ಮುಂಬಯಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ʼತೇಜಸ್ʼ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ನಿರೀಕ್ಷೆಗೆ ತಕ್ಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಸಿನಿಮಾಕ್ಕೆ ನಿರಾಶ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರಣದಿಂದ ಕಂಗನಾ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ.
ಕಂಗನಾ ಇತ್ತೀಚೆಗೆ ರಾವಣ ದಹನವನ್ನು ಮಾಡಿದ್ದರು. ಇದರ ಜೊತೆ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಅವರನ್ನು ಭೇಟಿ ಆಗಿದ್ದರು. ” ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಮತ್ತು ಭಾರತವು ಭಯೋತ್ಪಾದನೆಯ ವಿರುದ್ಧ ತಮ್ಮ ಯುದ್ಧವನ್ನು ನಡೆಸುತ್ತಿವೆ” ಎಂದು ಹೇಳಿದ್ದರು.
ಕಂಗನಾ ಇಸ್ರೇಲ್ ರಾಯಭಾರಿಯನ್ನು ಭೇಟಿ ಆಗಿದ್ದಕ್ಕೆ ನಿರ್ಮಾಪಕಿ ದೀಪಾ ಮೆಹ್ತಾ, ಪ್ರಕಾಶ್ ರಾಜ್ ಸೇರಿದಂತೆ ಕೆಲವರು ಟೀಕಿಸಿದ್ದರು.
ಇದೀಗ ನಟಿ ಕಂಗನಾ ತನ್ನ ʼತೇಜಸ್ʼ ಸಿನಿಮಾಕ್ಕೆ ಪ್ರೇಕ್ಷಕರಿಂದ ಕೇಳಿ ಬರುತ್ತಿರುವ ನಿರಾಶ ಪ್ರತಿಕ್ರಿಯೆ ಕುರಿತು ಮಾತನಾಡಿದ್ದಾರೆ. “ನನ್ನ ತೇಜಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗಿದೆ. ಸಿನಿಮಾವನ್ನು ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿ ಹಾರೈಸಿದ್ದಾರೆ. ಕೋವಿಡ್ ಬಳಿಕ ಹಿಂದಿ ಸಿನಿಮಾರಂಗ ಚೇತರಿಸಿಕೊಂಡಿಲ್ಲ. ಶೇ.99 ರಷ್ಟು ಚಿತ್ರಗಳಿಗೆ ಪ್ರೇಕ್ಷಕರು ಆ ಅವಕಾಶವನ್ನೇ ನೀಡಲ್ಲ. ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್, ಮನೆಯಲ್ಲಿ ಟಿವಿ ಇರುವುದು ಗೊತ್ತಿದೆ. ನೃತ್ಯ, ಜಾನಪದ ಕಲೆಗಳು, ಕುಣಿತ ಮೊದಲಿನಿಂದಲೂ ನಮ್ಮ ನಾಗರಿಕತೆ ಪ್ರಮುಖ ಪ್ರಮುಖ ಭಾಗವಾಗಿದೆ. ಹಿಂದಿ ಪ್ರೇಕ್ಷಕರಿಗೆ ಮುಖ್ಯವಾಗಿ ಮಲ್ಟಿಫ್ಲೆಕ್ಸ್ ಅವರಿಗೆ ನನ್ನ ವಿನಂತಿ ಏನೆಂದರೆ ನಿಮಗೆ ಉರಿ, ಮೇರಿ ಕೋಮ್ ಮತ್ತು ನೀರ್ಜಾ ಸಿನಿಮಾಗಳು ಇಷ್ಟವಾಗಿದ್ದರೆ, ತೇಜಸ್ ಸಿನಿಮಾವನ್ನು ಸಹ ನೀವು ಇಷ್ಟಪಡುತ್ತೀರಿ”ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ಆದರೆ ನಟಿಯ ವಿಡಿಯೋಗೆ ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತಕ್ಕೆ ಇತ್ತೀಚೆಗಷ್ಟೇ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ… ದಯವಿಟ್ಟು ನಿರೀಕ್ಷಿಸಿ .. ಅದು ಪಿಕಪ್ ಆಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಅ.27 ರಂದು ʼತೇಜಸ್ʼ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಇದುವರೆಗೆ 2.5 ಕೋಟಿ ರೂ.ಗಳಿಸಿದೆ.