Advertisement

ಸಿಡಿಲು ಬಡಿದು ವರ್ಷ ಸಂದರೂ ದುರಸ್ತಿಯಾಗದ ಕಂದ್ರಪ್ಪಾಡಿ ಶಾಲೆ

02:32 PM Apr 04, 2019 | Team Udayavani |

ಗುತ್ತಿಗಾರು : ಬಿರುಕು ಬಿಟ್ಟ ಗೋಡೆ, ದುರಸ್ತಿಯಾಗದೇ ಉಳಿದ ಶೌಚಾಲಯಗಳು, ಸುಟ್ಟು ಹೋದ ವೈರಿಂಗ್‌, ಒಟ್ಟಾರೆಯಾಗಿ ಮೂಲ ಸೌಕರ್ಯಗಳೇ ಹಾಳಾಗಿರುವ ಈ ಕಟ್ಟಡದಲ್ಲಿ 2018ರ ಲೋಕಸಭಾ ಚುನಾವಣೆಗೆ ಬೂತ್‌ ನಿರ್ಮಾಣ. ಇದು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಶಾಲೆಯಲ್ಲಿ ಕಂಡುಬರುವ ದೃಶ್ಯ.

Advertisement

ಮೂಲ ಸೌಕರ್ಯಕ್ಕೆ ಧಕ್ಕೆ
ಈ ಶಾಲೆಯ ಕಟ್ಟಡಕ್ಕೆ ಕಳೆದ ವರ್ಷ ಮೇ 29ರಂದು ಗಾಳಿ- ಮಳೆ ಸುರಿದ ಸಂದರ್ಭದಲ್ಲಿ ಸಿಡಿಲು ಹೊಡೆದಿತ್ತು. ಅದರ ತೀವ್ರತೆಗೆ ಕಟ್ಟಡ, ವೈರಿಂಗ್‌, ಶೌಚಾಲಯ ಸಹಿತ ಹಲವು ಸೌಕರ್ಯಗಳಿಗೆ ಧಕ್ಕೆಯಾಗಿವೆ. ಅದೇ ಕಟ್ಟಡದಲ್ಲಿ ವರ್ಷವಿಡೀ ಆತಂಕದಲ್ಲೇ ಪಾಠ ಹೇಳಲಾಗಿದೆ.

ಈಗ ಲೋಕಸಭಾ ಚುನಾವಣೆಗೂ ಬೂತ್‌ ನಿರ್ಮಿಸಲಾಗಿದ್ದು, ಚುನಾವಣೆ ಸಿಬಂದಿ ಕರ್ತವ್ಯ ನಿರ್ವಹಿಸಲು ಅಗತ್ಯ ಸೌಕರ್ಯಗಳನ್ನೂ ಮಾಡಿಕೊಂಡಿಲ್ಲ.

ಮಹಿಳಾ ಸಿಬಂದಿಗೆ ಕಷ್ಟ
ಸಿಡಿಲ ಬಡಿತಕ್ಕೆ ಶಾಲಾ ಶೌಚಾಲಯದ ಬಾಗಿಲುಗಳು ಹಾಳಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಸುಳ್ಯ ವಿಧಾನಸಭಾ ವ್ಯಾಪ್ತಿಯ ಬೂತ್‌ ನಂ. 160 ಮತ್ತು 161ನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬಂದಿ ಶೌಚಾಲಯ ಹಾಗೂ ಇತರ ವ್ಯವಸ್ಥೆಗಳಿಲ್ಲದೆ ತೊಂದರೆ ಅನುಭವಿಸುವ ಸಾಧ್ಯತೆ ಇದೆ.

ವೈರಿಂಗ್‌ ತಾತ್ಕಾಲಿಕ ದುರಸ್ತಿ
ಸಿಡಿಲಿನಿಂದಾಗಿ ಸುಟ್ಟು ಹೋಗಿರುವ ವೈರಿಂಂಗ್‌ ಅನ್ನು ದೇವಚಳ್ಳ ಗ್ರಾ.ಪಂ. ವತಿಯಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಆದರೆ ಕಟ್ಟಡದ ಬಹುತೇಕ ವೈರಿಂಗ್‌ ಇನ್ನೂ ಅಪಾಯಕಾರಿ ಸ್ಥಿತಿಯಲ್ಲೇ ಇದೆ. ಮತ್ತೆ ಮಳೆಗಾಲ ಸಮೀಪಿಸುತ್ತಿದ್ದು, ಆಗಾಗ ಸಂಜೆ ವೇಳೆ ಸಿಡಿಲು, ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನೂ ಕೆಲವು ದಿನ ಶಾಲೆಯೂ ನಡೆಯಲಿದ್ದು, ಅಪಾಯದ ಸಾಧ್ಯತೆ ಇರುವ ಕಾರಣ ತ್ವರಿತವಾಗಿ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಕೃಷ್ಣಪ್ರಸಾದ್‌ ಕೋಲ್ಚಾರು

Advertisement

Udayavani is now on Telegram. Click here to join our channel and stay updated with the latest news.

Next