲ್ಕಿಸ್ ಬಾನು ಕುರಿತು ಸಿನಿಮಾ ಮಾಡಲು ಸಿದ್ದರಾಗಿದ್ದಾರೆ ಎಂದಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣ ಸಂಬಂಧ ಇಂಟರ್ ನೆಟ್ ನಲ್ಲಿ ಮತ್ತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆದಿದೆ. ಈ ನಡುವೆ ನೆಟ್ಟಿಗರೊಬ್ಬರು, “ಕಂಗನಾ ಮ್ಯಾಮ್ ಮಹಿಳಾ ಸಬಲೀಕರಣಕ್ಕಾಗಿ ನಿಮ್ಮ ಉತ್ಸಾಹವು ತುಂಬಾ ಪ್ರೋತ್ಸಾಹದಾಯಕವಾಗಿದೆ. ನೀವು ʼಬಿಲ್ಕಿಸ್ ಬಾನುʼ ಕಥೆಯೊಂದಿಗೆ ಶಕ್ತಿಯುತವಾಗಿ ಸಿನಿಮಾವನ್ನು ಮಾಡಬಲ್ಲಿರಾ?” ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಂಗನಾ ಅವರು ತಾವು ಈಗಾಗಲೇ ಈ ಬಗ್ಗೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಸಿದ್ದಪಡಿಸಿದ್ದೇನೆ ಎಂದಿದ್ದಾರೆ.
“ನಾನು ಆ ಕಥೆಯನ್ನು ಸಿನಿಮಾ ಮಾಡಲು ಬಯಸಿದ್ದೇನೆ. ಈ ಕುರಿತ ಸ್ಕ್ರಿಪ್ಟ್ ಕೂಡ ಸಿದ್ದವಾಗಿದೆ. ಮೂರು ವರ್ಷದಿಂದ ನಾನು ಈ ಕಥೆಯ ಬಗ್ಗೆ ಅಧ್ಯಯನ ಮಾಡಿದ್ದೇನೆ. ಆದರೆ ರಾಜಕೀಯ ಪ್ರೇರಿತ ಕಥೆವುಳ್ಳ ಸಿನಿಮಾಗಳನ್ನು ಮಾಡುವುದು ಬೇಡ ಎಂದು ನೆಟ್ ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಮ್ ನನಗೆ ಹೇಳಿವೆ. ಜೀಯೋ ಸ್ಟುಡಿಯೋದವರು ನಾನು ಬಿಜೆಪಿಗೆ ಬೆಂಬಲ ನೀಡುತ್ತಿರುವುದರಿಂದ ನಿಮ್ಮ ಜೊತೆ ನಾವು ಕೆಲಸ ಮಾಡಲ್ಲ ಎಂದಿದ್ದಾರೆ. ಜೀ ಸಂಸ್ಥೆ ವಿಲೀನಗೊಳ್ಳುತ್ತಿದೆ. ಹಾಗಾಗಿ ನನ್ನ ಬಳಿ ಬೇರೆ ಯಾವ ಆಯ್ಕೆಗಳಿವೆ? ಎಂದು ಪ್ರಶ್ನಿಸಿದ್ದಾರೆ.
ಸದ್ಯ ಕಂಗನಾ ರಣಾವತ್ ʼಎಮರ್ಜೆನ್ಸಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ನಿರ್ದೇಶನದ ಜೊತೆ ಇಂದಿರಾ ಗಾಂಧಿಯ ಪಾತ್ರವನ್ನು ಮಾಡುತ್ತಿದ್ದಾರೆ.