ಮುಂಬೈ:ಕಳೆದ ಕೆಲವು ವಾರಗಳಿಂದ ಮಹಾರಾಷ್ಟ್ರ ಸರ್ಕಾರ, ಪೊಲೀಸರ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣೌತ್ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಏತನ್ಮಧ್ಯೆ ಕೇಂದ್ರ ಗೃಹ ಸಚಿವಾಲಯ “ವೈ” ಕೆಟಗರಿಯ ಭದ್ರತೆ ಒದಗಿಸಿರುವುದಾಗಿ ವರದಿ ತಿಳಿಸಿದೆ.
ನಟಿ ಕಂಗನಾ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ನಡುವೆ ಕಳೆದ ಕೆಲವು ದಿನಗಳಿಂದ ವಾಗ್ಯುದ್ಧ ಮುಂದುವರಿದಿದೆ. ಅಲ್ಲದೇ ಕಂಗನಾ ಆಕೆಯ ಹೇಳಿಕೆಗೆ ಸಂಬಂಧಿಸಿ ಮಹಾರಾಷ್ಟ್ರದ ಕ್ಷಮೆ ಕೇಳಿದರಷ್ಟೇ, ನಾನು ನನ್ನ ಹೇಳಿಕೆಗಾಗಿ ಕಂಗನಾ ಬಳಿ ಕ್ಷಮೆ ಕೇಳುತ್ತೇನೆ ಎಂದು ರಾವತ್ ಪ್ರತಿಕ್ರಿಯೆ ನೀಡಿದ್ದರು.
ಸೆಪ್ಟೆಂಬರ್ 9ರಂದು ಕಂಗನಾ ಮುಂಬೈಗೆ ಆಗಮಿಸಲಿದ್ದಾರೆ. ಶಿವಸೇನಾ ಸಂಸದ ರಾವತ್ ಜತೆಗಿನ ಜಟಾಪಟಿ ನಡುವೆಯೇ ಕಂಗನಾಗೆ “ವೈ” ಶ್ರೇಣಿಯ ಭದ್ರತೆ ನೀಡಲಾಗಿದೆ. ವಿಐಪಿಗಳಿಗೆ ನೀಡುವ ವೈ ಕೆಟಗರಿ ಭದ್ರತೆಯಲ್ಲಿ ಕಮಾಂಡೋಗಳು ಸೇರಿದಂತೆ 11 ಮಂದಿ ಭದ್ರತೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಭದ್ರತೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಇಂತಹ ಫ್ಯಾಸಿಸ್ಟ್ ಪಡೆಗಳಿಂದ ರಾಷ್ಟ್ರೀಯವಾದಿ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಅಮಿತ್ ಶಾ ಜೀಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕಂಗನಾ ರಣೌತ್ ಮುಂಬೈ ನಗರಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು, ಇದರಿಂದಾಗಿ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಶಿವಸೇನಾ ಮುಖಂಡರು, ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಗ್ದಾಳಿ ನಡೆಸಿದ್ದರು.
ನಟಿ ಕಂಗನಾ ರಣೌತ್ ಗೆ ಭದ್ರತೆ ನೀಡುವುದಾಗಿ ಭಾನುವಾರ ಹಿಮಾಚಲ ಪ್ರದೇಶ ಸರ್ಕಾರ ಕೂಡಾ ತಿಳಿಸಿದ್ದರು. ಮುಂಬೈ ಭೇಟಿ ನೀಡುವ ವೇಳೆ ಭದ್ರತೆಯನ್ನು ನೀಡುವುದಾಗಿ ಹಿಮಾಚಲ ಮುಖ್ಯಮಂತರಿ ಜೈರಾಮ್ ಠಾಕೂರ್ ತಿಳಿಸಿದ್ದರು.
ವಿವಾದಿತ ಹೇಳಿಕೆಗಾಗಿ ಕಂಗನಾ ವಿರುದ್ದ ಮುಂಬೈನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಅಂಧೇರಿ ಪೊಲೀಸ್ ಠಾಣೆಯಲ್ಲಿ ವಕೀಲ ಅನಿಲ್ ಕಾಶೀಫ್ ಖಾನ್ ದೇಶ್ ಮುಖ್ ಕಂಗನಾ ವಿರುದ್ಧ ದೂರು ನೀಡಿದ್ದರು. ಆಝಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.